ಸಿಎಂ ಬೊಮ್ಮಾಯಿ ಅವರು ರೈತರ ಕ್ಷಮೆ ಕೋರಬೇಕು:- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು,ಸೆಪ್ಟಂಬರ್,20.2021(www.justkannada.in):  ‘ದೆಹಲಿಯಲ್ಲಿ ತಮ್ಮ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ‘ಪ್ರಾಯೋಜಿತ ಹೋರಾಟ’ ಎಂಬ ಮುಖ್ಯಮಂತ್ರಿ ಬೊಮ್ಮಾಯಿಯವರ ಹೇಳಿಕೆ ಆಘಾತಕಾರಿ. ಅವರು ಕೂಡಲೇ ರೈತರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಸಿದ್ದಾರೆ.

ವಿಧಾನಸೌಧದ ಬಳಿ ಸೋಮವಾರ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ತಮ್ಮ ಹಕ್ಕಿನ ರಕ್ಷಣೆಗಾಗಿ ಕಳೆದ ಒಂದು ವರ್ಷದಿಂದ ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದು, ಈ ಹೋರಾಟವನ್ನು ಪ್ರಾಯೋಜಿತ ಹೋರಾಟ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಸರಿಯಲ್ಲ. ರೈತರು ಉತ್ತಮ ಉದ್ದೇಶದಿಂದ ಹೋರಾಟ ಮಾಡುತ್ತಿದ್ದು, ಈ ಹೋರಾಟ ಕೇವಲ ಅಲ್ಲಿರುವ ರೈತರ ಹೋರಾಟವಲ್ಲ. ಇದು ಇಡೀ ದೇಶದ ರೈತರಿಗೆ ಸಂಬಂಧಿಸಿದ ಹೋರಾಟ. ಅವರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಈ ಹೋರಾಟಕ್ಕೆ ವಿಶ್ವದ ಅನೇಕ ನಾಯಕರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿದ್ದಾರೆ. ರೈತರ ಹೋರಾಟ ಪ್ರಾಯೋಜಿತ ಆಗಿರುವುದು ನಿಜವೇ ಆಗಿದ್ದರೆ ಯಾರು ಈ ಹೋರಾಟ ಪ್ರಾಯೋಜಿಸುತ್ತಿದ್ದಾರೆ? ಕಾಂಗ್ರೆಸ್, ಬಿಜೆಪಿ ಅಥವಾ ಮತ್ತ್ಯಾರೂ ಕೂಡ ಪ್ರಾಯೋಜಕತ್ವ ನೀಡಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಇದುವರೆಗೂ ಅವರ ಅಳಲು ಕೇಳಿಲ್ಲ, ಯಾಕೆ? ಎಂದು ಪ್ರಶ್ನಿಸಿದರು.

ಬಿಜೆಪಿ ಅವರ ಹೇಳಿಕೆಯಂತೆ ಈ ಹೋರಾಟ ಕಾಂಗ್ರೆಸ್ ಪ್ರಾಯೋಜಿತವಲ್ಲ. ರೈತರು ಸದುದ್ದೇಶದಿಂದ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ದೇಶಾದ್ಯಂತ ರೈತರ ಬೆನ್ನಿಗೆ ನಿಂತಿದ್ದೇವೆ’ ಎಂದು ಡಿಕೆಶಿ ತಿಳಿಸಿದರು.

Key words: CM-Bommai – apologize – farmers-KPCC President -D.K. Shivakumar