ರಾಜ್ಯ ಇಂದು ಇಷ್ಟು ಪ್ರಗತಿ ಸಾಧಿಸುವಲ್ಲಿ ಮೈಸೂರು ಅರಸರ ಕೊಡುಗೆ ಬಹಳಷ್ಟು ಇದೆ- ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು,ಜೂನ್,8,2022(www.justkannada.in): ಬೆಂಗಳೂರಿನ ನಂತರ ಮೈಸೂರಿನಲ್ಲಿ ಹೆಚ್ಚಿನ ಪಜ್ಞಾವಂತರು, ತಜ್ಞರು ಇದ್ದಾರೆ. ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರನ್ನ ನಾವು ನೆನೆಸಿಕೊಳ್ಳಬೇಕು. ರಾಜ್ಯ ಇಂದು ಇಷ್ಟು ಪ್ರಗತಿ ಸಾಧಿಸುವಲ್ಲಿ ಮೈಸೂರು ಅರಸರ ಕೊಡುಗೆ ಬಹಳಷ್ಟು ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಮೈಸೂರಿನ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರಿನ ಆಳರಸರು ದೂರದೃಷ್ಟಿ ಹಾಗೂ ಪ್ರಗತಿಪರ ಚಿಂತನೆ ಉಳ್ಳವರಾಗಿದ್ದರು. ನಾನು ಇತ್ತೀಚೆಗೆ ವಿದೇಶ ಪ್ರವಾಸ ಕೈಗೊಂಡಾಗಲೂ ಇದೇ ಮಾತನ್ನು ಹೇಳಿದ್ದೇನೆ. ಅತಿ ಹೆಚ್ಚು ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳು ಕರ್ನಾಟಕದಲ್ಲಿ ಇವೆ. ನಾಲ್ಕು ಫಾರ್ಚೂನ್ ಕೇಂದ್ರಗಳು ಕರ್ನಾಟಕದಲ್ಲಿ ಇವೆ. ಇದೆಲ್ಲ ಆರಂಭವಾಗಿದ್ದು ಮೈಸೂರಿನಿಂದ. ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ಮೈಸೂರು ನಗರ ಪ್ರಮುಖ ಪಾತ್ರ ವಹಿಸಿದೆ. ಬೆಂಗಳೂರು ನಂತರ ಟೈಪ್ ಟು ಸಿಟಿಗಳಲ್ಲಿ ಮೈಸೂರು ಸಹ ಒಂದಾಗಿದೆ. ಮುಂದಿನ ಕರ್ನಾಟಕದ ಬೆಳವಣಿಗೆಯಲ್ಲಿ ಮೈಸೂರು ಸೇರಿದಂತೆ ಐದು ಮಹಾನಗರಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.

ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಎಲ್ಲ ರಾಜ್ಯಕ್ಕಿಂತ ಕರ್ನಾಟಕ ಮೊದಲು ಜಾರಿಗೊಳಿಸಿದೆ. ಒಂದೆಡೆ ಹೊಸ ಶಿಕ್ಷಣ ನೀತಿ, ಮತ್ತೊಂದೆಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ. ಶಿಕ್ಷಣ ನೀಡುವ ಜೊತೆಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಿಲಾಗ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗ್ತಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದೀಗ ಪ್ರಜ್ಞಾವಂತ ಮತದಾರರು ಹೆಚ್ಚು ಜಾಗೃತರಾಗಿದ್ದಾರೆ. ಕಳೆದ ಚುನಾವಣೆಗೂ ಈ ಬಾರಿಯ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ನಾಲ್ಕು ಜಿಲ್ಲೆಗಳಲ್ಲೂ ಬಿಜೆಪಿ ಅಭ್ಯರ್ಥಿ ಪರವಾದ ಗಾಳಿ ಬೀಸುತ್ತಿದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಹೆಚ್ಚಿನ ಒಲವಿದೆ. ಎಲ್ಲರೂ ಮೈ ವಿ ರವಿಶಂಕರ್ ಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಮೈಸೂರಿನ ಸುತ್ತೂರು ಮಠಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ.

ಮೈಸೂರಿನ ಸುತ್ತೂರು ಮಠಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸುತ್ತೂರು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಸಿಎಂಗೆ ಸುತ್ತೂರು ಮಠದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಶ್ರೀಗಳು ಮತ್ತು ಸಿಎಂ ಬೊಮ್ಮಾಯಿ ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಸುತ್ತೂರು ಮಠದಲ್ಲೇ ಸಿಎಂ ಬೊಮ್ಮಾಯಿ ಭೋಜನ ಸವಿದರು. ಸಿಎಂಗೆ ಸಚಿವ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್ ಸಾಥ್ ನೀಡಿದರು.

Key words:  CM -Basavaraja Bommai-mysore-suttur math