ಕೊಟ್ಟ ಭರವಸೆ ಈಡೇರಿಸಿದ ಸಿಎಂ ಬೊಮ್ಮಾಯಿ: ಬಾಲಕಿಗೆ ಸೈಕಲ್ ಹಸ್ತಾಂತರ.

ಬೆಂಗಳೂರು,ಸೆಪ್ಟಂಬರ್,24,2021(www.justkannada.in):  ಖೇಲೋ ಇಂಡಿಯಾಗೆ ಆಯ್ಕೆಯಾಗಿರುವ ಬಾಲಕಿ ಪವಿತ್ರಾಗೆ ಸಿಎಂ ಬಸವರಾಜ ಬೊಮ್ಮಾಯಿ ಬೈಸಿಕಲ್ ವಿತರಿಸುವ ಮೂಲಕ ಕೊಟ್ಟ ಭರವಸೆಯನ್ನ ಈಡೇರಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿಯ ಪುತ್ರಿ ಪವಿತ್ರಾ ಕುರ್ತಕೋಟಿ, 5 ನೇ ತರಗತಿಗೆ ಸೈಕ್ಲಿಂಗ್ ಕ್ರೀಡೆಯಲ್ಲಿ ಪ್ರವೇಶ ಪಡೆದು ಪ್ರಥಮ ಪಿಯುಸಿ ಗೆ ವಿಡಿಎಫ್‍ಟಿ ಬಾಲಕಿಯರ ಕಾಲೇಜಿನಲ್ಲಿ ಓದುತ್ತಿದ್ದಾರೆ. ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ.  ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪವಿತ್ರ ಅವರಿಗೆ ಮೊದಲಿನಿಂದಲೂ ಸೈಕ್ಲಿಂಗ್‍ನಲ್ಲಿ ಆಸಕ್ತಿ. ಆದರೆ ಗುಣಮಟ್ಟದ ಸೈಕಲ್ ಖರೀದಿಸುವ ಶಕ್ತಿ ಇಲ್ಲ. ದಾನಿಗಳ ಸಹಾಯದಿಂದ ಪವಿತ್ರ ಅವರು ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಾರೆ.

ಈ ಮಧ್ಯೆ  ಸಿಎಂ ಬಸವರಾಜ ಬೊಮ್ಮಾಯಿ ಖಾಸಗಿ ಸುದ್ದಿವಾಹಿನಿಯಲ್ಲಿ ಸಂದರ್ಶನದ ವೇಳೆ ಪವಿತ್ರ ಅವರು ದೂರವಾಣಿಯಲ್ಲಿ ಮಾತನಾಡಿ ಗುಣಮಟ್ಟದ ಸೈಕಲ್‍ ಕೊಡಿಸುವಂತೆ ಮನವಿ ಮಾಡಿದ್ದರು. ಈ ವೇಳೆ ಉತ್ತಮ ಗುಣಮಟ್ಟದ ಸೈಕಲ್ ಕೊಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು.

ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕ್ರೀಡಾ ಇಲಾಖೆ ಹಾಗೂ ಎಂಬೈಸಿ ಗ್ರೂಪ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್‍ ಅನ್ನು ಖರೀದಿಸಿ ಪವಿತ್ರ ಅವರಿಗೆ ಸೈಕಲ್ ನೀಡಿದ್ದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪವಿತ್ರ ಗೆ ಸೈಕಲ್ ಹಸ್ತಾಂತರಿಸಿದರು.

ಆ ಮೂಲಕ ಪವಿತ್ರ ಕನಸು ನನಸುಗೊಳಿಸಿ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ. ಕೆನಡಾದಿಂದ ತರಿಸಿರುವ ಈ ಸೈಕಲ್ ಸುಮಾರು 5 ಲಕ್ಷ ಬೆಲೆಯದ್ದಾಗಿದೆ.

ಪವಿತ್ರ ಅವರು ಸೈಕ್ಲಿಂಗ್ ಸ್ಪರ್ಧೆಯಲ್ಲಿ ಮಾಡಿದ ಸಾಧನೆ ಹೀಗಿದೆ…

2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್‍ ಸೈಕ್ಲಿಂಗ್‍ 15ಕಿ.ಮಿ. ಸ್ಪರ್ಧೆಯಲ್ಲಿ  5ನೇ ಸ್ಥಾನ. 2019ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕಲ್‍ ಸ್ಪರ್ಧೆಯಲ್ಲಿ 9ನೇ ಸ್ಥಾನ. 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂ.ಟಿ.ಬಿ. ಮೌಂಟೇನ್ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ. 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂ.ಟಿ.ಬಿ. ಮೌಂಟೇನ್‍ ಬೈಕ್‍ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈಗ ನ್ಯಾಶನಲ್‍ ಲೆವೆಲ್ ಗೇಮ್ಸ್‍ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ.

ಪಂಜಾಬ್‍ ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಟೀಮ್‍ಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತರಾಷ್ಟ್ರೀಯ ಮಟ್ಟದ ಸೈಕಲ್‍ ಅವಶ್ಯಕತೆ ಇತ್ತು, ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ. ಸಚಿವರು, ಶಾಸಕರು ಹಾಗೂ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Key words: CM –basavaraja Bommai -fulfills –promise- Cycle-distribute -girls