ಜೂನ್‌ನಲ್ಲೇ ಮೋಡ ಬಿತ್ತನೆ

ಬೆಂಗಳೂರು:ಮೇ-16: ಮಳೆ ಕೊರತೆಯ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಮುಂಗಾರು ಆರಂಭದಲ್ಲೇ ಮೋಡ ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಲು ಸರಕಾರ ನಿರ್ಧರಿಸಿದೆ.

ಮುಂಗಾರು ವಿಫಲವಾದರೆ ಸಾಮಾನ್ಯವಾಗಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮೋಡ ಬಿತ್ತನೆ ಪ್ರಯತ್ನ ನಡೆಯುತ್ತಿತ್ತು. ಆದರೆ, ಸತತ ಬರಗಾಲ ಎದುರಿಸುವ ರಾಜ್ಯದಲ್ಲಿ ಈ ವರ್ಷವೂ ಮುಂಗಾರು ವಿಫಲವಾದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂಬ ಲೆಕ್ಕಾಚಾರದಲ್ಲಿ ಜೂನ್‌ನಲ್ಲೇ ಮೋಡ ಬಿತ್ತನೆ ಕಾರ್ಯ ಆರಂಭಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.

ಬರ ನಿರ್ವಹಣೆ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಡಿಸಿ, ಸಿಇಒಗಳ ವಿಡಿಯೊ ಸಂವಾದದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ”ಮೋಡ ಬಿತ್ತನೆ ಕಾರ್ಯಕ್ಕೆ ಬೆಂಗಳೂರು ಮತ್ತು ಹುಬ್ಬಳ್ಳಿಯ 2 ಸ್ಥಳಗಳನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿದೆ,” ಎಂದು ತಿಳಿಸಿದರು.

”ತಜ್ಞರ ಸಮಿತಿ ಶಿಫಾರಸು ಆಧರಿಸಿ 2019 -20 ಹಾಗೂ 2020-21 ಎರಡು ವರ್ಷಗಳಿಗೆ ಸೇರಿಸಿ ಮೋಡ ಬಿತ್ತನೆಗೆ ಟೆಂಡರ್‌ ಕರೆಯಲಾಗಿದೆ. ಅಂದಾಜು 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಟೆಂಡರ್‌ ಕರೆಯಲಾಗಿದ್ದು, ಒಂದೆರಡು ವಾರಗಳಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತಿದೆ,” ಎಂದು ಹೇಳಿದರು.

”ಸಾಮಾನ್ಯವಾಗಿ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮೋಡ ಬಿತ್ತನೆ ನಡೆಯುತ್ತಿತ್ತು. ಆದರೆ, ಆ ವೇಳೆಗೆ ಮುಂಗಾರು ಹಂಗಾಮಿನ ಫಲವತ್ತಾದ ದಿನಗಳು ಕಳೆದುಹೋಗಿರುತ್ತವೆ. ಮುಖ್ಯವಾಗಿ ಬಿತ್ತನೆ ಮಾಡಲು ಮಳೆ ಮೋಡಗಳ ಲಭ್ಯತೆಯೂ ಮುಖ್ಯವಾಗಿರುತ್ತದೆ. ಹೀಗಾಗಿ ಮುಂಗಾರು ಆರಂಭದಲ್ಲೇ ಮೋಡ ಬಿತ್ತನೆ ಮಾಡಲಾಗುವುದು. ಮಳೆಯ ಕೊರತೆ ಹಾಗೂ ಮೋಡಗಳ ಲಭ್ಯತೆ ಮಾನದಂಡವಾಗಿಟ್ಟುಕೊಂಡು 2 ವಿಮಾನಗಳಲ್ಲಿ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ,” ಎಂದು ವಿವರಿಸಿದರು.

ಮೋಡ ಬಿತ್ತನೆ ಸಿದ್ಧತೆ

ಬಿತ್ತನೆ: ಜೂನ್‌ ತಿಂಗಳು

ಕೇಂದ್ರ: ಬೆಂಗಳೂರು, ಹುಬ್ಬಳ್ಳಿ

ವಿಮಾನ: ಎರಡು ಬಳಕೆ

ಟೆಂಡರ್‌:2019-21(ಎರಡು ವರ್ಷಕ್ಕೆ)
ಕೃಪೆ:ವಿಜಯಕರ್ನಾಟಕ

ಜೂನ್‌ನಲ್ಲೇ ಮೋಡ ಬಿತ್ತನೆ

Minister Mr. Krishna Byregowda said that cloud seeding will be done in Hubli in the month of June 2019.

#monsoon, #rains, #cloudseeding #hubli