ಮಕ್ಕಳ ಕಳ್ಳರ ವದಂತಿ ಬಗ್ಗೆ ಸ್ಪಷ್ಟನೆ: ‘ಯುವ ಸಂಭ್ರಮ’ದ ಬಗ್ಗೆ ಮಾಹಿತಿ ನೀಡಿದ ಮೈಸೂರು ಎಸ್ಪಿ ಆರ್. ಚೇತನ್.

kannada t-shirts

ಮೈಸೂರು,ಸೆಪ್ಟಂಬರ್,14,2022(www.justkannada.in):  ಮಕ್ಕಳ ಕಳ್ಳರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ  ವಿಚಾರ ಸಂಬಂಧ ಸುಳ್ಳು ಸುದ್ದಿ ಹರಡಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು  ಮೈಸೂರು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಮೈಸೂರಿನ ಕುರಿಹುಂಡಿ ಗ್ರಾಮಕ್ಕೆ ಅಲೆಮಾರಿಗಳು ಬಂದಿದ್ದು, ಅಲೆಮಾರಿಗಳನ್ನು ಮಕ್ಕಳ ಕಳ್ಳರೆಂದು ಗ್ರಾಮಸ್ಥರು ತಡೆದಿದ್ದರು. ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಿಚಾರಣೆ ಮಾಡಿದ್ದರು.

ಈ ಕುರಿತು ಮಾತನಾಡಿರುವ ಎಸ್ಪಿ ಆರ್. ಚೇತನ್, ಸದ್ಯ ಬಂದಿದ್ದ ಅಲೆಮಾರಿಗಳು ಪೇಪರ್, ಚಿಂದಿ ಹಾಯುವವರು ಎಂದು ಮಾಹಿತಿ ಇದೆ. ಇಬ್ಬರಲ್ಲಿ ಒಬ್ಬ ಮಂಡ್ಯ ಜಿಲ್ಲೆ ಮತ್ತೊಬ್ಬ ಕೋಲಾರ ಜಿಲ್ಲೆಯ ವ್ಯಕ್ತಿ ಎಂದು ಗೊತ್ತಾಗಿದೆ. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡಿ. ವಿನಾ: ಕಾರಣ ಅಪರಿಚಿತರ ಮೇಲೆ ಹಲ್ಲೆ ಮಾಡಿದರೆ ಕಾನೂನಡಿ ಕ್ರಮ ಕೈಕೊಳ್ಳುತ್ತೇವೆ. ಮಕ್ಕಳ ಕಳ್ಳರು ಅನ್ನೋದು ಕೇವಲ ಒಂದು ವದಂತಿ ಅಷ್ಟೇ. ಯಾರೂ ಅದಕ್ಕೆ ತಲೆಕಡಿಸಿಕೊಳ್ಳಬಾರದು. ಅಂಥಾ ಘಟನೆ ಜಿಲ್ಲೆಯಲ್ಲಿ ಯಾವುದು ಸಂಭವಿಸಿಲ್ಲ. ಸುಳ್ಳು ಸುದ್ದಿ ಹರಡಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೆಪ್ಟೆಂಬರ್ 16ರಿಂದ 9 ದಿನಗಳ ಕಾಲ ಯುವ ಸಂಭ್ರಮ

ಮೈಸೂರು ದಸರಾ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಚೇತನ್, ಸೆಪ್ಟೆಂಬರ್ 16ರಿಂದ 9 ದಿನಗಳ ಕಾಲ ಯುವ ಸಂಭ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ನಟ ಡಾಲಿ ಧನಂಜಯ ಆಗಮಿಸಲಿದ್ದಾರೆ. ವಿವಿಧ ಕಾಲೇಜುಗಳ‌ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ. 75 ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ನಡೆಯಲಿವೆ. ಆಜಾದಿ ಕಾ ಅಮೃತ ಮಹೋತ್ಸವ್ ಸೇರಿದಂತೆ ಒಂಬತ್ತು ವಿಷಯಗಳ ಕುರಿತು ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. 250 ಕಾಲೇಜುಗಳ‌ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.

ಯುವ ಸಂಭ್ರಮದಲ್ಲಿ ಆಯ್ಕೆಯಾಗುವ 18 ತಂಡಗಳಿಗೆ ಮುಂಬರುವ ಯುವ ದಸರಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುವುದು. ಯುವ ದಸರಾ ಕಾರ್ಯಕ್ರಮದ ಆರಂಭದಲ್ಲಿ ಅವಕಾಶ ಸಿಗಲಿದೆ‌ ಎಂದು ಯುವ ದಸರಾ ಉಪ ಸಮಿತಿಯ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಹೇಳಿದರು.

Key words: Clarification – rumor –about- child –abductors-mysore- SP -Chethan

website developers in mysore