ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹತ್ತಿರದ ಕಾಲೇಜುಗಳಲ್ಲಿ ಉಚಿತ ಪ್ರವೇಶ, ಹಾಸ್ಟೇಲ್ ಸೌಲಭ್ಯ

ಬೆಂಗಳೂರು:ಆ-20:(www.justkannada.in) ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶದ ಪದವಿ ವಿದ್ಯಾರ್ಥಿಗಳನ್ನು ಹತ್ತಿರದ ಪದವಿ ಕಾಲೇಜುಗಳಿಗೆ ಸೇರಿಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಉಚಿತವಾಗಿ ನೀಡಬೇಕೆಂದು ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ತನ್ನ ಎಲ್ಲ ಅಧಿಕಾರಿಗಳಿಗೆ ಸೂಚಿಸಿದೆ.

ಅಲ್ಲದೇ ಈ ಭಾಗದ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲು ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಇಲಾಖೆ ಹೇಳಿದೆ. ಇದೇ ವೇಳೆ ಪ್ರವಾಹ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಇತರೆ ಶೈಕ್ಷಣಿಕ ದಾಖಲೆಗಳನ್ನು ತ್ವರಿತವಾಗಿ, ಶುಲ್ಕ ರಹಿತವಾಗಿ ಒದಗಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಲೇಜು ಶಿಕ್ಷಣ ವಿಭಾಗದ ಆಯುಕ್ತರು, “ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇವೆ. ವಿದ್ಯಾರ್ಥಿಗಳ ಅಂಕಪಟ್ಟಿ, ಶೈಕ್ಷಣಿಕ ದಾಖಲೆಗಳು ಹಾಗೂ ಪಠ್ಯ-ಪುಸ್ತಕಗಳನ್ನು ನಾವು ಉಚಿತವಾಗಿ ಒದಗಿಸುವುದಾಗಿ ತಿಳಿಸಿದ್ದಾರೆ.

ಡಿಗ್ರಿ ಕಾಲೇಜು ವಿದ್ಯಾರ್ಥಿಗಳನ್ನು ಪರಿಹಾರ ಶಿಬಿರಗಳಿಗೆ ಹೋಗಿ ಜನರಿಗೆ ಬೆಂಬಲ ನೀಡುವಂತೆ ಇಲಾಖೆ ಕೇಳಿದೆ. ಅಲ್ಲದೇ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ನೆರೆ ಪೀಡಿತ ಪ್ರದೇಶಗಳಲ್ಲಿ ಶಿಬಿರ ನಡೆಸಿ ತಕ್ಷಣದ ಸಹಾಯ ಮಾಡುವಂತೆ ಕೋರಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ಸಮೀಪದಲ್ಲಿರುವ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಇಲಾಖೆ ಮತ್ತು ಆಯಾ ವಿವಿಗಳು ತೆಗೆದುಕೊಳ್ಳಬೇಕಾದ ಎಲ್ಲ ಕ್ರಮದ ಬಗ್ಗೆಯೂ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಪಿಯು ಕಾಲೇಜುಗಳ ಮೂಲಸೌಕರ್ಯಗಳ ಪರಿಶೀಲನೆ ನಡೆಸಲು ಐದು ಪ್ರಾಂಶುಪಾಲರ ತಂಡವನ್ನು ರಚಿಸಲಾಗುತ್ತಿದ್ದು, ಅವರು ಪರಿಶೀಲನೆ ನಡೆಸಿ, ಆ ಭಾಗದ ಪಿಯು ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಆದಷ್ಟು ಬೇಗ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ ಪ್ರವಾಹ, ಮಳೆಹಾನಿ ಪ್ರದೇಶದ ಕಾಲೇಜು ವಿದ್ಯಾರ್ಥಿಗಳಿಗೆ ಉಂಟಾಗಿರಬಹುದಾದ ಆಘಾತದಿಂದ ಹೊರಬರುವಂತಾಗಲು ನಿಮ್ಹಾನ್ಸ್‌ ವತಿಯಿಂದ ಕೌನ್ಸೆಲಿಂಗ್‌ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಇಲಾಖೆ ಹಾಗೂ ನಿಮ್ಹಾನ್ಸ್‌ ಜತೆಯಾಗಿ ನಡೆಸುತ್ತಿರುವ ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮನ ಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ ನೀಡಿ ಆತ್ಮಸ್ಥೈರ್ಯ ತುಂಬಲಾಗುತ್ತದೆ.

ಪ್ರವಾಹ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಹತ್ತಿರದ ಕಾಲೇಜುಗಳಲ್ಲಿ ಉಚಿತ ಪ್ರವೇಶ, ಹಾಸ್ಟೇಲ್ ಸೌಲಭ್ಯ

City colleges open their gates for flood-hit students