ಚಂದ್ರಯಾನ, ಈಜುಕೊಳವಿರುವ ಉಚಿತ ಮೂರು ಅಂತಸ್ತುಗಳ ಮನೆ- ಇದು ಸ್ವತಂತ್ರ ಅಭ್ಯರ್ಥಿಯೊಬ್ಬರ ವಿಭಿನ್ನ ಪ್ರಣಾಳಿಕೆ…

ಮಧುರೈ, ಮಾರ್ಚ್,26,2021(www.justkannada.in):  ತಮಿಳುನಾಡು ರಾಜ್ಯದಲ್ಲಿ ಚುನಾವಣೆಗಳು ಬಂದರೆ ಹೀಗೆ… ವಿವಿಧ ರಾಜಕೀಯ ಪಕ್ಷಗಳ ನಾಯಕರು ಏನೆಲ್ಲಾ ಉಚಿತವಾಗಿ ಕೊಡುವುದಾಗಿ ಜನರಿಗೆ ಆಶ್ವಾಸನೆ ನೀಡುತ್ತಾರೆ. ಕೆಲವರು ಹೇಳಿದ ಹಾಗೇ ನಡೆದುಕೊಂಡಿರುವುದೂ ಉಂಟು. ಜಯಲಲಿತಾ ಕಾಲದಲ್ಲಿ ರಾಜಕೀಯ ಪಕ್ಷವೊಂದು ಬಣ್ಣದ ಟಿವಿ, ಮಿಕ್ಸಿಗಳನ್ನು ಕೊಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಈಗ ಸ್ವತಂತ್ರ ಅಭ್ಯರ್ಥಿಯೊಬ್ಬರು 10 ಹೆಜ್ಜೆ ಮುಂದಕ್ಕೆ ಹೋಗಿ ತನಗೆ ಓಟು ಹಾಕಿದವರಿಗೆ ಚಂದ್ರಯಾನದ ಅವಕಾಶ ಕಲ್ಪಿಸುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕಾಗಿ ತಮಿಳುನಾಡಿನ ಮಧುರೈ ನಗರದ ದಕ್ಷಿಣ ಭಾಗದಲ್ಲಿ ರಾಕೆಟ್ ಉಡಾವಣಾ ಕೇಂದ್ರ ಹಾಗೂ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. 100-ದಿನಗಳ ಚಂದ್ರಯಾನದ ಆಶ್ವಾಸನೆಯನ್ನು ನೀಡಿದ್ದಾರೆ!jk

ಹೌದು, ಆರ್. ಸರವಣನ್ ಎಂಬ ಹೆಸರಿನ 33 ವರ್ಷ ವಯಸ್ಸಿನ ಪತ್ರಕರ್ತ ಮಧುರೈ ದಕ್ಷಿಣ ವಿಧಾಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅಕ್ಷರಶಃ ಮೇಲೆ ತಿಳಿಸಿರುವ ಆಶ್ವಾಸನೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದಾರೆ.

ಆರ್. ಸರವಣನ್ ಘೋಷಣೆ ಮಾಡಿರುವ  ಆಶ್ವಾಸನೆಗಳ ಪಟ್ಟಿ ಹೀಗಿದೆ:

೧. ಎಲ್ಲರಿಗೂ ಐ-ಫೋನ್!

೨. ಈಜುಕೊಳದೊಂದಿಗೆ ಮೂರು ಅಂತಸ್ತಿನ ಐಶಾರಾಮಿ ಮನೆ!

೩. ಪ್ರತಿ ಕುಟುಂಬಕ್ಕೆ ಬ್ಯಾಂಕಿನಲ್ಲಿ ಪ್ರತಿ ವರ್ಷ ಒಂದು ರೂ.1  ಕೋಟಿ ಠೇವಣಿ!

೪. ರೂ.20 ಲಕ್ಷ ಮೌಲ್ಯದ ಕಾರು ಉಚಿತವಾಗಿ!

೫. ಪ್ರತಿ ಮನೆಗೆ ಒಂದು ಚಿಕ್ಕ ಹೆಲಿಕಾಪ್ಟರ್!

೬. ಗೃಹಿಣಿಯರಿಗೆ ಮನೆ ಕೆಲಸ ಮಾಡಲು ಉಚಿತವಾಗಿ ರೊಬೊಟ್!

೭. ಮಹಿಳೆಯರಿಗೆ ವಿವಾಹಕ್ಕಾಗಿ 100 ಸವರನ್ ಚಿನ್ನ!

೮. ಯುವಕರಿಗೆ ವ್ಯಾಪಾರ ಆರಂಭಿಸಲು ರೂ.1 ಕೋಟಿ ಸಾಲ!

೯. ವಿಕಲಚೇತನರಿಗೆ ರೂ.10 ಲಕ್ಷ!

೧೦. ಪ್ರತಿ ಮನೆಗೆ ಉಚಿತ ಬೋಟ್ ಹಾಗೂ ಪ್ರಯಾಣಿಸಲು ನಾಲೆಗಳ ನಿರ್ಮಾಣ!

೧೧. ಇಡೀ ವಿಧಾಸಭಾಕ್ಷೇತ್ರವನ್ನು ತಂಪಾಗಿರಿಸಲು ಕೃತಕ ಮಂಜಿನ ಬೆಟ್ಟ!!!

ಬಹುಶಃ ದೇಶದ ಇತರೆ ರಾಷ್ಟ್ರಮಟ್ಟದ ಪ್ರಮುಖ ರಾಜಕೀಯ ಪಕ್ಷಗಳು  ಸರವಣನ್ ಅವರ ಪ್ರಣಾಳಿಕೆಯಿಂದ ಪ್ರೇರಿತರಾಗಿ ಭವಿಷ್ಯದಲ್ಲಿ ಇದನ್ನೇ ಅನುಸರಿಸುಬಹುದೇನೋ.. ಗೊತ್ತಿಲ್ಲ!?

ಈಗಾಗಲೇ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆ ಸರ್ಕಾರಗಳು ವಿವಾಹಗಳಿಗೆ ಉಚಿತ ಚಿನ್ನ, ಸೈಕಲ್‌ ಗಳು, ಮಿಕ್ಸಿಗಳು, ಟಿವಿಗಳು, ಲ್ಯಾಪ್‌ಟಾಪ್‌ ಗಳು ಹಾಗೂ ಇನ್ನಿತರೆ ವಸ್ತುಗಳನ್ನು ಆಶ್ವಾಸನೆ ನೀಡಿದಂತೆ ಉಚಿತವಾಗಿ ನೀಡಿರುವ ಉದಾಹರಣೆಗಳೂ ಇವೆ.

ಮತ್ತೊಂದು ವಿಷಯವೆಂದರೆ ಸರವಣನ್ ಅವರು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. “ಬಹುಪಾಲು ಶಿಕ್ಷಿತ ಪತ್ರಕರ್ತರು, ವಕೀಲರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎಂಬುದೇ ಗೊತ್ತಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಇದು ಶಾಲಾ ಪಠ್ಯಕ್ರಮದ ಭಾಗವಾಗಬೇಕು. ಚುನಾವಣಾ ಆಯೋಗವು ಚುನಾವಣೆಯಲ್ಲಿ ಸ್ಪರ್ಧಿಸುವ ವಿಧಾನದ ಬಗ್ಗೆ ಜಾಹೀರಾತುಗಳನ್ನು ನೀಡಬೇಕು, ಆ ಪ್ರಕಾರವಾಗಿ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಲು ಅನುವು ಮಾಡಿಕೊಡಬೇಕು,” ಎನ್ನುವುದು ಸರವಣನ್ ಅವರ ಅಭಿಪ್ರಾಯ.Chandrayana-free- house -swimming pool-different -manifesto - election -candidate ...

ಚುನಾವಣೆಗಳಲ್ಲಿ ಹೆಚ್ಚು ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದರೆ ರಾಜಕೀಯ ಪಕ್ಷಗಳು ಸ್ವತಃ ಪರಿವರ್ತನೆಗೊಂಡು, ಚುನಾಯಿತರಾಗಲು ಜನರ ಒಳಿತಿಗಾಗಿ ಕೆಲಸ ಮಾಡುತ್ತವೆ ಎನ್ನುವುದು ಅವರ ಆಂಬೋಣ. “ಈ ಚುನಾವಣೆಯಲ್ಲಿ ನನ್ನ ಮತ ನನಗೇ,” ಎನ್ನುತ್ತಾರೆ. ಹಾಂ… ಮತ್ತೊಂದು ವಿಷಯ, ಸರವಣನ್ ಅವರ ಚುನಾವಣಾ ಚಿಹ್ನೆ ‘ಕಸದ ಬುಟ್ಟಿ’. ಸಾರ್ವಜನಿಕ ಜೀವನದಲ್ಲಿ ಅನೇಕ ಭ್ರಷ್ಟರಿದ್ದಾರೆ ಹಾಗೂ ಅವರೆಲ್ಲರನ್ನೂ ಕಸದ ಬುಟ್ಟಿಗೆ ಸೇರಿಸಬೇಕು ಎಂದು ಸೂಚಿಸಲು ಈ ಚಿಹ್ನೆಯಂತೆ…!

Key words: Chandrayana-free- house -swimming pool-different -manifesto – election -candidate …