ಚಾಮರಾಜನಗರ ಆಕ್ಸಿಜನ್ ದುರ್ಘಟನೆ: ಬದುಕುಳಿದ ಸೋಂಕಿತ ಹೇಳಿದ್ದೇನು?!

kannada t-shirts
*ದುರಂತದ ಕರಾಳತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ |ಸೋಂಕಿತರ ಮೃತರಾಗುವುದು ಕಂಡು ಓಡಿಹೋಗಿರುವ ರೋಗಿ
ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದ ಸಾವಿನ ವ್ಯೆಹವನ್ನು ಸೋಂಕಿತರೊಬ್ಬರು ಭೇದಿಸಿದ್ದಾರೆ.
ಆಸ್ಪತ್ರೆಯಲ್ಲಿ ಹೆಣಗಳು ಉರುಳಿದಾಗ ಬೆಚ್ಚಿಬಿದ್ದು ಓಡಿಬಂದಿರುವ ಹೆಸರು ಹೇಳಲಿಚ್ಛಿಸದ ಸೋಂಕಿತ ಆಕ್ಸಿಜನ್ ಕೊರತೆಯಿಂದ ಜನ ಸತ್ತ ಘಟನೆಯ ಬಗ್ಗೆ ವಿಜಯವಾಣಿಗೆ ವಿವರಿಸಿದ್ದಾರೆ.
ಕೋವಿಡ್ ಪಾಸಿಟಿವ್ ಆಗಿ ಜೀವ ಉಳಿಸಿಕೊಳ್ಳಲು ಆಸ್ಪತ್ರೆ ಸೇರಿದ್ದ ಸೋಂಕಿತ ಭಾನುವಾರ ತಡರಾತ್ರಿ ಜನ ಒದ್ದಾಡಿ ಸಾಯುವುದನ್ನು ತಿಳಿದು ಹೊರಬಂದು ಸ್ವತಃ ಹೋಂ ಐಸೋಲೇಷನ್ ಆಗಿ, ಆಸ್ಪತ್ರೆಯಲ್ಲಿ ಕೊಟ್ಟಿದ್ದ ಔಷಧಗಳನ್ನೇ ನುಂಗಿ ಇನ್ನೂ ಜೀವ ಉಳಿಸಿಕೊಂಡಿದ್ದಾರೆ.
ವಿಪರ್ಯಾಸವೆಂದರೆ, ಆಸ್ಪತ್ರೆಯ ವೈದ್ಯರಿಗೆ ಸೋಂಕಿತ ಹೊರಗೆ ಹೋಗಿರುವುದು ಗೊತ್ತು. ಆದರೆ ಯಾರೂ ಸಹ ಈವರೆಗೂ ಸೋಂಕಿತನನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ. ಈತ ಬದುಕಿದ್ದಾನಾ, ಸತ್ತಿದ್ದಾನಾ ಎಂದು ತಿಳಿಯುವ ಪ್ರಯತ್ನವನ್ನೂ ಮಾಡಿಲ್ಲ.
ಒದ್ದಾಡಿ ಪ್ರಾಣಬಿಟ್ಟರು ಜನರು
ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಹಾಕಿಕೊಳ್ಳಲು ರೋಗಿಗಳ ಮುಖದ ಮೇಲೆ ಎಸೆಯುತ್ತಿದ್ದರು. ಭಾನುವಾರ ರಾತ್ರಿ ಸುಮಾರು 11 ಗಂಟೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ ಎಂದು ಸೋಂಕಿತರೆಲ್ಲರೂ ಸೇರಿ ವೈದ್ಯರು, ಸಿಬ್ಬಂದಿಗೆ ಹೇಳಿದರೂ ಯಾರೂ ಕೇಳಲಿಲ್ಲ. ರೋಗಿಗಳು ಉಸಿರುಗಟ್ಟಿ ಒದ್ದಾಡಿ ಮಧ್ಯರಾತ್ರಿ 2 ಗಂಟೆ ವೇಳೆಯಲ್ಲಿ ಪ್ರಾಣಬಿಟ್ಟರು ಎಂದು ಸೋಂಕಿತ ಘಟನೆಯ ಭೀಕರತೆಯನ್ನು ವಿವರಿಸಿದ್ದಾನೆ.
ಆ ವೇಳೆಯಲ್ಲಿ 28 ರಿಂದ 30 ಜನ ಮೃತಪಟ್ಟಿದ್ದಾರೆ ಎಂಬ ಮಾತುಗಳು ಕೇಳಿಸಿಕೊಂಡೆ. ನಾನು ಇದ್ದ ವಾರ್ಡ್‌ನ ಮೇಲಿನ ಮಹಡಿಯಲ್ಲಿ ಒಂದು ಸಾಲಿನ ಜನರು ಸತ್ತಿದ್ದರು. ನನ್ನ ಮೂಗಿಗೆ ಹಾಕಿದ್ದ ಆಕ್ಸಿಜನ್ ಪೈಪ್ ತೆಗೆದುಬಿಟ್ಟೆ. ಆಸ್ಪತ್ರೆಯಲ್ಲಿ ಒದ್ದಾಡಿ ಸಾಯುವ ಬದಲು ಮನೆಯಲ್ಲೇ ನೆಮ್ಮದಿಯಾಗಿ ಸಾಯೋಣ ಎಂದು ನಿರ್ಧರಿಸಿದೆ.
ಸೋಮವಾರ ಬೆಳಗ್ಗೆ 9 ಗಂಟೆಯಲ್ಲಿ ಬ್ಯಾಗ್ ಎತ್ತಿಕೊಂಡು ಆಸ್ಪತ್ರೆಯಿಂದ ಹೊರ ನಡೆದೆ. ಪೊಲೀಸರು ನನ್ನನ್ನು ತಡೆಯಲು ಮುಂದಾದಾಗ ಆಸ್ಪತ್ರೆ ಒಳಗೆ ನೀವೂ ಬಂದರೆ ಪರಿಸ್ಥಿತಿ ಏನೆಂದು ಗೊತ್ತಾಗುತ್ತೆ ಎಂದು ಹೇಳಿ ಮನೆಗೆ ಹೋದೆ ಎಂದರು.
ಮತ್ತಷ್ಟು ಜೀವಗಳಿಗೆ ಗಂಡಾಂತರ))
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿ ಸೋಂಕಿತರು ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅವರ ಸಂಬಂಕರು ಆಸ್ಪತ್ರೆ ಒಳಗೆ ಬಂದರು ಎಂದು ಆಸ್ಪತ್ರೆಯಿಂದ ಹೊರಬಂದಿರುವ ಸೋಂಕಿತ ತಿಳಿಸಿದ್ದಾರೆ.
ಅಲ್ಲದೇ, ಮೃತರ ಸಂಬಂಕರು ಶವಸಂಸ್ಕಾರದಲ್ಲೂ ಭಾಗವಹಿಸಿದ್ದು, ಅವರನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಸೋಂಕಿತರ ಸಂಪರ್ಕಿತರೆಂದು ಪರಿಗಣಿಸಿ ಕರೊನಾ ಪರೀಕ್ಷೆ ಮಾಡಿಸಿರುವುದು ಅನುಮಾನ. ಹೀಗಾಗಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 24 ಜನರ ಸಂಬಂಕರಿಗೂ ಕರೊನಾ ತಗುಲಿರುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಘಟನೆಯಿಂದ ನಮ್ಮೂರಿನ ಮೂರ‌್ನಾಲ್ಕು ಜನ ಸೋಂಕಿತರು ಆಸ್ಪತ್ರೆ ಬಿಟ್ಟು ಮನೆಗೆ ಬಂದುಬಿಟ್ಟೆವು. ಆಸ್ಪತ್ರೆಗೆ ಬಂದರೆ ನಾನು ಸತ್ತೇ ಹೋಗುತ್ತೇನೆ. ಅಲ್ಲಿ ಊಟ ಮಾಡಿದರೆ ಮಾಡಬಹುದು, ಇಲ್ಲ ಎಂದರೆ ಇಲ್ಲ. ಕುಡಿಯಲು ಬಿಸಿ ನೀರು ಕೊಡುತ್ತಿರಲಿಲ್ಲ. ಕರೊನಾ ವಾರಿಯರ್ ಆಗಿ ನಾನೂ ಕೆಲಸ ಮಾಡಿದರೂ ಸರಿಯಾದ ಬೆಡ್ ಕೊಡಲಿಲ್ಲ.
– ಹೆಸರು ಹೇಳಲಿಚ್ಛಿಸದ ಸೋಂಕಿತ.
ಕೃಪೆ: ಕಿರಣ್ ಮಾದರಹಳ್ಳಿ. ವಿಜಯವಾಣಿ
website developers in mysore