2020ಕ್ಕೆ ನಡೆಯಲಿದೆ ರಾಜ್ಯದಲ್ಲಿ ಆನ್ ಲೈನ್ ನಲ್ಲೇ ಸಿಇಟಿ

ಬೆಂಗಳೂರು:ಮೇ-26: ರಾಜ್ಯದಲ್ಲಿ 2020ಕ್ಕೆ ಆನ್‌ಲೈನ್‌ ಮೂಲಕವೇ ಸಿಇಟಿ ನಡೆಸಲಾಗುವುದು ಈ ಕುರಿತು ಸಿದ್ಧತೆಗಳು ಆರಂಭವಾಗಿವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಸಿಇಟಿ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2020ಕ್ಕೆ ಆನ್‌ಲೈನ್‌ ಮೂಲಕವೇ ಸಿಇಟಿ ನಡೆಸಲಿದ್ದು, ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೆ, ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ಸಂಬಂಧ ನಿರಂತರ ತರಬೇತಿ ನೀಡುತ್ತೇವೆ. ಜತೆಗೆ, ಅಣಕು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾದ ವ್ಯವಸ್ಥೆ ಮಾಡಲಿದ್ದೇವೆ. ಪ್ರತಿ ಪಿಯು ಕಾಲೇಜಿನಲ್ಲೂ ತರಬೇತಿಗೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಿಇಟಿ ರ್‍ಯಾಂಕ್‌ ಆಧಾರದಲ್ಲಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ 28 ಕೇಂದ್ರಗಳಲ್ಲಿ ನಡೆಯಲಿದೆ. ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ, ಮೈಸೂರು, ತುಮಕೂರು, ಬೀದರ್‌, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಗದಗ, ಯಾದಗಿರಿ, ಬಾಗಲಕೋಟೆ, ಉಡುಪಿ, ಚಿಕ್ಕಬಳ್ಳಾಪುರ, ಮಡಿಕೇರಿ, ಚಾಮರಾಜನಗರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಸಹಾಯ ಕೇಂದ್ರಗಳಿದ್ದು, ಅರ್ಹ ಅಭ್ಯರ್ಥಿಗಳು ಅಲ್ಲಿಯೇ ದಾಖಲಾತಿ ಪರಿಶೀಲನೆ ಮಾಡಿಕೊಳ್ಳಬಹುದು ಎಂದರು.

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಗಿದ್ದು, ಶೇ.10ರಷ್ಟು ಏರಿಕೆ ಮಾಡಲಾಗಿದೆ. ಇದಾಗಿಯೂ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತದೆ. ಹೆಚ್ಚುವರಿ ಶುಲ್ಕ ವಸೂಲಿ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದರು.

2020ಕ್ಕೆ ನಡೆಯಲಿದೆ ರಾಜ್ಯದಲ್ಲಿ ಆನ್ ಲೈನ್ ನಲ್ಲೇ ಸಿಇಟಿ
CET,Online at 2020,G T Devegowda