ಕೇಂದ್ರ ಬಜೆಟ್ 2022: ಕೋವಿಡ್ ಹಿನ್ನೆಲೆ ಈ ಬಾರಿ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ ಇಲ್ಲ

Promotion

ನವದೆಹಲಿ, ಜನವರಿ 28, 2022 (www.justkannada.in): ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳು ನಡೆಯುತ್ತಿವೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಲಾಕ್-ಇನ್‌ಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಈ ಬಾರಿ ಬಜೆಟ್ ಮಂಡನೆಯ ಮುಂಚೆ ನಡೆಯುವ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ವನ್ನು ರದ್ದುಪಡಿಸಲಾಗಿದೆ.

ಕೇಂದ್ರ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಇಂದು, ಕಡ್ಡಾಯವಾಗಿ ತಾವು ಇರುವ ಸ್ಥಳಗಳಲ್ಲಿಯೇ ‘ಲಾಕ್-ಇನ್’ಗೆ ಒಳಗಾಗುವ ಬಜೆಟ್ ತಯಾರಿಯಲ್ಲಿ ತೊಡಗಿದ್ದಂತಹ ಎಲ್ಲಾ ಸಿಬ್ಬಂದಿಗಳಿಗೂ ಸಹ, ಸಾಂಪ್ರದಾಯಿಕವಾಗಿ ನಡೆಯುತ್ತಿದ್ದಂತಹ ‘ಹಲ್ವಾ ಸಮಾರಂಭ’ದ ಬದಲಾಗಿ ಸಿಹಿಯನ್ನು ಹಂಚಲಾಯಿತು.

ಬಜೆಟ್ ತಯಾರಿಯಲ್ಲಿ ಒಳಗೊಂಡಿದ್ದಂತಹ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುರುವಾರದಂದು ಲಾಕ್-ಇನ್’ ಆಗಿದ್ದಾರೆ. ೨೦೨೨ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಗಳವಾರದಂದು ಮಂಡಿಸಲಾಗುತ್ತದೆ.

ಬಜೆಟ್‌ ನ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ, ಬಜೆಟ್ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಅಧಿಕಾರಿಗಳೂ ಸಹ ಕಡ್ಡಾಯವಾಗಿ ‘ಲಾಕ್-ಇನ್’ಗೆ ಒಳಗಾಗಬೇಕಾಗುತ್ತದೆ. ಸಂಸತ್ತಿನ ಉತ್ತರ ಬ್ಲಾಕ್‌ ನಲ್ಲಿ ಬಜೆಟ್ ಪ್ರೆಸ್ ಕಟ್ಟಡವಿದ್ದು, ಇಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುವವರೆಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೂ ಸಹ ವಾಸವಿರುತ್ತಾರೆ. ಈ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರವಷ್ಟೇ ತಮ್ಮ ಕುಟುಂಬಸ್ಥರನ್ನು ಕಾಣಬಹುದು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.

ಹಿಂದಿನ ಬಾರಿಯಂತೆಯೇ ಈ ಬಾರಿಯೂ ಸಹ ಇದು ಸಂಪೂರ್ಣವಾಗಿ ಕಾಗದರಹಿತ ಬಜೆಟ್ ಆಗಿರುತ್ತದೆ. ಎಲ್ಲಾ ವಿವರಗಳೂ ಸಹ ಮೊಬೈಲ್ ಆ್ಯಪ್‌ ನಲ್ಲಿ ಲಭ್ಯವಿರುತ್ತದೆ.

ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಕೇಂದ್ರ ಸರ್ಕಾರ, ಬಜೆಟ್ ಮಂಡನೆಗೆ ಕೆಲವು ದಿನಗಳ ಮುಂಚೆ ಬಜೆಟ್ ಮಂಡನೆಯ ಘಟನಾವಳಿಗಳಿಗೆ ಚಾಲನೆ ನೀಡಲು ‘ಹಲ್ವಾ ಸಮಾರಂಭ’ವನ್ನು ನಡೆಸುತ್ತದೆ. ಹಲ್ವಾ ಎನ್ನುವುದು ಭಾರತದ ಪ್ರಸಿದ್ಧ ಸಿಹಿ ತಿನಿಸು. ಇದನ್ನು ದೊಡ್ಡ ಪಾತ್ರೆಯೊಂದರಲ್ಲಿ ತಯಾರಿಸಿ ಹಣಕಾಸು ಸಚಿವಾಲಯದ ಎಲ್ಲಾ ಸಿಬ್ಬಂದಿಗಳಿಗೂ ಹಂಚುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ.

ಹಾಗಾಗಿ, ‘ಹಲ್ವಾ ಸಮಾರಂಭ,’ ಬಜೆಟ್‌ ಗೆ ಸಂಬಂಧಿಸಿದ ವಿವಿಧ ದಾಖಲೆಗಳ ಮುದ್ರಣದ ಪ್ರಕ್ರಿಯೆಗೆ ಔಪಚಾರಿಕವಾಗಿ ಚಾಲನೆ ನೀಡುವ ಒಂದು ಆಯವ್ಯಯಪೂರ್ವ ಸಂಪ್ರದಾಯವೂ ಆಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Central Budget -2022-Covid