ನೆರೆ ಪರಿಹಾರ ಕುರಿತು ಕೇಂದ್ರದ ವಿರುದ್ದ ಟೀಕೆ: ಸರ್ಕಾರಿ ಅತಿಥಿ ಗೃಹದಲ್ಲಿ ತಹಶೀಲ್ದಾರ್ ಗಳ ಗುಂಡು ತುಂಡು ಪಾರ್ಟಿ ಘಟನೆ ಖಂಡಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ…

ಹಾಸನ,ಅ,5,2019(www.justkannada.in): ಹೊಳೆನರಸೀಪುರದಲ್ಲಿ ಸರ್ಕಾರಿ ಅತಿಥಿ ಗೃಹದಲ್ಲಿ  ತಹಸೀಲ್ದಾರ್ ಗಳು ನಡೆಸಿದ ಗುಂಡು ತುಂಡು ಪಾರ್ಟಿಯ ಬಗ್ಗೆ ಪ್ರತಿಕ್ರಿಯಿಸಿದ  ಜೆಡಿಎಸ್ ರಾಜ್ಯಾಧ್ಯಕ್ಷ  ಹೆಚ್.ಕೆ ಕುಮಾರಸ್ವಾಮಿ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡೋದು ಸರಿಯಲ್ಲ ಎಂದು ಘಟನೆಯನ್ನ ಖಂಡಿಸಿದ್ದಾರೆ.

ಹಾಸನದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಫ್ರೆಂಡ್ಲಿಯಾಗಿ ಊಟಕ್ಕೆ ಸೇರೋದು ತಪ್ಪಲ್ಲ. ಆದರೆ ಸರಕಾರಿ ಜಾಗದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಈ ಸಂಬಂಧ ಡಿಸಿ ಅವರ ಜೊತೆ ಮಾತನಾಡುವೆ ಎಂದರು.

ಮೈಸೂರಿನ ಚಾಮುಂಡೇಶ್ವರಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪಕ್ಷ ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬಿಜೆಪಿಗೆ ಹೋಗಿರುವವರ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೇ ಸ್ಥಿತಿ ತಂದುಕೊಳ್ಳಬೇಕು ಎನ್ನುವವರಿಗೆ ಏನು ಮಾಡಲು ಆಗಲ್ಲ ಎಂದು  ಪರೋಕ್ಷವಾಗಿ ಜಿಟಿ ದೇವೇಗೌಡರಿಗೆ ಟಾಂಗ್ ಕೊಟ್ಟರು.

ಕೇಂದ್ರ ಸರಕಾರ ಒತ್ತಡಕ್ಕೆ ಮಣಿದು 1200 ಕೋಟಿ ಬಿಡುಗಡೆ ಮಾಡಿದೆ. ಕೇಳಿದ್ದು 38 ಸಾವಿರ ಕೋಟಿ, ಕೇಂದ್ರದ ಒಲ್ಲದ ಮನಸ್ಸಿನ ನಡೆ ಇದು. ಈ ಹಣ ಯಾವುದಕ್ಕೂ ಸಾಲದು, ಕನಿಷ್ಠ ಪ್ರಧಾನಿ ರಾಜ್ಯಕ್ಕೆ ಬರಬೇಕಿತ್ತು. ಅಮೇರಿಕಾಕ್ಕೆ ವಾರಗಟ್ಟಲೆ ಹೋಗುತ್ತಾರೆ ಎಂದು ಟೀಕಿಸಿದರು.

ಎಸ್ ಡಿ ಆರ್ ಎಫ್ ನಿಂದ ರಾಜ್ಯ ಸ‌ರಕಾರವೂ ಹಣ ಬಿಡುಗಡೆ ಮಾಡಬೇಕು. ಸ್ವತಃ ಸಿಎಂ ಅವರೇ ಬೊಕ್ಕಸ ಬರಿದಾಗಿದೆ ಎಂದಿದ್ದಾರೆ. ಅದೇ ಕಾರಣಕ್ಕೆ ಶಾಸಕರ ಅನುದಾನ ತಡೆ ಹಿಡಿದಿದ್ದಾರೆ. ಪ್ರತಿಪಕ್ಷ ಶಾಸಕರ ಅನುದಾನ ಹಿಂಪಡೆಯಲಾಗಿದೆ. ಸಕಲೇಶಪುರ ಆಲೂರು ಕ್ಷೇತ್ರದಿಂದ 100 ಕೋಟಿ ವಾಪಸ್ ಪಡೆಯಲಾಗಿದೆ ಎಂದು ದೂರು ಬಂದಿದೆ. ವಿಶೇಷ ಘಟಕ ಯೋಜನೆಯಡಿಯ ಪರಿಶಿಷ್ಟರ ಹಣವನ್ನೂ ವಾಪಸ್ ಪಡೆದಿರುವುದು ನಾಚಿಗೆಗೇಡಿನ ವಿಷಯ. ಈ ಎಲ್ಲಾ ಲೋಪ, ನೆರೆ ಪರಿಹಾರಕ್ಕೆ ಹಣ ನೀಡುವಂತೆ ಒತ್ತಾಯಿಸಿ ಅ.10 ರಂದು ಪ್ರತಿಭಟನೆ ಮಾಡಲಾಗುತ್ತಿದೆ. ಇದು ಬಡವಿರೋಧಿ, ದಲಿತ ವಿರೋಧಿ ನಿಲುವು ಎಂದು ಕಿಡಿಕಾರಿದರು.

ನಾವು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತೇವೆ. ಮೋದಿ ಅವರು ಬರಿ ಭಾಷಣದಿಂದ ದೇಶ ಕಟ್ಟಲು ಆಗಲ್ಲ. ಭಾರತ ಬಹಿರ್ದೆಸೆ ಮುಕ್ತ ದೇಶವಾಗಿದೆ ಎಂದು ಅಮೇರಿಕಾದಲ್ಲಿ ಹೇಳಿದ್ದಾರೆ. ಎಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಪ್ರಶ್ನೆ ಹಾಕಿದರು.

Key words: Center –flood Compensation-  JDS President -HK Kumaraswamy