ಕೊಂಡೋತ್ಸವ ವೀಕ್ಷಣೆ ವೇಳೆ ಮೇಲ್ಚಾವಣಿ ಕುಸಿದು ಓರ್ವ ಮಹಿಳೆ ಮೃತ: 25 ಮಂದಿಗೆ ಗಾಯ.

ಮಂಡ್ಯ,ಮಾರ್ಚ್,29,2022(www.justkannada.in): ಬಸವೇಶ್ವರ ಕೊಂಡೋತ್ಸವ ವೀಕ್ಷಿಸುವ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಓರ್ವ ಮಹಿಳೆ ಮೃತಪಟ್ಟು 25 ಕ್ಕೂ  ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ  ಮದ್ಧೂರು ತಾಲ್ಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ.

ಹುಲಿಗೆರೆಪುರ ಗ್ರಾಮದ ದ್ಯಾವರಸ ರವರ ಪತ್ನಿ  ಪುಟ್ಟಲಿಂಗಮ್ಮ 40  ಮೃತಪಟ್ಟ ಮಹಿಳೆ. ಸುಮಾರು 8 ಮಕ್ಕಳು. ಮಹಿಳೆಯರು ವಯೋವೃದ್ಧರು ಮತ್ತು ಪುರುಷರು ಸೇರಿದಂತೆ  25 ಹೆಚ್ಚು ಮಂದಿ ಗಾಯಗೊಂಡಿದ್ದು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಗ್ರಾಮದಲ್ಲಿ ಸೋಮವಾರ  ಬಂಡಿ  ಉತ್ಸವ ಹಾಗೂ ಇನ್ನಿತರ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ  ಮಂಗಳವಾರ ಬೆಳಿಗ್ಗೆ ಗ್ರಾಮದ  ಶ್ರೀ  ಬಸವೇಶ್ವರ  ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು . ದೇವರಗುಡ್ಡ ಹಾಯುವ ಕೊಂಡೋತ್ಸವವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ್ದರು.  ಈ ವೇಳೆ ಜನರು  ಪಟೇಲ್  ಸಿದ್ದೇಗೌಡ ಎಂಬುವರಿಗೆ ಸೇರಿದ ಮನೆಯ ಮೇಲೆ ನಿಂತು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ  ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಸುಮಾರು 60 ವರ್ಷದ ಹಿಂದೆ ನಿರ್ಮಿಸಿದ ಮನೆ ಇದಾಗಿದೆ. ಗ್ರಾಮದ ಪ್ರತ್ಯಕ್ಷದರ್ಶಿ ಕಲ್ಯಾಣಿ ಎಂಬುವವರಿ  ಮಾತನಾಡಿ ಮಾಹಿತಿ ನೀಡಿದ್ದು, ಬೆಳಿಗ್ಗೆ  5:00 ಗಂಟೆಗೆ ಬಸವೇಶ್ವರ ಕೊಂಡ ನೋಡಲು ಕುಟುಂಬಸ್ಥರೊಂದಿಗೆ ದೇವಸ್ಥಾನದ ಬಳಿ  ತೆರಳಿದವು. ಪಟೇಲ್ ಸಿದ್ದೇಗೌಡರ ಮನೆಯ ಮುಂದಿನ ಚಾವಣಿಯ ಮೇಲೆ ಹತ್ತಿ ಕೊಂಡೋತ್ಸವ  ನೋಡುತ್ತಿದ್ದವು. ಇದ್ದಕ್ಕಿದ್ದ ಹಾಗೆ ಹಳೆಯ ಮನೆಯ ಛಾವಣಿ ಕುಸಿದು ಬಿದ್ದು ಮಕ್ಕಳು ಹಾಗೂ ನನ್ನ ಸ್ನೇಹಿತೆಗೆ ತೀವ್ರವಾದ ಗಾಯಗೊಂಡು ಮಂಡ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ ನಮ್ಮ ಕಣ್ಣಮುಂದೆ ನಡೆದ ಈ ಘಟನೆಯಿಂದ ನಮಗೆ ತುಂಬಾ ನೋವು ಉಂಟಾಗಿದೆ ಈ ರೀತಿ ಆಗಬಾರದಿತ್ತು ಎಂದು ತಮ್ಮ ಅಳಲು ತೋಡಿಕೊಂಡರು.

Key words: ceiling-collapses – Death -mandya