2015ರಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಬದುಕುಳಿದಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್

ನವದೆಹಲಿ, ಡಿಸೆಂಬರ್ 8, 2021 (www.justkannada.in): ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರೆ ರಕ್ಷಣಾ ಪಡೆಗಳ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದಂತಹ ಭಾರತೀಯ ವಾಯು ದಳದ ಹೆಲಿಕಾಪ್ಟರ್ ಇಂದು ತಮಿಳುನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿದ್ದು, ಈವರೆಗೂ 13 ಮಂದಿ ಈ ಅವಘಡದಲ್ಲಿ ಮೃಪಟ್ಟಿರುವುದಾಗಿ ವರದಿಯಾಗಿದೆ.

ಆರು ವರ್ಷಗಳ ಹಿಂದೆ, 2015ರಲ್ಲಿ ಒಮ್ಮೆ ಇದೇ ರೀತಿ ನಡೆದಂತಹ ಹೆಲಿಕಾಪ್ಟರ್ ದುರಂತವೊMದರಲ್ಲಿ, ಆಗ ಲೆಫ್ಟಿನೆಂಟ್ ಜನರಲ್ ಆಗಿದ್ದಂತಹ, ಜನರಲ್ ರಾವತ್ ಅವರು ಬದುಕುಳಿದಿದ್ದರು.

ವರದಿಗಳ ಪ್ರಕಾರ ಫೆಬ್ರವರಿ ೩, ೨೦೧೫ರಂದು ಜನರಲ್ ರಾವತ್ ಅವರು, ಮೂವರು ಇತರೆ ಸೇನಾ ಸಿಬ್ಬಂದಿಗಳ ಜೊತೆ ಚೀತಾ ಹೆಲಿಕಾಪ್ಟರ್‌ವೊಂದರಲ್ಲಿ ನಾಗಾಲ್ಯಾಂಡ್‌ನ ದೀಮಾಪುರ ಜಿಲ್ಲೆಯ ರಬ್ಗಾಪಹರ್‌ನಿಂದ ಹೊರಟರು. ಆದರೆ ಆ ಹೆಲಿಕಾಪ್ಟರ್ ಮೇಲಕ್ಕೇರಿದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು.

ಹೆಲಿಕಾಪ್ಟರ್ ಟೇಕ್ ಆಫ್ ಆಗುತ್ತಿದ್ದಂತೆಯೇ ಅದರ ಇಂಜಿನ್ ಕಾರ್ಯಾಚರಣೆ ಸ್ಥಗಿತಗೊಂಡು ಸುಮಾರು ಭೂಮಿಯಿಂದ ೨೦ ಅಡಿಗಳ ಎತ್ತರದಿಂದ ಪತನವಾಯಿತು. ಆ ಅವಘಡದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದಂತಹ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದರು.

ಅಂದು ಪತನಗೊಂಡ ಸೇನಾ ಹೆಲಿಕಾಪ್ಟರ್ ಸುಮಾರು ಬೆಳಿಗ್ಗೆ ೯.೩೦ಕ್ಕೆ ದೈನಂದಿನ ಯಾನದ ಪ್ರಕಾರ ಟೇಕ್ ಆಫ್ ಆಗಿತ್ತು. ಶಿಲ್ಲಾಂಗ್‌ನ ರಕ್ಷಣಾ ಪಡೆಯ ಪಿಆರ್‌ಒ ಅವರು ಆ ಅಪಘಾತದಲ್ಲಿ ಹೆಲಿಕಾಪ್ಟರ್‌ಗೆ ಹಾನಿಯಾಗಿರುವ ಕುರಿತು ಮಾಹಿತಿ ನೀಡಿದ್ದರು.

ಬುಧವಾರ, ಅಂದರೆ ಇಂದು ಜನರಲ್ ರಾವತ್ ಅವರು ಕೊಯಮತ್ತೂರು ಬಳಿಯಿರುವ ಸುಳುರ್‌ನಲ್ಲಿರುವ ಭಾರತೀಯ ವಾಯು ಪಡೆಯ ಬೇಸ್‌ನಿಂದ, ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸ್ಟಾಫ್ ಕಾಲೇಜಿನ ಕಡೆಗೆ ಹೊರಟ್ಟಿದ್ದರು ಎನ್ನಲಾಗಿದೆ.

ಈ ಎಂಐ-ಸೀರಿಸ್‌ನ ಹೆಲಿಕಾಪ್ಟರ್ ಪತನಗೊಂಡ ವೇಳೆಯಲ್ಲಿ, ಸಿಡಿಎಸ್ ಬಿಪಿನ್ ರಾವತ್, ತಮ್ಮ ಪತ್ನಿ ಮಧುಲಿಕಾ ರಾವತ್, ರಕ್ಷಣಾ ಸಹಾಯಕ, ಭದ್ರತಾ ಕಮ್ಯಾಂಡೊಗಳು ಮತ್ತು ಐಎಎಫ್‌ನ ಪೈಲಟ್ ಅವರೂ ಸಹ ಇದ್ದರು ಎಂದು ವರದಿಯಾಗಿದೆ.

ಪ್ರತ್ಯಕ್ಷ ಸಾಕ್ಷಿಯೊಂದರ ಪ್ರಕಾರ ಹೆಲಿಕಾಪ್ಟರ್ ಪತನಗೊಂಡು ದಟ್ಟವಾಗಿ ಬೆಳೆದಿರುವ ಮರಗಳ ಮೇಲೆ ಉರುಳಿ ಹೊತ್ತು ಉರಿಯಿತಂತೆ. ಭಾರತೀಯ ವಾಯುದಳ ಈ ಅಪಘಾತದ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ತನಿಖೆಯನ್ನು ನಡೆಸುವಂತೆ ಆದೇಶಿಸಿದೆ.

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಇಂದು ಸಂಸತ್ತಿನಲ್ಲಿ ಮಾತನಾಡಬೇಕಿತ್ತು, ಆದರೆ ಇದನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಸುದ್ದಿ ಮೂಲ: ಇಂಡಿಯಾ ಟುಡೆ

Key words: CDS-General Bipin Rawat- survived – helicopter crash – 2015