ಕಾವೇರಿ ಹೆಚ್ಚುವರಿ ನೀರು; ತಮಿಳುನಾಡು ವಿರುದ್ಧ ಕೇಂದ್ರಕ್ಕೆ ರಾಜ್ಯದಿಂದ ಆಕ್ಷೇಪಣಾ ಅರ್ಜಿ –ಡಿಸಿಎಂ ಅಶ್ವಥ್ ನಾರಾಯಣ್…

ಮಂಡ್ಯ,ಫೆಬ್ರವರಿ,22,2021(www.justkannada.in):  ರಾಜ್ಯದ ನೀರಾವರಿ ಹಿತಾಸಕ್ತಿಗಳ ವಿಚಾರಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್, ಕಾವೇರಿ ನದಿಯ  ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರಕಾರ ರೂಪಿಸಿರುವ ಯೋಜನೆಯ ವಿರುದ್ಧ ಕೇಂದ್ರ ಸರಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.

ಸೋಮವಾರ ಬೆಳಗ್ಗೆ ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಕಾವೇರಿ ನದಿಯನ್ನು ವೈಗೈ, ವಾಲ್ಲಾರು ಮತ್ತು ಗುಂಡಾರು ನದಿಗಳಿಗೆ ಜೋಡಿಸುವ ತಮಿಳುನಾಡು ಪ್ರಸ್ತಾವನೆಗೆ ಜಲಸಂಪನ್ಮೂಲ ಸಚಿವರಾದ ರಮೇಶ್‌ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸುವುದಾಗಿಯೂ ಅವರು ತಿಳಿಸಿದ್ದಾರೆ. ತಮಿಳುನಾಡು ಯೋಜನೆಯನ್ನು ತಡೆಯಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸರಕಾರ ಮಾಡುತ್ತದೆ ಎಂದು ಸ್ಷಷ್ಟಪಡಿಸಿದರು.

ಈಗಾಗಲೇ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದು, ಇಂದು ಕೇಂದ್ರದ ಜಲಸಂಪನ್ಮೂಲ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ. ನಮ್ಮ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆ ನಿಲ್ಲದು:

ತಮಿಳುನಾಡು ಅಪಸ್ವರ ಎತ್ತಿದ್ದರೂ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ. ಅದು ಕಾರ್ಯಗತವಾಗುವುದು ಶತಃಸಿದ್ಧ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ಕಾರ್ಯಗತ ಮಾಡುತ್ತಿರುವ ಈ ಯೋಜನೆಯನ್ನು ನಮ್ಮ ಸರಕಾರದ ಅವಧಿಯಲ್ಲೇ ಮಾಡಲಾಗುವುದು. ಇದಕ್ಕೆ ನಾಡಿನ ಜನರ ಬೆಂಬಲವಿದೆ ಎಂದು ಹೇಳಿದರು.

ಹಾಸನದಲ್ಲಿ ವಿಮಾನ ನಿಲ್ದಾಣ ಶೀಘ್ರ:

ನನೆಗುದಿಗೆ ಬಿದ್ದಿರುವ ಹಾಸನ ಜಿಲ್ಲೆಯ ವಿಮಾನ ನಿಲ್ದಾಣ ಯೋಜನೆಯನ್ನು ಆದಷ್ಟು ಬೇಗ ಮುಗಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಇದರ ಜತೆಗೆ, ರಾಜ್ಯದಲ್ಲಿ ಇನ್ನೂ ಯಾವ ಯಾವ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಅಗತ್ಯವಿದೆಯೋ ಆ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೀದರ್‌, ಕಾರವಾರ, ಶಿವಮೊಗ್ಗ, ಕಲ್ಬುರ್ಗಿಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಹಾಸನ ವಿಮಾನ ನಿಲ್ದಾಣಕ್ಕೆ ಯಾವ ಹೆಸರು ಇಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಯೋಜನೆ ಮುಗಿದ ಮೇಲೆ ಜನರ ಅಪೇಕ್ಷೆ ಮೇರೆಗೆ ಹೆಸರಿಡುವುದು ಆಗುತ್ತದೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಉತ್ತರ ನೀಡಿದರು.caveri – water-Petition – Center- against -TamilNadu-DCM -Ashwath Narayan.

ಮೀಸಲು ಪ್ರಚೋದನೆ ಬೇಡ:

ಮೀಸಲಾತಿ ಹೋರಾಟ ಅತ್ಯಂತ ಸೂಕ್ಷ್ಮ ವಿಚಾರ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಅಥವಾ ಇನ್ನಾರೇ ಪ್ರತಿಪಕ್ಷ ನಾಯಕರಾಗಲಿ ತಮ್ಮ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಲಾಗುವುದಿಲ್ಲ. ಆದರೆ, ಯಾವ ರೀತಿಯ ಹೇಳಿಕೆ ಕೊಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಸರಕಾರ ಎಲ್ಲರ ಬೇಡಿಕೆಗಳನ್ನು ಗಮನಿಸುತ್ತಿದೆ. ಅಂತಿಮವಾಗಿ ಎಲ್ಲವನ್ನೂ ಪರಿಶೀಲನೆ ಮಾಡಿ ಸರಕಾರ ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ತಿಳಿಸಿದರು.

Key words: caveri – water-Petition – Center- against -TamilNadu-DCM -Ashwath Narayan.