ವಾಹನ ಚಾಲಕರ ಜಾಗೃತಿ ಸೃಷ್ಟಿಸಿದ ವ್ಯಂಗ್ಯಚಿತ್ರ ಪ್ರದರ್ಶನ: ಡಿಸಿಎಂ ಲಕ್ಷ್ಮಣ್  ಸವದಿ ಚಾಲನೆ..

ಬೆಂಗಳೂರು,ಫೆಬ್ರವರಿ,12,2021(www.justkannada.in): ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅಪರೂಪದ ವ್ಯಂಗ್ಯಚಿತ್ರ ಪ್ರದರ್ಶನ. ಆದರೆ ಇದು ಕೇವಲ ನಕ್ಕು ಹಗುರಾಗಿ ಮನೆಗೆ ಮರಳುವಂತಹ ಕಾರ್ಯಕ್ರಮವಾಗಿರಲಿಲ್ಲ. ಅಪಘಾತ ತಡೆಗೆ, ಸಂಚಾರ ಸುರಕ್ಷತೆಗೆ ಏನೆಲ್ಲಾ ಜಾಗ್ರತೆ ವಹಿಸಬೇಕು ಎಂಬ ಅರಿವು ಮೂಡಿಸುವ ಅನನ್ಯ ವ್ಯಂಗ್ಯಚಿತ್ರ ಪ್ರದರ್ಶನ ಇದಾಗಿತ್ತು. jk

ಸಾರಿಗೆ ಇಲಾಖೆಯ ಆಶ್ರಯದಲ್ಲಿ ರಸ್ತೆ ಸುರಕ್ಷತೆ ಮಾಸಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಈ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರು ಉದ್ಘಾಟಿಸಿದರು.

ರಾಜ್ಯದ 50ಕ್ಕೂ ಹೆಚ್ಚು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ರಚಿಸಿದ್ದ 200ಕ್ಕೂ ಹೆಚ್ಚು ಮನಸೆಳೆಯುವ ಈ ವ್ಯಂಗ್ಯಚಿತ್ರಗಳನ್ನು ಇಂದಿನಿಂದ 3 ದಿನಗಳ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸಲಾಗುತ್ತಿದೆ.

ವಿದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಚಾಲಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅಷ್ಟಾಗಿ ಸಾರ್ವಜನಿಕರು ಗಮನವಹಿಸುತ್ತಿಲ್ಲ. ಇದರಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಕೇಂದ್ರ ಸರ್ಕಾರವು ಪ್ರತಿವರ್ಷ ಚಾಲಕರ ಜಾಗೃತಿಗಾಗಿ ಸುಮಾರು 7000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ವಿವರಿಸಿದರು.

ರಾಜ್ಯದಲ್ಲಿ ಮಾಲಿನ್ಯದ ಪ್ರಮಾಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನೇ ಜನರು ಇನ್ನು ಮುಂದೆ ಹೆಚ್ಚಾಗಿ ಖರೀದಿಸಬೇಕು. ಇಂತಹ ವಾಹನಗಳಿಗೆ ರೋಡ್ ಟ್ಯಾಕ್ಸ್‍ನಿಂದ ವಿನಾಯಿತಿ ನೀಡಲಾಗಿದೆ.  ಆದ್ದರಿಂದ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ  ಮಾಡಿದರು.

ವಾಹನ ಚಾಲಕರು ಅಪಘಾತ ಮತ್ತು ಅಪರಾಧ ಮುಕ್ತವಾಗಿ ಚಾಲನೆ ಮಾಡಬೇಕು. ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚಾದರೂ ಅಪಘಾತಗಳ ಸಂಖ್ಯೆ ಹೆಚ್ಚಾಗದಂತೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ಲಕ್ಷ್ಮಣ್  ಸವದಿ ಕಿವಿಮಾತು ಹೇಳಿದರು.

ಸಾರಿಗೆ ಆಯುಕ್ತರಾದ ಎನ್. ಶಿವಕುಮಾರ್ ಅವರು ರಸ್ತೆ ಸುರಕ್ಷತಾ ಮಾಸದ ಆಚರಣೆಯ ಅಂಗವಾಗಿ ಸಾರಿಗೆ ಇಲಾಖೆಯು ಹಮ್ಮಿಕೊಂಡಿರುವ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ವಿವರಿಸಿದರು. ಚಿತ್ರನಟಿ  ಶ್ರೀಲೀಲಾ ಮತ್ತು ಟಿ. ಪ್ರಭಾಕರ್ ಅವರು ಉಪಸ್ಥಿತರಿದ್ದರು. ಸಾರಿಗೆ ಅಪರ ಆಯುಕ್ತರಾದ  ನರೇಂದ್ರ ಎಲ್.ಹೋಳ್ಕರ್ ಅವರು ಸ್ವಾಗತಿಸಿದರು. ಜಂಟಿ ಸಾರಿಗೆ ಆಯುಕ್ತರಾದ ಕೆ.ಟಿ. ಹಾಲಸ್ವಾಮಿ ಅವರು ವಂದಿಸಿದರು.cartoon-show-created-motorists-dcm-laxman-suadi

ಈ ಸಂದರ್ಭದಲ್ಲಿ ಕೆ.ಟಿ. ಹಾಲಸ್ವಾಮಿ ಅವರು ಅಪಘಾತಗಳ ಅರಿವು ಮೂಡಿಸುವ ಬಗ್ಗೆ ನಿರ್ಮಿಸಿದ ಕಿರುಚಿತ್ರವನ್ನು ಡಿಸಿಎಂ ಲಕ್ಷ್ಮಣ್ ಸವದಿ ಬಿಡುಗಡೆಗೊಳಿಸಿದರು ಮತ್ತು ಹಿರಿಯ ವ್ಯಂಗ್ಯಚಿತ್ರ ಕಲಾವಿದರನ್ನು ಸನ್ಮಾನಿಸಿದರು.

Key words: cartoon show -created – motorists- DCM -Laxman Suadi.