ಕಾರ್ಗೋ ಫ್ಲೈಟ್ ದರ ಏರಕೆ ವಿದೇಶಕ್ಕೆ ರಫ್ತಾಗದ ಹಣ್ಣು, ತರಕಾರಿ

ಬೆಂಗಳೂರು, 20 ಏಪ್ರಿಲ್, 2020 (www.justkannada.in): ಕೋವಿಡ್ 19 ಎಲ್ಲ ಕ್ಷೇತ್ರದಲ್ಲೂ ಸಮಸ್ಯೆ ಸೃಷ್ಟಿಸಿದೆ. ಹಣ್ಣು ತರಕಾರಿ ವಿದೇಶಕ್ಕೆ ರಫ್ತು ಮಾಡಲೂ ಇದು ಅಡ್ಡಿಯಾಗಿದೆ. ಪ್ರತಿನಿತ್ಯ ಸಾವಿರಾರು ವಿಮಾನ ವಿದೇಶಕ್ಕೆ ಹೋಗಿ ಬರುತ್ತಿದ್ದ ಕಾರಣ ಹಣ್ಣು ತರಕಾರಿ ಕೂಡ ನಿರಾತಂಕವಾಗಿ ಸರಬರಾಜಾಗುತ್ತಿತ್ತು. ಆದ್ರೆ ಕೋವಿಡ್ 19 ನಿಂದಾಗಿ ವಿಮಾನ ಸಂಚಾರ ಸ್ಥಗಿತವಾಗಿದೆ.

ವಿದೇಶದಿಂದಲೂ ಯಾವುದೇ ವಸ್ತು ಆಮದಾಗುತ್ತಿಲ್ಲ. ಹೀಗಾಗಿಹಣ್ಣು, ತರಕಾರಿ ಕೊಂಡೊಯ್ದ ಕಾರ್ಗೊ ಫ್ಲೈಟ್ ವಾಪಸ್ ಬರುವಾಗ ಖಾಲಿ ಬರುವ ಸ್ಥಿತಿ ಇದೆ. ಇದರಿಂದಾಗಿ ಕಾರ್ಗೋ ಫ್ಲೈಟ್‍ನವರು ದರವನ್ನ ಮೂರರಿಂದ ನಾಲ್ಕುಪಟ್ಟು ಏರಿಕೆ ಮಾಡಿದ್ದಾರೆ. ಇದರಿಂದಾಗಿಯೇ ರಫ್ತುದಾರರು ವಿದೇಶಕ್ಕೆ ಹಣ್ಣು, ತರಕಾರಿ ಕಳುಹಿಸಲು ಹಿಂದೇಟು ಹಾಕಿದ್ದರು. ಈ ವಿಚಾರವನ್ನು ಅರಿತ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ, ರಫ್ತುದಾರರು ಹಾಗೂ ಎಪೆಡಾ, ಕೆಪೆಕ್ ಸೇರಿದಂತೆ ಇತರ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದಾರೆ.

ಸೋಮವಾರ ಮಧ್ಯಾಹ್ನ ವಿಕಾಸ ಸೌಧದಲ್ಲಿ ಸಚಿವರು ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಯಾವ ದೇಶಕ್ಕೆ ಎಷ್ಟು ಹಣ್ಣು, ತರಕಾರಿ ರಫ್ತಾಗುತ್ತೆ. ಪ್ರತಿ ನಿತ್ಯ ಎಷ್ಟು ಟನ್ ರಫ್ತು ಮಾಡುತ್ತೀರಿ.ಈ ಮೊದಲು ಕಾರ್ಗೋ ದರ ಏನಿತ್ತು, ಎಂಬಿತ್ಯಾದಿ ವಿವರವನ್ನ ನೀಡುವಂತೆ ಸಚಿವರು ಸಭೆಯಲ್ಲಿ ತಿಳಿಸಿದ್ದಾರೆ. ಕಾರ್ಗೋ ದಲ್ಲಿ ರಾಜ್ಯದ ತರಕಾರಿ, ಹಣ್ಣುಗಳಿಗೆ ಆದ್ಯತೆ ನೀಡುವಂತೆ ಸೂಚಿಸಬೇಕು. ಸಾಕಷ್ಟುಬಾರಿ ನಮ್ಮ ಬುಕಿಂಗ್ ರದ್ದುಮಾಡಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಇದರಿಂದಾಗಿ ರಫ್ತುದಾರರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಹೀಗಾಗಿ ಕಾರ್ಗೋದವರಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದೂ ಮನವಿ ಮಾಡಿದ್ದಾರೆ. ರಫ್ತಿಗೆ ಸಂಬಂಧಿಸಿದಂತೆ ಇರುವ ಎಲ್ಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಎರಡು ದಿನಗಳೊಳಗೆ ರಫ್ತು ಮಾಡಲು ಇರುವ ತೊಡಕಿನ ಎಲ್ಲ ವಿವರ ನೀಡುವಂತೆಯೂ ತಿಳಿಸಿದ್ದಾರೆ. ರಫ್ತುದಾರರು ವಿವರ ನೀಡಿದ ಬಳಿಕ, ಸರ್ಕಾರದ ವತಿಯಿಂದ ಈ ಬಗ್ಗೆ ಬೇಕಾಗ ಕ್ರಮ ವಹಿಸಲಾಗುವುದು ಎಂದು ಸಚಿವ ಡಾ. ನಾರಾಯಣ ಗೌಡ ತಿಳಿಸಿದ್ದಾರೆ.