ಮೈಸೂರಿನಲ್ಲಿ ಇಬ್ಬರು ರೋಗಿಗಳಲ್ಲಿ ಕ್ಯಾಂಡಿಡಾ ಆರೀಸ್‌ ಸೂಪರ್‌ ಬಗ್‌ ಸೋಂಕು ಪತ್ತೆ

ಮೈಸೂರು:ಜುಲೈ-29:(www.justkannada.in) ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಮಹಾಮಾರಿ ಕ್ಯಾಂಡಿಡಾ ಆರೀಸ್‌ ಸೂಪರ್‌ ಬಗ್‌ ಸೋಂಕಿನ ಎರಡು ಪ್ರಕರಣ ಪತ್ತೆಯಾಗಿದೆ. ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳಲ್ಲಿ ‘ಸೂಪರ್‌ ಬಗ್‌’ ಕ್ಯಾಂಡಿಡ ಆರೀಸ್‌ ಕಾಣಿಸಿಕೊಂಡಿದ್ದು, ಇದು ರಾಜ್ಯದಲ್ಲಿ ಕಾಣಿಸಿಕೊಂಡ ಮೊದಲ ವರದಿ ಎಂದು ಹೇಳಲಾಗುತ್ತಿದೆ.

ಮೈಸೂರು ವಿವಿ ಪ್ರಾಧ್ಯಾಪಕರಾದ ಪ್ರೊ.ಶುಭಾ ಗೋಪಾಲ್‌ ಅವರ ಮಾರ್ಗದರ್ಶನದಲ್ಲಿ ಸೂಕ್ಷ್ಮ್ಮಜೀವಶಾಸ್ತ್ರದಲ್ಲಿ ಪೋಸ್ಟ್‌ ಡಾಕ್ಟರ್‌ಡಿಗ್ರಿ ವ್ಯಾಸಂಗ ಮಾಡುತ್ತಿರುವ ಉಮಾ ಮಹೇಶ್ವರಿ ಹಾಗೂ ಜೆಎಸ್‌ಎಸ್‌ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ.ಡಾ.ಎಂ.ಎನ್‌. ಸುಮನಾ ಅವರು ಈ ರೋಗವನ್ನು ಮೊದಲಬಾರಿ ಪತ್ತೆ ಮಾಡಿದ್ದಾರೆ.

ಐಸಿಯುನಲ್ಲಿ ದಾಖಲಾದ ರೋಗಿಗಳಲ್ಲಿ ಈ ಫಂಗಸ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕ್ಯಾಂಡಿಡ ಮೇಲೆ ಅಧ್ಯಯನ ಮಾಡುತ್ತಿದ್ದ ಉಮಾಮಹೇಶ್ವರಿ ಅವರು ರಕ್ತದಲ್ಲಿ ಕಾಣಿಸಿಕೊಂಡ ಈ ಆರೀಸ್‌ ಅನ್ನು ಮಾಲಿಕ್ಯೂಲರ್‌ ಸಂಶೋಧನೆಯಿಂದ ದೃಢಪಡಿಸಿದ್ದಾರೆ.

ದಾಖಲಾಗಿದ್ದ ಇಬ್ಬರು ರೋಗಿಗಳ ರಕ್ತದಲ್ಲಿ ಈ ಆರೀಸ್‌ ಕಂಡು ಬಂದಿದ್ದು, ಇದನ್ನು ಅಧಿಕೃತವಾಗಿ ದೃಢೀಕರಿಸುವ ಸಲುವಾಗಿ ಚಂಡೀಗಢದ ಲ್ಯಾಬಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಪಾಸಿಟಿವ್‌ ವರದಿ ಬಂದಿದೆ. ಇವರಿಂದ ಮತ್ತೆ ಕೆಲ ರೋಗಿಗಳಿಗೆ ಈ ಸೋಂಕು ತಗುಲಿರಬಹುದು ಎಂಬ ಅನುಮಾನದಿಂದ ಮತ್ತೆ 7 ಜನರ ವರದಿಯನ್ನು ಚಂಡೀಗಢದಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ. ಇತರರಿಗೆ ಹರಡದಂತೆ ಈಗಾಗಲೇ ಆಸ್ಪತ್ರೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜೆಎಸ್‌ಎಸ್‌ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ.ಡಾ.ಎಂ.ಎನ್‌. ಸುಮನಾ ತಿಳಿಸಿದ್ದಾರೆ.

ಕ್ಯಾಂಡಿಡಾ ಆರಿಸ್ – ಇದು ಹೆಚ್ಚು ಸಾಂಕ್ರಾಮಿಕವಾಗಿರುವ ಶಿಲೀಂಧ್ರವಾಗಿದ್ದು, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಕಡಿಮೆಯಿರುವ, ಸ್ಟೀರಾಯ್ಡ್‌ಗಳನ್ನು ಬಳಸುವವರು, ಅಥವಾ ವೈರಲ್ ಸೋಂಕುಗಳಿಂದ ಬಳಲುತ್ತಿರುವ, ಎಚ್‌ಐವಿ, ಆಲ್ಕೋಹಾಲ್ ಪ್ರೇರಿತ ಪಿತ್ತಜನಕಾಂಗದ ತೊಂದರೆಗಳನ್ನು ಹೊಂದಿರುವ ಮತ್ತು ಆಸ್ಪತ್ರೆಗಳಲ್ಲಿನ ಶಸ್ತ್ರಚಿಕಿತ್ಸೆಗಳಿಂದ ಚೇತರಿಸಿಕೊಳ್ಳುತ್ತಿರುವಂತಹ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಫಂಗಸ್‌ನಿಂದ ಈ ಸೂಪರ್‌ ಬಗ್‌ ಹರಡುತ್ತದೆ. ಆಸ್ಪತ್ರೆಯಿಂದಲೇ ಹರಡುವ ಈ ಸೋಂಕು ಹೆಚ್ಚಾಗಿ ಐಸಿಯು ರೋಗಿಗಳಲ್ಲಿ ಪತ್ತೆಯಾಗುತ್ತಿದೆ ಎಂಬುದನ್ನು ಈಗಾಗಲೇ ನಾನಾ ವರದಿಗಳು ತಿಳಿಸಿವೆ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಆರೀಸ್‌ ಬೇಗ ತಗುಲುತ್ತದೆ. ಆಸ್ಪತ್ರೆಗಳಲ್ಲಿ ಐಸಿಯು ವಾರ್ಡ್‌ಗಳನ್ನು ಹೆಚ್ಚು ನಿಗಾ ವಹಿಸಿ ಆಗಾಗ ಅದನ್ನು ಪರಿಶೀಲಿಸುತ್ತಿದ್ದರೆ ಇದನ್ನು ನಿಯಂತ್ರಿಸಬಹುದು.

ಅಮೆರಿಕ, ಯೂರೋಪ್‌ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದೀಗ ಮೈಸೂರಿನಲ್ಲಿ ಇಬ್ಬರು ರೋಗಿಗಳಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ಇಬ್ಬರು ರೋಗಿಗಳಲ್ಲಿ ಕ್ಯಾಂಡಿಡಾ ಆರೀಸ್‌ ಸೂಪರ್‌ ಬಗ್‌ ಸೋಂಕು ಪತ್ತೆ

Candida Auris superbug spotted in Mysuru

For the first time in the state, research carried out by faculty working at University of Mysore and at JSS Medical College and Hospital traced the presence of the Candida Auris, a deadly superbug in two patients at the JSS hospital of the city.