ಪೌರತ್ವ ಕಾಯ್ದೆ : ಕುತೂಹಲ ಮೂಡಿಸಿದೆ ದ್ವಾರಕನಾಥ್ V/S ರಂಗನಾಥ್ ‘ ಪಬ್ಲಿಕ್ ‘ ಡಿಬೆಟ್..!

 

ಮೈಸೂರು, ಜ.07, 2020 : (www.justkannada.in news ) : ಪ್ರಸ್ತುತ ದೇಶದಲ್ಲಿ ಚರ್ಚೆ ಹುಟ್ಟು ಹಾಕಿರುವ ಪೌರತ್ವ ಕಾಯ್ದೆಗೆ ಸಂಬಂಧಿಸಿದ ಪರ-ವಿರುದ್ಧದ ವಾದ, ವಿವಾದಕ್ಕೆ ಹೊಸ ಸೇರ್ಪಡೆ. ಕನ್ನಡ ಪತ್ರಿಕೋಧ್ಯಮದ ಹಿರಿಯ ಪತ್ರಕರ್ತ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಹಾಗೂ ಹಿರಿಯ ನ್ಯಾಯವಾದಿ ದ್ವಾರಕನಾಥ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಮುಂದಾಗಿರುವುದು ಹೊಸ ಬೆಳವಣಿಗೆ.
ಪತ್ರಕರ್ತ ರಂಗನಾಥ್, ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ಮುಕ್ತ ಆಹ್ವಾನ ಕೊಟ್ಟಿದ್ದರು. ಪೌರತ್ವ ಕಾಯ್ದೆ ಉಲ್ಲಂಘಿಸುತ್ತಿರುವವರು ನನ್ನೊಡನೆ ಮುಕ್ತ ಚರ್ಚೆಗೆ ಬರಲಿ ಎಂದಿದ್ದರು. ಈ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ದ್ವಾರಕನಾಥ್, ಚರ್ಚೆಗೆ ನಾ ರೆಡಿ ಎಂದಿದ್ದಾರೆ. ಈ ಸಂಬಂಧ ಅವರು ಬರೆದಿರುವ ಪತ್ರ ಹೀಗಿದೆ…

“ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಕಾಯಿದೆಯಲ್ಲಿ ಏನು ತಪ್ಪಿದೆ..? ಇದನ್ನು ವಿರೋಧಿಸುವವರು ನನ್ನೊಂದಿಗೆ ಚರ್ಚೆಗೆ ಬರಲಿ.. ನಮ್ಮ ಛಾನೆಲ್ ನಲ್ಲಿ ಅವಕಾಶ ನೀಡುತ್ತೇನೆ..” ಎಂದು ಅರ್ಥ ಬರುವಂತೆ ಪಬ್ಲಿಕ್ ಟೀವಿಯ ರಂಗನಾಥ್ ಅವರು ಕರ್ನಾಟಕದ ‘ಪಬ್ಲಿಕ್ಕಿ’ಗೆ ಆಹ್ವಾನ ನೀಡಿದ ವಿಷಯ ತಿಳಿಯಿತು. ಪಬ್ಲಿಕ್ ಟೀವಿಯ ರಂಗನಾಥ್ ಅವರ ಈ ಕರೆಯನ್ನು ನಾನು ನೋಡಿರಲಿಲ್ಲ ಆದರೆ ಈ ಬಗ್ಗೆ ಅನೇಕರು ಹೇಳಿದ್ದರಿಂದ ಇದನ್ನು ಸತ್ಯ ಎಂದೇ ಭಾವಿಸಿದ್ದೇನೆ. ಪಬ್ಲಿಕ್ ಟೀವಿ ರಂಗನಾಥ್ ಅವರ ಈ ಆಹ್ವಾನವನ್ನು ನಾಡಿನ ಪಬ್ಲಿಕ್ ಪರವಾಗಿ ನಮ್ರವಾಗಿ ಸ್ವೀಕರಿಸುತಿದ್ದೇನೆ. ನಾನು ಚರ್ಚೆಗೆ ಬರಲು ಸಿದ್ದವಾಗಿದ್ದೇನೆ. ಆದರೆ, ನನ್ನದೂ ಒಂದೆರಡು ಸಣ್ಣ ಶರತ್ತುಗಳಿವೆ !?

ರಂಗನಾಥ್ ಮತ್ತು ನಾನು ಸುಮಾರು ಮೂರುನಾಲ್ಕು ದಶಕಗಳಷ್ಟು ಪರಿಚಿತರು. ಅವರು ‘ಕನ್ನಡ ಪ್ರಭ’ಕ್ಕೆ ಕೆಲಸ ಮಾಡುತ್ತಾ ಒಂದು ಸಣ್ಣ ಸುವೇಗಾ ಅಥವಾ ಲೂನಾದಲ್ಲಿ ಓಡಾಡುವಾಗ ನಾನು ವಕೀಲಿ ಕೆಲಸ ಮಾಡಿಕೊಂಡು ಬಿಡುವಾದಾಗ ‘ಲಂಕೇಶ್ ಪತ್ರಿಕೆ’ಗೆ ಕೆಲಸ ಮಾಡುತ್ತಾ ಟಿವಿಎಸ್-50ಯಲ್ಲಿ ಓಡಾಡುತ್ತಿದ್ದೆ. ಅನೇಕ ಸಲ ಇಬ್ಬರೂ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಆದರೆ ನಾವಿಬ್ಬರೂ ಮೂಲಭೂತವಾಗಿ ವಿರುದ್ದ ಸಿದ್ದಾಂತಗಳನ್ನು ನಂಬಿದವರಾದ್ದರಿಂದ ಯಾವುದೇ ವಿಷಯದ ಬಗ್ಗೆ ಏಕಾಭಿಪ್ರಾಯವಿರುತ್ತಿರಲಿಲ್ಲ.‌(ರಂಗನಾಥ್ ಇದನ್ನು ಒಪ್ಪಲಾರರು!? ಯಾಕೆಂದರೆ ಅವರ ಪ್ರಕಾರ ಅವರು ಅಪ್ಪಟ ಪತ್ರಕರ್ತರೇ ಹೊರತು ಯಾವುದೇ ಸಿದ್ದಾಂತಕ್ಕೆ ಕಟ್ಟುಬಿದ್ದವರಲ್ಲ!!) ಆದರೂ ನಮ್ಮ ಮಾತುಕತೆಗೇನೂ ಅಡ್ಡಿಯಿರಲಿಲ್ಲ! ಇದಾದ ನಂತರ ಅವರು ಪಬ್ಲಿಕ್ ಟೀವಿ ಆರಂಬಿಸಿದ ಮೇಲೆ ಸುಮಾರು ಸಲ ನಾವಿಬ್ಬರೂ ಚರ್ಚೆ, ಸಂವಾದ, ಪ್ರತಿಕ್ರಿಯೆಗಳಲ್ಲಿ ಭಾಗಿಯಾಗಿದ್ದೇವೆ. ತಮಾಷೆ ಮಾಡಿಕೊಂಡಿದ್ದೇವೆ, ಸೂಕ್ಷ್ಮವಾಗಿ ಪರಸ್ಪರ ಕಾಲೆಳೆದುಕೊಂಡಿದ್ದೇವೆ! ಬಿನ್ನಾಬಿಪ್ರಾಯಗಳನ್ನಿಟ್ಟುಕೊಂಡೇ ಒಬ್ಬರನ್ನೊಬ್ಬರು ಗೌರವಿಸುತ್ತ ಮುನ್ನಡೆದಿದ್ದೇವೆ. ಈ ಚರ್ಚೆಯೂ ಕೂಡ ಇದರ ಮುಂದುವರೆದ ಭಾಗವಾಗಲೆಂದು ಭಾವುಸುತ್ತೇನೆ..
ಹಾಗೆ ನೋಡಿದರೆ ಪೇಜಾವರಶ್ರೀಗಳಂತೆಯೇ ರಂಗನಾಥ್ ರೊಂದಿಗೆ ಕೂಡ ಜಗಳ ಆಡುವಷ್ಟಾದರೂ ಸ್ನೇಹ ಇಟ್ಟುಕೊಳ್ಳಬಹುದು ಎನಿಸುತ್ತದೆ. ಯಾಕೆಂದರೆ ಇವರಿಬ್ಬರಲ್ಲಿ ಕೆಲವು ಸಾಮ್ಯಗಳಿದ್ದಂತಿವೆ!? ಪೇಜಾವರಶ್ರೀಗಳು ಆಗಾಗ ದಲಿತಕೇರಿಗೆ ಹೋಗುವಂತೆಯೇ ರಂಗನಾಥ್ ಕೂಡ ಆಗಾಗ ‘ಪ್ರಗತಿಪರ’ವಾಗಿ ಮಾತನಾಡುತ್ತಾ ಅನೇಕ ವಿಷಯಗಳಲ್ಲಿ ಪೇಜಾವರರಿಗೆ ಹೋಲುತ್ತಾರೆ!? ರಂಗನಾಥರ ವಯಸ್ಸಿನಲ್ಲಿ ಪೇಜಾವರರೂ ಕೂಡ ರಂಗನಾಥರಂತೆಯೇ ಇದ್ದರೇನೋ ಎನ್ನುವಂತೆ ಕಾಣುತ್ತಾರೆ! ಕೃಷ ದೇಹ, ಕುಳ್ಳಗಿನ‌ ಆಕೃತಿ, ಕುರುಚಲುಕುರುಚಲಾಗಿ ಕಾಣುವ ಮಾಧ್ವಗಡ್ಡ ಎಲ್ಲವೂ ಸೇಮ್ ಟು ಸೇಮ್! ಪೇಜಾವರಶ್ರೀಗಳಿಗೆ ದ್ವನಿ ಗಟ್ಟಿಯಾಗಿರಲಿಲ್ಲ ಕೀರಲು, ಆದರೆ ರಂಗನಾಥರ ದ್ವನಿಯಂತೂ ಗಡಸು! ಎಂತವರ ‘ಎದೆ’ಯನ್ನೂ  ಗಡಗಡನೆ ನಡುಗಿಸಿಬಿಡುತ್ತದೆ! ಈ ಕಾರಣಕ್ಕೇ ಅನೇಕ ಮಂದಿ ರಾಜಕಾರಣಿಗಳು ಪೇಜಾವರರ ಪಾದಗಳಿಗೆ ಬಿದ್ದಂತೆಯೇ ರಂಗನಾಥರ ಕೈಗೆ ಸಿಕ್ಕಾಗ ಅವರ ಪಾದಕ್ಕೂ ಬಿದ್ದೇಬಿಡುವಂತೆ “ರಂಗಣ್ಣ.. ರಂಗಣ್ಣ” ಎಂದು ನಮ್ಮ ಕವಿ ಕಂಬಾರರಂತೆ ಕಾಲುಗಳನ್ನು ಹುಡುಕಾಡುತ್ತಾ ಪರದಾಡುತ್ತಾರೆ! ಪೇಜಾವರಶ್ರೀಗಳು ತಮ್ಮ ವೈಧಿಕತ್ವವನ್ನು ಮುಗ್ದವಾಗಿ, ನೇರವಾಗಿ ಸಮರ್ಥಿಸಿಕೊಂಡರೆ, ರಂಗನಾಥ್ ಅದನ್ನು ವಿರೋಧಿಸುವವರಂತೆ ಮಾತಿನ‌ ಸರಣಿ ಆರಂಭಿಸಿ, ಗೊಂದಲಗೊಳಿಸಿ ಅದನ್ನು ಸಮರ್ಥಿಸುವ ಬುದ್ದಿವಂತಿಕೆಯ ರಕಮ್ಮೇ ಬೇರೆ!!
ಯಾರು ಏನೇ ಹೇಳಲಿ, ಯಾರಿಗೂ ಮುಲಾಜು ನೋಡದ ರಂಗನಾಥರ ನೇರ ನುಡಿ ನನಗಿಷ್ಟ! ವಿಷಯವನ್ನು ಸಮರ್ಥಿಸಿದಂತೆಯೇ ಕಾಣಿಸಿ ವಿರೋಧಿಸುವ, ವಿರೋದಿಸುತ್ತಿದ್ದಾರೆಂದೇ ನಂಬಿಸಿ, ದ್ವನಿ ಏರಿಸಿ, ಮನವರಿಕೆ ಮಾಡಿ ಸಮರ್ಥಿಸುವ ಚಾಕಚಕ್ಯತೆ ಕನ್ನಡ ದೃಷ್ಯ ಮಾದ್ಯಮದಲ್ಲಿ ಬೇರಾರಿಗೂ ಬರಲಿಕ್ಕೆ ಸಾದ್ಯವಿಲ್ಲ! ಜಗತ್ತಿನ ಯಾವುದೇ ವಿಷಯಗಳ ಬಗ್ಗೆ ಅವರಿಗಿರುವ ಅಪಾರ ಜ್ನಾನ ಮತ್ತು ವಿಷಯಕ್ಕೆ ಸಂಭಂದಿಸಿದಂತೆ ಮಾಡಿಕೊಳ್ಳುವ ಸಿದ್ದತೆ ಕೂಡ ಯಾವ ದೃಷ್ಯಮಾದ್ಯಮದ ಪತ್ರಕರ್ತರಿಗೂ ಬರಲು ಸಾದ್ಯವಿಲ್ಲ! ಕೆಲವೊಮ್ಮೆ ಒಂದಷ್ಟು ಎಕ್ಸೈಟ್ ಆಗುತ್ತಾರೇನೋ ಎನಿಸುತ್ತೆ!? ಈ ಕಾರಣಕ್ಕೇ ಮಂಗಳೂರಿನ ವಿಮಾನಾಪಘಾತ ಹೇಗಾಗಿರಬಹುದೆಂದು ತಜ್ನರೇ ತಲೆಕೆಡಿಸಿಕೊಂಡು ಕುಂತಿರುವಾಗ ರಂಗಣ್ಣ ತನ್ನ ಕೈಯಲ್ಲಿ ವಿಮಾನದ ಪುಟ್ಟ ಗೊಂಬೆಯನ್ನು ಹಿಡಿದು ವಿಮಾನಾಪಘಾತ ಹೇಗಾಯಿತೆಂದು  ಕನ್ನಡಿಗರಿಗೆ ತಿಳಿಸಿಬಿಟ್ಟಿದ್ದರು!! ಎರಡು ಸಾವಿರದ ಹೊಸ ನೋಟಿನಲ್ಲಿ ಇವರು ಚಿಪ್ಪನ್ನು ತೋರಿಸಿದ್ದೂ ಹೀಗೆಯೇ..!! ಇಂತವು ಅನೇಕ ಸಲ ಆಗಿವೆ..!


ದಿನನಿತ್ಯ‌ ಅಲ್ಲದಿದ್ದರೂ ನಾನು ಸಮಯವಿದ್ದಾಗಲೆಲ್ಲ ‘ಪಬ್ಲಿಕ್ ಟೀವಿ‌’ಯ ಒಂಬತ್ತರ ನ್ಯೂಸ್ ಅನ್ನು ನೋಡಿಯೇ ನೋಡುತ್ತೇನೆ. ಅದರಲ್ಲಿ ರಂಗಣ್ಣನ ‘ಪಕ್ಕವಾದ್ಯ’ದವರು ಕೇಳುವ ‘ಗಂಭೀರ ಪ್ರಶ್ನೆ’ಗೆ “ನನಗೇನು ಗೊತ್ತು..?” ಎಂದು ಹೇಳಿಯೇ ಕನಿಷ್ಟ ಆ ಪ್ರಶ್ನೆಯನ್ನು ತಮ್ಮ ಮೂಗಿನ ನೇರಕ್ಕೆ ವಿಶ್ಲೇಶಿಸುವುದು! ತಮಗೆ ಅಪಥ್ಯವಾದುದನ್ನು ಅಲ್ಲೇ ಬಿಟ್ಟು “ಆಲ್ ರೈಟ್.. ಮುಂದಕ್ಕೋಗೋಣ..” ಎನ್ನುವುದು ಅತ್ಯಂತ ಮೋಜಿನದಾಗಿರುತ್ತೆ! ನಾನು ಈ ನ್ಯೂಸ್ ಕಾರ್ಯಕ್ರಮ ನೋಡಲಿಕ್ಕೆ ಮತ್ತೊಂದು ಕಾರಣ ಜಾಗೃತಗೊಂಡ ವೈದಿಕ ಮನಸ್ಸೊಂದು ದೈನಂದಿನ ಸಾಮಾಜಿಕ ಆಗುಹೋಗುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೆ ಎಂಬುದನ್ನು ಅರಿಯುವ ಪ್ರಯತ್ನವಾಗಿ ಕೂಡ! ಅದೆಲ್ಲ ಇರಲಿ ಈಗ ವಿಷಯಕ್ಕೆ ಬರುವುದಾದರೆ, ರಂಗಣ್ಣನ ಆಹ್ವಾನವನ್ನು ಸ್ವೀಕರಿಸುತ್ತಾ ನನ್ನ ಒಂದೆರಡು ಶರತ್ತುಗಳನ್ನು ಹೇಳುತ್ತೇನೆ..?
ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಗಳಿಂದ ಮುಸ್ಲಿಂ ಜನಾಂಗಕ್ಕಾಗಲಿ ಅಥವ ಮತ್ಯಾವುದೇ ಜನಾಂಗಕ್ಕಾಗಲಿ ಯಾವುದೇ ರೀತಿಯ ತೊಂದರೆ ಯಾಗಲ್ಲ ಎನ್ನುವ ಸರ್ಕಾರದ ವಾದವನ್ನೇ, ಸರ್ಕಾರವನ್ನು ‘ನಿಷ್ಠುರವಾಗಿ’ ನೋಡುವ ರಂಗನಾಥ್ ಕೂಡ ಎತ್ತಿರುವುದು! ಇದನ್ನು ಇಂದು ಸಂಘಪರಿವಾರದವರು ಹಾಗೂ ಇವರನ್ನು ಕಣ್ಣುಮುಚ್ಚಿ ಬೆಂಬಲಿಸುವ ಕೆಲ ‘ಭಕ್ತ’ರನ್ನು ಬಿಟ್ಟರೆ ಇಡೀ ದೇಶಕ್ಕೆ ದೇಶವೇ ವಿರೋಧಿಸುತ್ತಿದೆ. ಅದರಲ್ಲೂ ಈ ದೇಶದ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮುಂಚೂಣಿಯಲ್ಲಿರುವುದು ಗಮನಾರ್ಹ? ಇಂತಹ ಗಂಭೀರ ವಿಷಯವನ್ನು ಪಬ್ಲಿಕ್ ನಲ್ಲಿ ಚರ್ಚಿಸಿ ಜನಕ್ಕೆ ಒಂದು ಸ್ಪಷ್ಟತೆ ನೀಡುವುದು ಅಗತ್ಯವಾಗಿರುವುದರಿಂದ ರಂಗನಾಥ್ ರವರು ಈ ಕೆಲಸಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದನ್ನು ಚರ್ಚಿಸಬೇಕಿರುವುದು ರಂಗನಾಥ್ ಅವರ ‘ಪಬ್ಲಿಕ್ ಟೀವಿ’ ಎಂಬ ಖಾಸಗಿ ಛಾನೆಲ್ ನಲ್ಲಿ ಅಲ್ಲ.. ಪಬ್ಲಿಕ್ ನಲ್ಲಿ..!?  ಯಾಕೆಂದರೆ ಇದು ಸಾರ್ವಜನಿಕ ಚರ್ಚೆಯಾಗಬೇಕು.. ಆದ್ದರಿಂದ ನಾವೇ ಕುಂತು ಒಂದು ಪಬ್ಲಿಕ್ ಜಾಗವನ್ನು ನಿಗದಿಪಡಿಸೋಣ, ಸಮಯ, ದಿನಾಂಕ ಎಲ್ಲಾ ವಿವರಗಳನ್ನು ಗೊತ್ತುಪಡಿಸಿಕೊಂಡು ರಂಗನಾಥರ ‘ಪಬ್ಲಿಕ್ ಟೀವಿ’ಯನ್ನೂ ಸೇರಿಸಿದಂತೆ ಕನ್ನಡದ ಮತ್ತು ದೇಶದ ಎಲ್ಲಾ ದೃಷ್ಯಮಾದ್ಯಮಗಳ‌ನ್ನೂ, ಎಲ್ಲಾ ಪತ್ರಿಕೆಗಳನ್ನು ಕರೆಯೋಣ. ನಿಮ್ಮಂತೆ ಪರ ಮಾತನಾಡುವ ಹತ್ತು ಜನಕ್ಕೆ ಮೀರದಂತೆ ಸರ್ಕಾರದ ಪ್ರತಿನಿಧಿಗಳನ್ನೋ ಅಥವ ಇತರೇ ತಜ್ನರನ್ನೋ ನೀವೂ ಕರೆತನ್ನಿ, ನಾನೂ ಸಹ ಈ ಕಾಯಿದೆಗಳನ್ನು ಯಾಕೆ ವಿರೋಧಿಸಬೇಕು ಎನ್ನುವ ಹತ್ತು ಜನ ಜನಸಾಮಾನ್ಯರನ್ನು ಕರೆತರುತ್ತೇನೆ. ಎರಡೂ ಕಡೆಗಳಿಂದ ಕೂಗು ಮಾರಿಗಳು ಬರುವುದು ಬೇಡ. ಯಾಕೆಂದರೆ ಜನಸಾಮಾನ್ಯರಿಗೆ ವಿಷಯ ಅರ್ಥವಾಗಲಿ ಎನ್ನುವುದು ನಮ್ಮ ಉದ್ದೇಶ ಆಗಿರಬೇಕೇ ಹೊರತು ಖಂಡಿತ ವಾದ ಗೆಲ್ಲುವುದಲ್ಲ.
ಇದೇ ಕಾರಣಕ್ಕೆ ಒಬ್ಬ ನ್ಯಾಯಮೂರ್ತಿಯ ಮನಸ್ಥಿತಿಯುಳ್ಳ ಕೂಗುಮಾರಿಯಲ್ಲದ ಒಬ್ಬ ಆ್ಯಂಕರ್ ಅನ್ನು ಕೂಡ ಇಟ್ಟುಕೊಂಡರೆ ಒಳಿತು. ಟಿ.ವಿ.9 ನ ಹರಿಪ್ರಸಾದ್ ರೀತಿಯವರು ಯಾರೇ ಆದರೂ ಒಳ್ಳೆಯದು.
ಈ ಬರಹವನ್ನು ಗೆಳೆಯ ರಂಗನಾಥ್ ರವರಿಗೆ ತಲುಪಿಸುತ್ತೇನೆ. ಅವರು ಪಬ್ಲಿಕ್ ನಲ್ಲಿ ಕರೆ ನೀಡಿರುವುದರಿಂದ ನಾನು ನನ್ನ ಬರಹವನ್ನೂ ಕೂಡ ಮಾಧ್ಯಮಗಳ ಮೂಲಕವೇ ಪಬ್ಲಿಕ್ ನಲ್ಲಿ ನಿವೇದಿಸುತಿದ್ದೇನೆ.
ಇದನ್ನು ಬರೆಯುವಾಗಲೇ ದೆಹಲಿಯ JNU ನಲ್ಲಿ ಮುಸುಕುದಾರಿಗಳು ಶಸ್ತ್ರಸಜ್ಜಿತರಾಗಿ ಇಲ್ಲಿನ ಅಮಾಯಕ ವಿದ್ಯಾರ್ಥಿಗಳು ಮತ್ತು ಅದ್ಯಾಪಕರ ಮೇಲೆ ಮಾರಣಾಂತಿಕ ಅಮಾನುಷ ಹಲ್ಲೆ ನಡೆಸಿದ್ದಾರೆ!! ಇದನ್ನೂ ಕೂಡ ಕೆಲ ಮಾದ್ಯಮಗಳು ಎರಡು ಗುಂಪಿನ ನಡುವೆ ನಡೆದ ಹೊಡೆದಾಟದಂತೆ ಬಿಂಬಿಸುತ್ತಿದೆ! ಕಾಯಿದೆಯ ಚರ್ಚೆಯೊಂದಿಗೆ ನಾವು ಈ ಹಲ್ಲೆಯ ಸತ್ಯಾಸತ್ಯತೆಯ ಬಗ್ಗೆಯೂ ‘ಪಬ್ಲಿಕ್ಕಿ’ನಲ್ಲಿ ಚರ್ಚಿಸುವುದು ಅಗತ್ಯವೆನಿಸುತ್ತದೆ..
– ಸಿ.ಎಸ್‌.ದ್ವಾರಕಾನಾಥ್

key words : CAA- public.debate-h.r.ranganath-journalist-c.s.dwarakanath-advocate-karnataka