ಮ್ಯಾನೇಜ್​ವೆುಂಟ್ ಸೀಟುಗಳ ಮಾರಾಟಕ್ಕೆ ಬ್ರೇಕ್: ಉಳಿಕೆ ಮೆಡಿಕಲ್ ಸೀಟೂ ಆನ್​ಲೈನ್​ನಲ್ಲೇ ಭರ್ತಿ

ಬೆಂಗಳೂರು:ಮೇ-21: ಕೋಟಿ ಕೋಟಿಗೆ ಬಿಕರಿಯಾಗುವ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್​ಗಳ ಸೀಟುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕೆ ಸೀಟುಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಆ ಪ್ರಕಾರ ಇನ್ನುಮುಂದೆ ಮ್ಯಾನೇಜ್​ವೆುಂಟ್ ಸೀಟುಗಳನ್ನೂ ಆನ್​ಲೈನ್ ಮೂಲಕವೇ ಭರ್ತಿ ಮಾಡಬೇಕಿದೆ.

ಈವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್​ಜಿಯುಎಚ್​ಎಸ್) ಪಿಜಿ ಕೋರ್ಸ್​ಗಳಿಗೆ ಪ್ರವೇಶ ಕಲ್ಪಿಸುತ್ತಿತ್ತು. ಕಳೆದ ವರ್ಷದಿಂದ ಇದರ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ವಹಿಸಲಾಗಿದೆ. ಕಳೆದ ತಿಂಗಳು ಕೌನ್ಸೆಲಿಂಗ್ ಮೂಲಕ 2019-20ನೇ ಸಾಲಿನ ಸೀಟು ಹಂಚಿಕೆ ಮಾಡಲಾಗಿದೆ. ಆನಂತರ 700ಕ್ಕೂ ಹೆಚ್ಚಿನ ಮ್ಯಾನೇಜ್​ವೆುಂಟ್ ಸೀಟುಗಳು ಖಾಲಿ ಉಳಿದುಕೊಂಡಿವೆ. ಸರ್ಕಾರಿ ಕೋಟಾದಲ್ಲಿರುವ ಈ ಸೀಟುಗಳನ್ನು ಸರ್ಕಾರ ಮತ್ತು ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಒಪ್ಪಂದದ ಮೇರೆಗೆ ಮ್ಯಾನೇಜ್​ವೆುಂಟ್ ಸೀಟುಗಳಾಗಿ ಪರಿವರ್ತಿಸಿಕೊಳ್ಳಲಾಗುತ್ತದೆ. ಆನಂತರ ಕಾಲೇಜುಗಳು ಈ ಸೀಟುಗಳನ್ನು ಹರಾಜಿನಲ್ಲಿ ಬಿಡ್ ಮಾಡುವಂತೆ ಹೆಚ್ಚಿನ ಬೆಲೆ ನಿಗದಿ ಮಾಡಿದವರಿಗೆ ನೀಡುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆರ್​ಜಿಯುಎಚ್​ಎಸ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಜತೆಗೂಡಿ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್​ಐಸಿ) ಮೂಲಕ ಹೊಸ ಪೋರ್ಟಲ್ ಆರಂಭಿಸಿದೆ.

ಆಯ್ಕೆ ಹೇಗೆ?: ಕೆಇಎಗೆ ಸೀಟ್ ಮ್ಯಾಟ್ರಿಕ್ಸ್ ನೀಡುವಾಗಲೇ ಕೆಇಎ ಕಾಲೇಜುಗಳಿಗೆ ಯೂಸರ್ ಐಡಿ, ಪಾಸ್​ವರ್ಡ್ ನೀಡಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳ ಮಾಹಿತಿ ಅಪ್​ಲೋಡ್ ಮಾಡಬೇಕಿದೆ. ಇದನ್ನು ಹೊರತುಪಡಿಸಿ ಮತ್ತೆ ಯಾವುದೇ ರೀತಿಯಲ್ಲಿ ಪ್ರವೇಶ ಪಡೆದುಕೊಳ್ಳು ವಂತಿಲ್ಲ ಎಂದು ಆರ್​ಜಿಯುಎಚ್​ಎಸ್ ಸ್ಪಷ್ಟವಾಗಿ ತಿಳಿಸಿದೆ.

ಉಳಿಕೆಯಾದ ಸೀಟು

ರಾಜ್ಯದಲ್ಲಿ 80ಕ್ಕೂ ಹೆಚ್ಚಿನ ಕಾಲೇಜುಗಳು ಪಿ.ಜಿ. ಮತ್ತು ದಂತ ವೈದ್ಯಕೀಯ ಕೋರ್ಸ್ ನಡೆಸುತ್ತಿವೆ. 2019-20ನೇ ಸಾಲಿನಲ್ಲಿ ಪಿ.ಜಿ. ವೈದ್ಯಕೀಯ 2,602 ಮತ್ತು ದಂತವೈದ್ಯಕೀಯ 910 ಸೀಟುಗಳಿದ್ದವು. ಈ ಪೈಕಿ ಕ್ರಮವಾಗಿ 540 ಮತ್ತು 230 ದಂತವೈದ್ಯಕೀಯ ಸೀಟುಗಳು ಉಳಿಕೆಯಾಗಿವೆ.

ಕೋಟಿಗೆ ಬಿಡ್

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಬಿಡ್ ಮಾಡಲಿದ್ದು, ರೇಡಿಯೋಲಜಿ ಕೋರ್ಸ್​ಗೆ ಹೆಚ್ಚಿನ ಬೇಡಿಕೆ ಇದೆ. ಮೂಲಗಳ ಪ್ರಕಾರ, 3 ಕೋಟಿ ರೂ.ಗೆ ಬಿಡ್ ಆಗಲಿದೆ. ಮ್ಯಾನೇಜ್​ವೆುಂಟ್ ಕೋಟಾ ಆಗಿರುವುದರಿಂದ ಬಹುತೇಕ ನಿಯಮಗಳನ್ನು ಪಾಲಿಸುವುದಿಲ್ಲವೆಂಬುದು ಸ್ಪಷ್ಟ. ಈ ಬಾರಿಯೂ ರೇಡಿಯೋಲಜಿಯ ಒಂದೂ ಸೀಟು ಉಳಿಕೆಯಾಗಿಲ್ಲ. ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, ಜೀವರಸಾಯನಶಾಸ್ತ್ರದಲ್ಲಿ ಮಾತ್ರವೇ ಸೀಟುಗಳು ಉಳಿದಿವೆ.

ಸರ್ಕಾರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

| ಚಂದ್ರಿಕಾ ಸೀಟು ವೈದ್ಯಕೀಯ ಸೀಟು ಆಕಾಂಕ್ಷಿ
ಕೃಪೆ:ವಿಜಯವಾಣಿ
break-for-sale-of-management-seats-remaining-medical-seat-is-filled-out-online