ಬೆಳಗಾವಿ ಮುಂತಾದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು : ನಿರ್ಣಯ ಅಂಗೀಕಾರ

ಮುಂಬೈ,ಡಿಸೆಂಬರ್,27,2022(www.justkannada.in): ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಲೇ ಇದ್ದು ಇಂದು ವಿವಾದಾತ್ಮಕ ನಿರ್ಣಯವೊಂದನ್ನು ಅಂಗೀಕರಿಸಿದೆ.

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ  ವಿವಾದಾತ್ಮಕ ನಿರ್ಣಯವನ್ನು ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಅಧಿವೇಶನದಲ್ಲಿ ಗಡಿವಿವಾದ ಕುರುತು ವ್ಯಾಪಕ ಚರ್ಚೆ ನಡೆಯಿತು. ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ ಕರ್ನಾಟಕದ ಗಡಿಭಾಗದಲ್ಲಿ ನಡೆದ ಚಳವಳಿಯಲ್ಲಿ ಮಡಿದ ಮರಾಠಿ ಭಾಷಿಕರನ್ನು ಹುತಾತ್ಮರೆಂದು ಪರಿಗಣಿಸಿ ಅವರಿಗೆ ಸ್ವಾತಂತ್ರ್ಯ ಯೋಧರ ಕುಟುಂಬಳಿಗೆ ನೀಡುವ ಮಾಸಿಕ 20 ಸಾವಿರ ರೂ.ಪಿಂಚಣಿ ನೀಡಲಾಗುವುದು. ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಎರಡು ಸಾವಿರ ಕೋಟಿ ರೂ.ಗಳ ಮಂಜೂರು ಮಾಡಲಾಗಿದೆ ಎಂದರು.

ಕರ್ನಾಟಕದ 865 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿಗರಿಗೆ ಮಹಾರಾಷ್ಟ್ರದಲ್ಲಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಅಲ್ಲದೇ ಬೆಳಗಾವಿ ಸಹಿತ ಎಲ್ಲ ಗ್ರಾಮ ಪಟ್ಟಣಗಳಲ್ಲಿ ನೋಂದಾಯಿತ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುವುದು. 2004ರಲ್ಲಿ ಮಹಾರಾಷ್ಟ್ರ ಸರಕಾರ  ಸುಪ್ರೀಂಕೋರ್ಟ್ ನಲ್ಲಿ ದಾಖಲಿಸಿರುವ ಗಡಿವಿವಾದ ದಾವೆಯಲ್ಲಿ ವಾದಿಸುವ ಸಲುವಾಗಿ ಹಿರಿಯ ಸಂವಿಧಾನ ತಜ್ಞರನ್ನು ನೇಮಿಸಲಾಗಿದೆ. ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರನ್ನೂ ಸಹ ಸಂಪರ್ಕಿಸಲಾಗಿದ್ದುಅವರೂ ವಾದ ಮಂಡನೆಗೆ ಒಪ್ಪಿದ್ದಾರೆ.

ಛಗನ್ ಭುಜಬಲ ಅವರೇ ನೀವೂ ಬೆಳಗಾವಿ ಗಡಿ ಚಳವಳಿಯಲ್ಲಿ ಲಾಠಿಏಟು ತಿಂದಿದ್ದೀರಿ. ನಾನೂ ಆಲ್ಲಿ ಕಾರಾಗೃಹ ವಾಸ ಅನುಭವಿಸಿದ್ದೇನೆ” ಎಂದು ಶಿಂಧೆ ಹೇಳಿದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತಾನಾಡುತ್ತ ಒಂದು ಹಂತದಲ್ಲಿ  ಸರ್ವೋಚ್ಚ ನ್ಯಾಯಾಲಯದಲ್ಲಿ ಗಡಿವಿವಾದ ಪ್ರಕರಣ ಬಾಕಿಯಿದ್ದು ನಾವು ಅಂಗೀಕರಿಸುವ ನಿರ್ಣಯವು ನ್ಯಾಯಾಂಗ ನಿಂದನೆ ಆಗಬಹುದೆ? ಎಂಬುದನ್ನೂ ಯೋಚಿಸಬೇಕು ಎಂದರು.

ಡಿಸೆಂಬರ್ 14 ರಂದು ಕೇಂದ್ರ ಗೃಹಸಚಿವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ನಂತರವೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿವಿವಾದವನ್ನು ಮತ್ತೆ ಮತ್ತೆ ಕೆದಕುತ್ತಿದ್ದಾರೆ ಎಂದು ಸದನದಲ್ಲಿ ಮಾತನಾಡಿದ ಮುಖಂಡರು ಆರೋಪಿಸಿದರು. ಸಭಾಧ್ಯಕ್ಷರು ವಿವಾದಾತ್ಮಕ ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕಾರವಾಯಿತು.

Key words: Border-Dispute-Maharashtra- Govt -Passes –Controversial- Resolution