ಬಿಎಂಟಿಸಿ ಬಸ್ ಬೆಂಕಿಗಾಹುತಿ, 10 ದಿನಗಳಲ್ಲಿ ಎರಡನೇ ಘಟನೆ.

ಬೆಂಗಳೂರು, ಫೆಬ್ರವರಿ,2,2022 (www.justkannada.in): ಜಯನಗರದದಲ್ಲಿ 25 ಪ್ರಯಾಣಿಕರಿದ್ದಂತಹ ಬಿಎಂಟಿಸಿ ಬಸ್ಸೊಂದು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪೊಲೀಸರ ಪ್ರಕಾರ, ಡಿಪೊ ಸಂಖ್ಯೆ ೪೪ರ ಬಸ್ ಮಾರ್ಗ ಸಂಖ್ಯೆ ೨೧೫ಹೆಚ್, ರಿಜಿಸ್ಟ್ರೇಷನ್ ಸಂಖ್ಯೆ ಕೆಎ-೬೭-ಎಫ್-೧೫೮೬ ಬಸ್, ಸೌತ್ ಎಂಡ್ ವೃತ್ತದದಲ್ಲಿ ನಂದಾ ಟಾಕೀಸ್ ಬಳಿ ಸುಮಾರು ಮಧ್ಯಾಹ್ನ ೧.೧೫ರ ಸುಮಾರಿಗೆ ಬೆಂಕಿ ಹೊತ್ತುಕೊಂಡಿತು. ಬೆಂಕಿಯನ್ನು ಗಮನಿಸಿದ ಬಸ್ ಚಾಲಕ ಕೆಂಪರಾಜು ಕೂಡಲೇ ಕೆಳಗಿಳಿದು ಪ್ರಯಾಣಿಕರೆಲ್ಲರನ್ನೂ ಕೆಳಗಿಳಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಬಸ್‌ನ ನಿರ್ವಾಹಕ ಮಂಟಪ್ಪ ಅವರ ಜೊತೆ ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಜೊತೆಗೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಗಳಿಗೆ ಮಾಹಿತಿಯನ್ನೂ ತಲುಪಿಸಿದರು. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುಂಚೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಜಯನಗರ ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನದ ಬ್ಯಾಟರಿಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಅಂದಾಜಿಸಿದ್ದಾರೆ. ನಿಜವಾದ ಕಾರಣ ತಿಳಿಯಲು ತಜ್ಞರ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಬಿಎಂಟಿಸಿ ಅಧಿಕಾರಿಯೊಬ್ಬರ ಪ್ರಕಾರ ಈ ಬಸ್ಸನ್ನು ೨೦೧೪ರಲ್ಲಿ ಪ್ರಮುಖ ತಯಾರಕ ಸಂಸ್ಥೆಯೊಂದರಿಂದ ಖರೀದಿಸಲಾಯಿತಂತೆ. ಈ ವಾಹನವನ್ನು ಕೋವಿಡ್-೧೯ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಕಷ್ಟು ಉಪಯೋಗಿಸಲಾಗಿತ್ತು. ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಕ್ರಮಬದ್ಧವಾಗಿ ಬಳಸಲಾಗುತಿತ್ತು.

ಜನವರಿ ೨೧ರಂದು ಚಾಮರಾಜಪೇಟೆಯಲ್ಲಿ ಇದೇ ರೀತಿ ಮತ್ತೊಂದು ಬಿಎಂಟಿಸಿ ಬಸ್ ಬೆಂಕಿಗೆ ಆಹುತಿಯಾಗಿತ್ತು. ಆ ವಾಹನವನ್ನೂ ಸಹ ಇದೇ ಕಂಪನಿಯಿಂದ ಖರೀದಿಸಲಾಗಿದೆ ಎನ್ನಲಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: BMTC- bus –fire-second incident