ತಾಕತ್ತಿದ್ದರೇ ಸಿಎಂ ಮತ್ತು ವಿಶ್ವಗುರು ಸೇರಿಸಿಕೊಂಡು ಪಾದಯಾತ್ರೆ ಮಾಡಲಿ-ಬಿಜೆಪಿ ನಾಯಕರಿಗೆ ಎಂ. ಲಕ್ಷ್ಮಣ್  ತಿರುಗೇಟು.

ಮೈಸೂರು,ಅಕ್ಟೋಬರ್,7,2022(www.justkannada.in) ಪಿಎಫ್‌ ಐ ಸಂಘಟನೆ ನಿಷೇಧಿಸಿರುವ ಬಿಜೆಪಿ ಎಸ್‌ ಡಿಪಿಐ ಸಂಘಟನೆಗೆ ಫಂಡಿಂಗ್ ಮಾಡುತ್ತಿದ್ದಾರೆ. ಧೈರ್ಯವಿದ್ದಲ್ಲಿ ಎಸ್‌ಡಿಪಿಐ ನಿಷೇಧ ಮಾಡಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸವಾಲು ಹಾಕಿದರು.

ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿ ಭಾರತ್ ಜೋಡೋ ಯಾತ್ರೆ ಟೀಕಿಸಿದ ಬಿಜೆಪಿಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್, ಭಾರತ್ ಜೋಡೋ ಯಾತ್ರೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಾಕತ್ತು,ಧಮ್ ಇದ್ದಲ್ಲಿ ಮುಖ್ಯಮಂತ್ರಿ,ವಿಶ್ವಗುರು ಸೇರಿಕೊಂಡು ಪಾದಯಾತ್ರೆ ಮಾಡಲಿ. , ೬೩೦ ಕಿ.ಮೀ ಯಾತ್ರೆ ನಡೆದಿರುವುದಕ್ಕೆ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಗುಜರಾತ್‌ನಲ್ಲಿ ಲಕ್ಷಾಂತರ ಜನರು ಕಾದು ನಿಂತಿದ್ದರೂ ದರ್ಶನ ಕೊಡದೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಪಾದಯಾತ್ರೆ ಮಾಡಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧಮ್,ಶಕ್ತಿ ಇದ್ದರೆ ಹತ್ತು ಕಿ.ಮೀ ಪಾದಯಾತ್ರೆ ಮಾಡಲಿ ನೋಡೋಣ ಎಂದು ಹೇಳಿದರು.

ಧರ್ಮಸಿಂಗ್ ಸರ್ಕಾರ ಇದ್ದಾಗ ಪಿಎಫ್‌ ಐಗೆ ಅನುಮತಿ ನೀಡಿರಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ- ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ಕೊಟ್ಟಿತು. ಅಂದು ರಹಮತುಲ್ಲಾ ಅಸ್ರತ್ ಆಗಿದ್ದ ಆರ್.ಅಶೋಕ್ ಈಗ ಪಿಎಫ್‌ಐ ಭಾಗ್ಯ ಸಿದ್ದರಾಮಯ್ಯ ಅಂತ ಹೇಳಿರುವುದು ನಾಚಿಕೆಗೇಡು. ಬಿಜೆಪಿಯವರು ಅನುಮತಿ ನೀಡಿದಲ್ಲದೆ, ಅವರಿಗೆ ಹಣ ಕೊಟ್ಟು ಬೆಳೆಸಿದ್ದಾರೆ. ಪಿಎಫ್‌ಐ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸುತ್ತಿರುವ ವಕೀಲರು ಬಿಜೆಪಿಗೆ ಸೇರಿದ್ದವರಾಗಿದ್ದಾರೆ ಎಂದು ಕಿಡಿಕಾರಿದರು. ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್,ಜಗದೀಶ್ ಶೆಟ್ಟರ್ ಪಿಎಫ್‌ಐ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪರವಾಗಿ ಮುಸ್ಲಿಮರು ನಿಲ್ಲಬಾರದೆಂದು ಎಸ್‌ಡಿಪಿಐ ಬೆಳೆಯಲು ಕಾರಣವಾಗಿದ್ದಾರೆ. ಈಗ ಕಾಂಗ್ರೆಸ್ ಮೇಲೆಗೂಬೆ ಕೂರಿಸುವಂತೆ ಮಾಡಿ,ಮುಂದೆ ಅವರನ್ನೇ ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಲಿದ್ದಾರೆ ಎಂದು ಹರಿಹಾಯ್ದರು.

ಚುನಾವಣೆ,ರಾಜಕೀಯ ಲಾಭಕ್ಕಾಗಿ ಯಾತ್ರೆ ಮಾಡುತ್ತಿಲ್ಲ.ತಮಿಳುನಾಡು,ಕೇರಳದಲ್ಲಿ ಚುನಾವಣೆ ನಡೆಯಲ್ಲ. ಗುಜರಾತ್‌ನಲ್ಲಿ ಚುನಾವಣೆ ನಡೆಯುವ ವರ್ಷವಾಗಿರುವ ಕಾರಣ ಅಲ್ಲಿ ಯಾತ್ರೆ ಮಾಡಬಹುದಾಗಿತ್ತು. ಈ ಯಾತ್ರೆ ಜನರ ಸಂಕಷ್ಟವನ್ನು ಕೇಳುವ ಜತೆಗೆ ಎಲ್ಲರನ್ನೂ ಒಂದು ಮಾಡಿಸಲು ನಡೆಯುತ್ತಿದೆಯೇ ಹೊರತು ಬಿಜೆಪಿಯವರಂತೆ ಎಲ್ಲದಕ್ಕೂ ಚುನಾವಣೆಯಿಂದ ನೋಡಲ್ಲ ಎಂದು  ವಾಗ್ದಾಳಿ ನಡೆಸಿದರು.

ಎಸ್‌ ಡಿಪಿಐ ಸೇರಿದಂತೆ ಹಲವು ಸಂಘಟನೆಗಳು,ಪಕ್ಷಗಳು ಬಿಜೆಪಿ ಬೆನ್ನಿಗೆ ನಿಂತಿವೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಚದುರುವಂತೆ ನೋಡಿಕೊಳ್ಳಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಣಕಾಸಿನ ನೆರವು ನೀಡುತ್ತಿದೆ. ಇಲ್ಲದಿದ್ದರೆ ಎಸ್‌ ಡಿಪಿಐ ನಿಷೇಧ ಮಾಡಿ ಎಂದರು. ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ.ಮಂಡ್ಯ ಬದಲಾವಣೆ ಆಗಲಿದೆಯೇ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮೈ ಮೇಲೆ ಚೇಳು ಬಿಟ್ಟಿಕೊಂಡಂತೆ ಮಾತನಾಡಿದ್ದಾರೆ. ಮಂಡ್ಯ ಬದಲಾವಣೆಯಾಗಲ್ಲ. ಮಂಡ್ಯವನ್ನು ಬರೆಸಿಕೊಂಡಿಲ್ಲ. ಒಕ್ಕಲಿಗರು ಅವರ ಪ್ಯಾಕೇಟ್‌ನಲ್ಲಿ ಇಲ್ಲ. ಒಕ್ಕಲಿಗರು ನಿಮ್ಮ ಜೇಬಿನಲ್ಲಿ ಇದ್ದರೆ ನಿಮ್ಮ ಪುತ್ರ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ ಎಂದು ಟಾಂಗ್ ನೀಡಿದರು.

Key words: bjp-critisize- Barath jodo-kpcc-spokesperson-M.Lakshman-tong