ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿದ್ದು ಯಾವುದು ಯಶಸ್ವಿಯಾಗಿಲ್ಲ: ಪ್ರಧಾನಿ ಮೋದಿ ವಿರುದ್ದ ಗುಡುಗಿದ ಮಾಜಿ ಸಂಸದ ಆರ್.ಧೃವನಾರಾಯಣ್…

ಮೈಸೂರು,ಸೆ,28,2019(www.justkannada.in):  ನರೇಂದ್ರ ಮೋದಿ ಜನರಿಗೆ ಮಂಕುಬೂದಿ ಬಳಿಯುತ್ತಾರೆ. ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿದ್ದು ಯಾವುದು ಯಶಸ್ವಿಯಾಗಿಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಮಾಜಿ ಸಂಸದ ಆರ್.ದೃವನಾರಾಯಣ್ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಆರ್ ಧೃವನಾರಾಯಣ್ , ಗುಜರಾತ್ ನಲ್ಲಿ 15 ವರ್ಷ ನರೇಂದ್ರ ಮೋದಿ ಸಿಎಂ ಆಗಿದ್ದರು. ಆದರೂ ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಗುಜರಾತ್ ಹಿಂದೆ ಇದೆ. ಕಾಶ್ಮೀರದ ವಿಚಾರವಾಗಿ ಕೇಂದ್ರ ಸರ್ಕಾರ ಸುಳ್ಳು ಪ್ರಚಾರ ಮಾಡುತ್ತಿದೆ. ಜಮ್ಮು ಕಾಶ್ಮೀರ ಪಾಕಿಸ್ತಾನದಲ್ಲಿತ್ತು. ನಾವು ಬಿಡುಗಡೆಗೊಳಿಸಿದೋ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಮಾಡಿದ್ದು ನಮಗೂ ಖುಷಿ ಇದೆ. ಆದರೆ ಅದನ್ನು ಸರಿಯಾಗಿ ಜಾರಿಗೊಳಿಸಿಲ್ಲ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದ್ದೀರಾ ಎಂದು ಗುಡುಗಿದರು.

ಬ್ಲ್ಯಾಕ್ ಮನಿ ಖೋಟಾ ನೋಟ್ ನಕ್ಸಲ್ ಚಟುವಟಿಕೆ ನಿಲ್ಲಿಸಲು ನೋಟು ಅಮಾನೀಕರಣ ಮಾಡಿದ್ದೇವೆ ಎಂದಿದ್ದಾರೆ. ಆದರೆ ಇದರಲ್ಲಿ ಯಾವುದು ಯಶಸ್ವಿಯಾಗಿಲ್ಲ. ಏಕತಾ ಅಭಿಯಾನದಿಂದ ವಿವಿಧತೆಯಲ್ಲಿ ಏಕತೆಗೆ ಭಂಗ ಉಂಟು ಮಾಡುವ ಕೆಲಸ ಆಗುತ್ತಿದೆ.  ಧರ್ಮ ಧರ್ಮಗಳ ನಡುವೆ ವಿಭಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ದೃವನಾರಾಯಣ್ ವಾಗ್ದಾಳಿ ನಡೆಸಿದರು.

ಮಹಿಷಾದಸರಾ ಕುರಿತು ಹೇಳಿಕೆ ನೀಡಿದ್ದ ಸಂಸದ ಪ್ರತಾಪ್‌ಸಿಂಹ ಮಾತಿಗೆ ವಿರೋಧ ವ್ಯಕ್ತಪಡಿಸಿದ ಧೃವನಾರಾಯಣ್, ಜನಪ್ರತಿನಿಧಿಯಾಗಿ ಆ ಪದ ಬಳಕೆ ಸರಿಯಲ್ಲ. ಅದು ಸಂವಿಧಾನ ವಿರೋಧಿ ಪದ‌. ಮಹಿಷ ದಸರಾ ಕಳೆದ 6 ವರ್ಷದಿಂದ ಮಾಡುತ್ತಿದ್ದಾರೆ. ಪ್ರತಾಪ್‌ಸಿಂಹ ತಮ್ಮ ಹೇಳಿಕೆ ವಾಪಸ್ಸು ಪಡೆಯಬೇಕು. ಸಂಸದರಾಗಿ ಪೋಲಿಸರ ಮೇಲೆ ದರ್ಪ ತೋರಿರುವುದು ಸರಿಯಲ್ಲ ಎಂದು ಖಂಡಿಸಿದರು.

ಪ್ರಧಾನಿ ಮೋದಿ ಎಲ್ಲಾ ಸಮಯದಲ್ಲೂ  ಮಂಕುಬೂದಿ ಎರಚುವ ಕೆಲಸ  ಮಾಡುತ್ತಿದ್ದಾರೆ. ಹೀಗಾಗಿ ನಾವು ಜನರಿಗೆ ಅರಿವು ಮೂಡಿಸುವ ಕೆಲಸ‌ ಮಾಡುತ್ತೇವೆ. ಪಕ್ಷದಲ್ಲಿ ಮೂಲ ಕಾಂಗ್ರೆಸ್ ವಲಸೆ ಕಾಂಗ್ರೆಸ್ ಇಲ್ಲ.ಎಲ್ಲರೂ ಒಂದೇ.  ನಾಲ್ಕು ಗೋಡೆ ಒಳಗಡೆ ಸಭೆಯಲ್ಲಿ ಸಣ್ಣ ಪುಟ್ಟ ಗೊಂದಲಗಳ ಬಗ್ಗೆ ಚರ್ಚೆ ಆಗಿದೆ ಎಂದರು.

ಸಿದ್ದರಾಮಯ್ಯ ಮುನಿಯಪ್ಪ ವಾಕ್ಸಮರ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ಇಬ್ಬರು ಸೀನಿಯರ್‌ಗಳ ನಡುವೆ ಮಾತು ಆಗಿರಬಹುದು. ಇಬ್ಬರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದೆಲ್ಲವನ್ನೂ ನಾವು ಸರಿಪಡಿಸಿಕೊಳ್ಳುತ್ತೇವೆ. ಮುನಿಯಪ್ಪ ಅವರ ಜಿಲ್ಲೆಯಲ್ಲಿ ಸಮಸ್ಯೆ ಇದೆ. ಅದನ್ನು ಸರಿಪಡಿಸುವ ಕೆಲಸ ಪಕ್ಷ ಮಾಡಲಿದೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅನ್ನೋದನ್ನು ನಾವು ಒಪ್ಪಲ್ಲ ಎಂದರು.

Key words: BJP – 5 years- not been- successful- Former MP -R Dhruvanarayan-mysore