ಬೆಸ್ಕಾಂ ಗ್ರಾಹಕರೇ ಆನ್ ಲೈನ್ ವಂಚನೆಕೋರರ ಬಗ್ಗೆ ಎಚ್ಚರ…

ಬೆಂಗಳೂರು,ಜೂನ್,8,2022(www.justkannada.in): ‘ಪ್ರಿಯಾ ಗ್ರಾಹಕರೇ, ನೀವು ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸದ ಕಾರಣ ನಿಮ್ಮ  ವಿದ್ಯುತ್ ಸಂಪರ್ಕವನ್ನು ಇಂದು ರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿತಗೊಳಿಸಲಾಗುವುದು, ತಕ್ಷಣ ನಮ್ಮ ವಿದ್ಯುತ್ ಅಧಿಕಾರಿಯ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ವಿದ್ಯುತ್ ಪಾವತಿಸಿ…

ಈ ರೀತಿಯ ಎಸ್ಎಂಎಸ್ ಗಳನ್ನು ಕಳುಹಿಸಿ ಬೆಸ್ಕಾಂ ಗ್ರಾಹಕರನ್ನು ವಂಚಿಸುವ ಆನ್ ಲೈನ್ ವಂಚನೆಕೋರರ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆನ್ ಲೈನ್ ವಂಚನೆ ಬಗ್ಗೆ ಬೆಸ್ಕಾಂ ತನ್ನ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದರೂ, ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ ಎಂಬ ಗಾಬರಿಗೆ ಒಳಗಾಗಿ ಆನ್ ಲೈನ್ ವಂಚನೆಕೋರರ ಬಲೆಗೆ ಸುಲಭ ತುತ್ತಾಗುತ್ತಿದ್ದಾರೆ.  ಆನ್ ಲೈನ್ ವಂಚನೆಕೋರರ ಬಗ್ಗೆ ಬೆಸ್ಕಾಂ ಸೈಬರ್ ಪೋಲಿಸರ ಗಮನಕ್ಕೆ ತಂದಿದ್ದು, ಗ್ರಾಹಕರಿಗೆ ನಿರಂತರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಬೆಸ್ಕಾಂ ತನ್ನ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ, ಆನ್ ಲೈನ್ ವಂಚನೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದು, ಗ್ರಾಹಕರು ವಿದ್ಯುತ್ ಬಿಲ್ ಗಳನ್ನು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್ , ಬೆಸ್ಕಾಂ ಮಿತ್ರ ಆ್ಯಪ್ , ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್ ಸೈಟ್ ಮತ್ತು ಗೂಗಲ್ ಆ್ಯಪ್ ಗಳಲ್ಲಿ ಮಾತ್ರ ಪಾವತಿಸಬಹುದಾಗಿದೆ.

ಗ್ರಾಹಕರಿಗೆ ವಿದ್ಯುತ್ ಬಿಲ್ ಗಳನ್ನು ಪಾವತಿಸಲು ಕರೆ ಅಥವಾ ಎಸ್ ಎಂಎಸ್  ಬಂದಲ್ಲಿ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಲು ಬೆಸ್ಕಾಂ  ವಿನಂತಿಸಿದೆ.

ಆನ್ ಲೈನ್ ವಂಚನೆಕೋರರು, ಗ್ರಾಹಕರಿಗೆ ಕರೆ ಮಾಡಿ ತಾವು ಸೂಚಿಸುವ ಮೊಬೈಲ್ ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸೂಚಿಸುತ್ತಿದ್ದಾರೆ. ಇಂತಹ ಯಾವುದೇ ಬಿಲ್ ಪಾವತಿಸುವ ವ್ಯವಸ್ಥೆ ಬೆಸ್ಕಾಂನಲ್ಲಿಲ್ಲ. ಗ್ರಾಹಕರು ಇಂತಹ ಕರೆಗಳು ಬಂದ ತಕ್ಷಣ ಬೆಸ್ಕಾಂ ಸಹಾಯವಾಣಿಗೆ ಮಾಹಿತಿ ನೀಡಲು ಕೋರಲಾಗಿದೆ.

ಆನ್ ಲೈನ್ ವಂಚನೆ ಬಗ್ಗೆ ಜನರಿಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಬಿಲ್ ಪಾವತಿಸುವಂತೆ ಬೆಸ್ಕಾಂ ನಿಂದ ಗ್ರಾಹಕರಿಗೆ ಯಾವುದೇ ಕರೆ ಹೋಗುವುದಿಲ್ಲ ಅಲ್ಲದೆ ಬೆಸ್ಕಾಂ ಬಿಲ್ ಕಲೆಕ್ಟರ್ ಗೆ ಗ್ರಾಹಕರು ನಗದು ಪಾವತಿಸುವಂತಿಲ್ಲ. ಬೆಸ್ಕಾಂನ ಹತ್ತಿರದ ಪಾವತಿ ಕೇಂದ್ರ, ಬೆಸ್ಕಾಂ ಮಿತ್ರ, ಮತ್ತು ಗೂಗಲ್ ಆ್ಯಪ್ ಗಳಲ್ಲಿ ಬಿಲ್ ಪಾವತಿಸಲು ಅನುಮತಿ ನೀಡಲಾಗಿದೆ ಎಂದು, ಬೆಸ್ಕಾಂನ ಗ್ರಾಹಕ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಎಸ್. ಆರ್. ನಾಗರಾಜ ತಿಳಿಸಿದ್ದಾರೆ.

ಇಂತಹ ವಂಚನೆಗಳ ಬಗ್ಗೆ ಗ್ರಾಹಕರು ಎಚ್ಚರದಿಂದಿರಬೇಕು. ಬಿಲ್ ಪಾವತಿಗೆ ಬೆಸ್ಕಾಂ ಬಿಲ್ ನೀಡಿದ ದಿನದಿಂದ ಒಂದು ತಿಂಗಳ ಕಾಲಾವಕಾವಿರುತ್ತದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂಬ ಯಾವುದೇ ಎಸ್ಎಂಎಸ್ ಅನ್ನು ಬೆಸ್ಕಾಂ ಕಳುಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂ ಉಪ-ವಿಭಾಗ ಕಚೇರಿಗಳಲ್ಲಿ ನಡೆಯುವ ಗ್ರಾಹಕರ ಸಂವಾದ ಸಭೆಗಳಲ್ಲಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡುತ್ತಾರೆ ಎಂದು ನಾಗರಾಜ್ ತಿಳಿಸಿದ್ದಾರೆ.

Key words: Besscom-customers – aware -online -scams.