ಭಾರತ ಮೇಲೆ ಉಗ್ರರ ಕಣ್ಣು, ಹೈ ಅಲರ್ಟ್: ಬೆಂಗಳೂರು ಸೇರಿ ಪ್ರಮುಖ ನಗರಗಳು ಟಾರ್ಗೆಟ್, ಭದ್ರತೆ ಹೆಚ್ಚಿಸಲು ಎಲ್ಲ ರಾಜ್ಯಕ್ಕೆ ಸೂಚನೆ

ಬೆಂಗಳೂರು:ಆ-17: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದರಿಂದ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಅಲ್ಲದೆ ಅಗತ್ಯ ಭದ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿ, ಗಣ್ಯ ವ್ಯಕ್ತಿಗಳು, ಪಾರಂಪರಿಕ ಕಟ್ಟಡಗಳು, ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ವ್ಯಾಪಕ ಭದ್ರತೆ ಒದಗಿಸುವಂತೆ ನಿರ್ದೇಶಿಸಲಾಗಿದೆ.

ಕೇಂದ್ರದ ಅಲರ್ಟ್ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಶುಕ್ರವಾರ ರಾತ್ರಿಯೇ ನಗರದಾದ್ಯಂತ ಅಲರ್ಟ್ ಘೋಷಿಸಿದ್ದಾರೆ. ಸಿಬ್ಬಂದಿ ಕೊರತೆ ಕಾರಣ ಇದೇ ಮೊದಲ ಬಾರಿಗೆ ಭದ್ರತೆಗೆ 4.5 ಲಕ್ಷ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿ-ವಸ್ತು ಕಂಡುಬಂದರೆ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಭಾಸ್ಕರ್ ರಾವ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಆರು ಮಂದಿ ಪೊಲೀಸ್ ವಶಕ್ಕೆ

ಮಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪಂಪ್​ವೆಲ್ ಲಾಡ್ಜ್​ನಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಮಡಿಕೇರಿ ಸಹಿತ ರಾಜ್ಯದ ಐವರು ಹಾಗೂ ಕೇರಳದ ಒಬ್ಬನನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರ ಕಾರಿನಲ್ಲಿ ‘ನ್ಯಾಷನಲ್ ಕ್ರೖೆಂ ಇನ್ವೆಸ್ಟಿಗೇಷನ್ ಬ್ಯೂರೋ’ ಹಾಗೂ ‘ಗವರ್ನಮೆಂಟ್ ಆಫ್ ಇಂಡಿಯಾ’ ಎಂದು ಬರೆಯಲಾಗಿತ್ತು. ವಿಚಾರಣೆ ನಡೆಯುತ್ತಿದೆ.

ಬೆಂಗ್ಳೂರಲ್ಲಿ ಕಮಿಷನರ್ ಆದೇಶ

* ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಮತ್ತು ವಾಹನಗಳನ್ನು ಕಂಡರೆ ತಪಾಸಣೆ
* ಎಲ್ಲೆಡೆ ಸಿಸಿ ಕ್ಯಾಮರಾ ಪರಿಶೀಲಿಸಿ. ಬೀಟ್ ಪೊಲೀಸರು ಎಚ್ಚರದಿಂದಿರಬೇಕು.
* ಚೆಕ್​ಪೋಸ್ಟ್ ಹಾಗೂ ನಗರದ ವಾಹನಗಳ ತಪಾಸಣೆ ಕಡ್ಡಾಯ.
* ಪೇಯಿಂಗ್ ಗೆಸ್ಟ್, ಅಪಾರ್ಟ್​ವೆುಂಟ್, ವಸತಿ ಗೃಹಗಳ ಬಳಿಯೂ ಪರಿಶೀಲನೆ.
* ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಎಲ್ಲ ರೈಲ್ವೆ-ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ಶಾಲೆ, ಮಾಲ್, ಐಷಾರಾಮಿ ಹೋಟೆಲ್, ಮಾರುಕಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವುದು.

ಅಲರ್ಟ್​ನಲ್ಲೇನಿದೆ?

* ಭಾರತದ ಪ್ರಮುಖ ನಗರಗಳಲ್ಲಿ ದೇಶವಿರೋಧಿ ಶಕ್ತಿಗಳಿಂದ ಸಮಾಜಘಾತುಕ ಕೃತ್ಯ ಸಾಧ್ಯತೆ.
* ಎಲ್ಲ ಪ್ರಮುಖ ಸರ್ಕಾರಿ ಕಟ್ಟಡ ಮತ್ತು ಖಾಸಗಿ ಸಂಸ್ಥೆಗಳಿಗೆ ಪೊಲೀಸ್ ಭದ್ರತೆ ಒದಗಿಸುವುದು.
* ಪ್ರಮುಖ ರಾಜಕಾರಣಿಗಳು, ಧಾರ್ವಿುಕ ಮುಖಂಡರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದು. ್ಝನಸಂದಣಿ ಹೆಚ್ಚಿರುವ ಬಸ್, ರೈಲು ನಿಲ್ದಾಣ, ಏರ್​ಪೋರ್ಟ್, ದೇಗುಲ, ಮಾರ್ಕೆಟ್​ಗೆ ಭದ್ರತೆ.
* ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಹಾಗೂ ಲಗ್ಗೇಜ್​ಗಳ ತಪಾಸಣೆ ನಡೆಸುವುದು.
* ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸಶಸ್ತ್ರ ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುವುದು.
* ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣವೇ ಪ್ರತಿಕ್ರಿಯಿಸುವಂತೆ ಸಿಬ್ಬಂದಿಗೆ ಸೂಚಿಸುವುದು.
* ಐಜಿಪಿಗಳು ಸೇರಿ ಎಲ್ಲ ಹಿರಿಯ ಅಧಿಕಾರಿಗಳು ಭದ್ರತಾ ಕ್ರಮದ ಉಸ್ತುವಾರಿ ವಹಿಸುವುದು.
ಕೃಪೆ: ವಿಜಯವಾಣಿ

ಭಾರತ ಮೇಲೆ ಉಗ್ರರ ಕಣ್ಣು, ಹೈ ಅಲರ್ಟ್: ಬೆಂಗಳೂರು ಸೇರಿ ಪ್ರಮುಖ ನಗರಗಳು ಟಾರ್ಗೆಟ್, ಭದ್ರತೆ ಹೆಚ್ಚಿಸಲು ಎಲ್ಲ ರಾಜ್ಯಕ್ಕೆ ಸೂಚನೆ

bengaluru-city-police-commissioner-bhaskar-rao-pakistan-nuclear-weapon-attack-karnataka-state-reserve-police-ksrp-high-alert