‘ಸ್ವಚ್ಛ ಪರಿಸರ’ ತಾಂತ್ರಿಕ ಸಹಕಾರ ನೀಡಲು ಯು.ಕೆ ಉತ್ಸುಕ ; ಕೆಲ ವಾಹನ ವಿಭಾಗಗಳಲ್ಲಿ ಶೇ 100ರಷ್ಟು ವಿದ್ಯುತ್ ಚಾಲಿತ- ಡಾ.ಸಿ.ಎನ್.ಅಶ್ವತ್ಥ ನಾರಾಯಣ.

kannada t-shirts

 

ಬೆಂಗಳೂರು, ನ.19, 2020 : (www.justkannada.in news) : ಕರ್ನಾಟಕ ಸರ್ಕಾರವು ಕೆಲವು ವಾಹನ ವಿಭಾಗಗಳನ್ನು ಶೇ 100ರಷ್ಟು ವಿದ್ಯುತ್ ಚಾಲಿತ ಮಾಡುವ ಗುರಿ ಹೊಂದಿದೆ ಎಂದು ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಹೇಳಿದರು.

ಬೆಂಗಳೂರು ತಂತ್ರಜ್ಞಾನ ಮೇಳ-2020ರಲ್ಲಿ “ಹಸಿರು ಪುನರ್ ಸೃಷ್ಟಿ ಮತ್ತು ಸುಸ್ಥಿರ ಭವಿಷ್ಯದಲ್ಲಿ ತಂತ್ರಜ್ಞಾನದ ಪಾತ್ರ” ಕುರಿತು ಯು.ಕೆ. (ಸಂಯುಕ್ತ ಸಂಸ್ಥಾನ) ಹೈಕಮಿಷನರ್ (ಕರ್ನಾಟಕ- ಕೇರಳ ವಲಯ) ಜೆರೆಮಿ ಪಿಲ್ಮೋರ್ ಬೆಡ್ ಫೋರ್ಡ್ ಅವರೊಂದಿಗೆ ಸಮಾಲೋಚನೆ ನಡೆಸಿ ಹೀಗೆ ಹೇಳಿದರು.

kannada-journalist-media-fourth-estate-under-loss

ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್, ಸರಕು ಸಾಗಣೆ.. ಹೀಗೆ ವಿವಿಧ ವಿಭಾಗಗಳ ವಾಹನಗಳು ಇದ್ದು ಇವುಗಳಲ್ಲಿ ಕೆಲವನ್ನು ಸಂಪೂರ್ಣ ವಿದ್ಯುತ್ ಚಾಲಿತ ಮಾಡಿ, ಅವುಗಳನ್ನಷ್ಟೇ ಓಡಿಸುವ ಉದ್ದೇಶ ಇದೆ. ಆದರೆ ಇದಕ್ಕೆ ತಂತ್ರಜ್ಞಾನದ ಬೆಂಬಲ ಬೇಕಾಗಿದ್ದು ಈ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು‌ ಎಂದು ಡಿಸಿಎಂ ಹೇಳಿದರು.

ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಿ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಸುವ ಗುರಿಯನ್ನೂ ರಾಜ್ಯ ಸರ್ಕಾರ ಹೊಂದಿದೆ. ಇದೇ ವೇಳೆ ವಾಹನಗಳ ಮಾಲಿನ್ಯ ಹೊರಸೂಸುವಿಕೆ ತಗ್ಗಿಸಲು ಇ-ವಾಹನಗಳ ಬಳಕೆ ಹಾಗೂ ಅವುಗಳ ತಯಾರಿಕೆ ಪ್ರಮಾಣ ಹೆಚ್ಚಾಗಬೇಕು. ಇದಕ್ಕೆ ಪೂರಕವಾದ ಉದ್ಯಮ ಪರ್ಯಾವರಣ ಬೆಂಗಳೂರಿನಲ್ಲಿದೆ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಕ್ರಿಯೇಟಿವ್ ಟೆಕ್, ದತ್ತಾಂಶ ವಿಜ್ಞಾನ, ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ನಿಯಂತ್ರಕ ಸ್ಯಾಂಡ್ ಬಾಕ್ಸ್ ಕ್ಷೇತ್ರಗಳಲ್ಲಿ ಯು.ಕೆ ಜತೆ ಸೇರಿ ಕೆಲಸ ಮಾಡುವ ಆಲೋಚನೆಯನ್ನು ರಾಜ್ಯ ಹೊಂದಿದೆ ಎಂದು ತಿಳಿಸಿದರು.

Bengalore-tech-summit-dcm-cm-karnataka

ಜೆರೆಮಿ ಬೆಡ್ ಫೋರ್ಡ್ ಅವರು ಇದೇ ಸಂದರ್ಭದಲ್ಲಿ, ಯು.ಕೆ.ಯು ಕಳೆದ 30 ವರ್ಷಗಳಲ್ಲಿ ಮಾಲಿನ್ಯ ಹೊರಸೂಸುವಿಕೆಯನ್ನು ಶೇ 45ರಷ್ಟು ಕಡಿಮೆ ಮಾಡಿ ಶೇ 75ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಿದೆ; 2050 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಗೆ ಬದ್ಧವಾಗಿದೆ ಎಂದರು.
ನವೀಕರಿಸಬಹುದಾದ ಇಂಧನ ಮೂಲಗಳಿಗೆ ಸಂಬಂಧಿಸಿದ ತಾಂತ್ರಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ; ಇತ್ತೀಚೆಗೆ ತಮ್ಮ ದೇಶವು 50 ದಿನಗಳ ಕಾಲ ನಿರಂತರವಾಗಿ ಕಲ್ಲಿದ್ದಲು ಮುಕ್ತ ವಿದ್ಯುತ್ ಪೂರೈಕೆಯಿಂದಲೇ ಎಲ್ಲವನ್ನೂ ನಿರ್ವಹಿಸುವಲ್ಲಿ ಯಶಸ್ವಿಯಾಗಿತ್ತು; ಇಂಧನ ಸಂಗ್ರಹ, ಸ್ಮಾರ್ಟ್ ಎಲೆಕ್ಟ್ರಿಸಿಟಿ ಗ್ರಿಡ್, ಶೂನ್ಯ-ಹೊರಸೂಸುವಿಕೆ ವಾಹನಗಳಿಗೆ ಸಂಬಂಧಿಸಿದಂತೆ ತಾಂತ್ರಿಕತೆ ಮುಖ್ಯವಾಗುತ್ತದೆ; ಸ್ವಚ್ಛ ಪರಿಸರ ತಾಂತ್ರಿಕ ಪರಿಹಾರಗಳಲ್ಲಿ ಯು.ಕೆ. ಕಂಪನಿಗಳು ನಿರತವಾಗಿವೆ; ಇಂಗಾಲದ ಹೊರಸೂಸುವಿಕೆ ತಗ್ಗಿಸಿ ಜಗತ್ತಿನಲ್ಲಿ ಸುಸ್ಥಿರ ಬದುಕು ಉತ್ತೇಜಿಸುವುದು ಇವುಗಳ ಗುರಿಯಾಗಿದೆ ಎಂದು ಜರೊಮಿ ಹೇಳಿದರು.

 

KEY WORDS : Bengalore-tech-summit-dcm-cm-karnataka

website developers in mysore