ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ದೂರು: ಪಬ್ಲಿಕ್ ಟಿವಿ ವರದಿಗಾರ ಸೇರಿದಂತೆ ನಾಲ್ವರ ಬಂಧನ

kannada t-shirts

ಬಳ್ಳಾರಿ, ಜೂನ್ 07, 2019 (www.justkannada.in): ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ನೀಡಿದ ದೂರಿನ ಮೇಲೆ ಇಬ್ಬರು ಟಿ.ವಿ ವರದಿಗಾರರು ಸೇರಿದಂತೆ ನಾಲ್ವರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪಬ್ಲಿಕ್‌ ಟಿ.ವಿ. ವರದಿಗಾರ ವೀರೇಶ್‌ ದಾನಿ, ಇಂಚರ ಟಿವಿಯ ಮಾಜಿ ವರದಿಗಾರ ನಾಗಭೂಷಣ, ಹಗರಿಬೊಮ್ಮನಹಳ್ಳಿಯ ಸಿ.ಎಂ.ಮಂಜುನಾಥಯ್ಯ ಮತ್ತು ಅವರ ಸಹಚರ ವೀರೇಶ ಬಂಧಿತರು.

‘ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದ ಮಂಜುನಾಥಯ್ಯ, ಪರೀಕ್ಷೆಗೆ ಹಾಜರಾಗದಿದ್ದರೂ, ನಕಲಿ ದಾಖಲೆ ಸೃಷ್ಟಿಸಿ, ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿದ್ದಾರೆ. ಎಲೆಕ್ಟ್ರಾನಿಕ್‌ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರೊಂದಿಗೆ ಸೇರಿಕೊಂಡು ಪಬ್ಲಿಕ್‌ ಟಿವಿ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿ ಪ್ರಸಾರ ಮಾಡಿದೆ’ ಎಂದು ಕುಲಪತಿ ದೂರಿನಲ್ಲಿ ತಿಳಿಸಿದ್ದಾರೆ.

‘ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲೇ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಅದಕ್ಕೆ ತಮ್ಮ ಫೋಟೊ ಅಂಟಿಸಿಕೊಳ್ಳಬೇಕಿತ್ತು. ಆರೋಪಿ ಮಂಜುನಾಥಯ್ಯ, ತನ್ನ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು, ಜೆರಾಕ್ಸ್ ಮಾಡಿಸಿದ್ದ. ಒಂದರಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಫೋಟೊ, ಮತ್ತೊಂದರಲ್ಲಿ ರಾಜ್ಯಪಾಲ ವಾಜುಭಾಯಿ ವಾಲಾ ಅವರ ಫೋಟೊ ಅಂಟಿಸಿ ನಕಲಿ ದಾಖಲೆ ಸೃಷ್ಟಿಸಿದ್ದ. ಪರೀಕ್ಷೆಯನ್ನು ಯಾರು ಬೇಕಾದರೂ ಬರೆಯಬಹುದಾದ ಅವ್ಯವಸ್ಥೆ ವಿಶ್ವವಿದ್ಯಾಲಯದಲ್ಲಿದೆ ಎಂಬ ಆತನ ಆರೋಪದ ಜೊತೆಗೆ ಪಬ್ಲಿಕ್‌ ಟಿ.ವಿಯಲ್ಲಿ ಬುಧವಾರ ವರದಿ ಪ್ರಸಾರವಾಗಿತ್ತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಜುನಾಥಯ್ಯ ಒಬ್ಬ ರೌಡಿ. ವಿಚಾರಣೆಗೆ ಒಳಪಡಿಸಿದಾಗ, ಆತ, ಪಬ್ಲಿಕ್‌ ಟಿವಿ ವರದಿಗಾರರೇ ಹಾಗೆ ಮಾಡಿದ್ದು ಎಂದು ಆರೋಪಿಸಿದ್ದ. ನಂತರ, ನಾಗಭೂಷಣ ಅವರೂ ಪ್ರಕರಣದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂತು. ಮಂಜುನಾಥಯ್ಯ ಜೊತೆಗೆ ವರದಿಯಲ್ಲಿ ಕಾಣಿಸಿಕೊಂಡಿರುವ ಮೂರನೇ ಆರೋಪಿ ವೀರೇಶ್‌, ಮಂಜುನಾಥಯ್ಯ ಅವರ ಪ್ರವೇಶ ಪತ್ರದ ಇನ್ನೊಂದು ಪ್ರತಿಯನ್ನು ತಮ್ಮದೇ ಎಂಬಂತೆ ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಭಾವಚಿತ್ರವುಳ್ಳ ಪ್ರವೇಶ ಪತ್ರ ನಕಲಿಯಾದದ್ದು ಎಂದು ಗೊತ್ತಿದ್ದೂ ವರದಿಗಾರರು ವರದಿ ಮಾಡಿದ್ದಾರೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಲು ಕುಲಪತಿ ಪ್ರೊ.ಸುಭಾಷ್‌ ನಿರಾಕರಿಸಿದರು.

ಕೃಪೆ

ಪ್ರಜಾವಾಣಿ

website developers in mysore