ಜೆಸಿಬಿ ಘರ್ಜನೆ: 30 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶ.

ಬೆಂಗಳೂರು,ನವೆಂಬರ್,22,2022(www.justkannada.in) ಭೂಒತ್ತುವರಿದಾರರ ವಿರುದ್ಧದ ದಾಳಿಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಸುಮಾರು 30 ಕೋಟಿ ರೂಪಾಯಿ ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ 22 ಗುಂಟೆ ಜಾಗ ಬಿಡಿಎಗೆ ಸೇರಿದ್ದಾಗಿತ್ತು. ಆದರೆ, ಕೆಲವು ಅತಿಕ್ರಮಣದಾರರು ಸದರಿ ಜಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಇತ್ತೀಚೆಗೆ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಸದರಿ ಜಾಗ ಸೇರಿದಂತೆ ಇನ್ನಿತರೆ ಒತ್ತುವರಿ ಮತ್ತು ಬಿಡಿಎ ಜಾಗವನ್ನು ಕಬ್ಜ ಮಾಡಿಕೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿ, ಕೂಡಲೇ ಇಂತಹ ಜಾಗಗಳನ್ನು ಮರುವಶಕ್ಕೆ ಪಡೆದುಕೊಳ್ಳಬೇಕೆಂದು ಬಿಡಿಎ ಅಧಿಕಾರಿಗಳು ಮತ್ತು ಎಂಜಿನಿಯರ್ ಗಳಿಗೆ ಸೂಚನೆ ನೀಡಿದ್ದರು.
ಅದರನ್ವಯ ಮಂಗಳವಾರ ಬಿಡಿಎ ಆಯುಕ್ತರ ಆದೇಶ ಪಡೆದ ಬಿಡಿಎ ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿ ನಂಜುಂಡೇಗೌಡ ಮತ್ತು ಪೊಲೀಸ್ ಅಧಿಕಾರಿಗಳಾದ ರವಿಕುಮಾರ್, ಶ್ರೀನಿವಾಸ್ ಹಾಗೂ ಎಂಜಿನಿಯರ್ ಅಶೋಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ 6 ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಲಾಯಿತು.
ನಕಲಿ ಎನ್ ಒಸಿ ಇದ್ದರೆ ಕ್ರಿಮಿನಲ್ ಕೇಸ್: ವಿಶ್ವನಾಥ್ ಎಚ್ಚರಿಕೆ
ಈ ಬಗ್ಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಈ ಹಿಂದೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಣದಾಸೆಗೆ ಬಿದ್ದು ಪ್ರಭಾವಿಗಳು ಮತ್ತು ಭೂಕಬಳಿಕೆದಾರರಿಗೆ ನಕಲಿ ಎನ್ಒಸಿಗಳನ್ನು ಕೊಟ್ಟು ಬಿಡಿಎ ಜಾಗವನ್ನು ಅತಿಕ್ರಮಣವಾಗುವಂತೆ ಮಾಡಿದ್ದರು. ಇದೀಗ ಇಂತಹ ನಕಲಿ ಎನ್ ಒಸಿ ಪ್ರಕರಣಗಳನ್ನು ಬಯಲಿಗೆ ತರಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ತಪ್ಪೆಸಗಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅದೇ ರೀತಿ, ನಕಲಿ ಎನ್ ಒಸಿ ಬಳಸಿಕೊಂಡು ಬಿಡಿಎ ಜಾಗವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೀಗೆ ನಕಲಿ ಎನ್ ಒಸಿ ಅಥವಾ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬಿಡಿಎ ಜಾಗದ ಮೇಲೆ ಹಿಡಿತ ಸಾಧಿಸುತ್ತಿರುವವರು ಕೂಡಲೇ ಅಂತಹ ದಾಖಲೆಗಳನ್ನು ನೀಡಿ ಬಿಡಿಎ ಜಾಗವನ್ನು ಬಿಟ್ಟುಕೊಡಬೇಕು. ಇಲ್ಲವಾದರೆ ಕಾನೂನು ರೀತಿಯಲ್ಲಿ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದೂ ವಿಶ್ವನಾಥ್ ಎಚ್ಚರಿಕೆ ನೀಡಿದರು.
ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ
ಈ ಮಧ್ಯೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ಜಾಗದಲ್ಲಿ ಹಿಡಿತ ಸಾಧಿಸುತ್ತಿರುವವರ ಭೂಕಬಳಿಕೆದಾರರ ಬಗ್ಗೆ ಮಾಹಿತಿ ಮತ್ತು ದಾಖಲೆಗಳಿದ್ದರೆ ಬಿಡಿಎ ಅಧ್ಯಕ್ಷರು, ಆಯುಕ್ತರು ಮತ್ತು ಜಾಗೃತ ದಳದ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬೇಕೆಂದು ಮನವಿ ಮಾಡಿರುವ ವಿಶ್ವನಾಥ್, ಹೀಗೆ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಟ್ಟು, ತನಿಖೆ ನಡೆಸಿ ಅಂತಹ ಜಾಗಗಳನ್ನು ವಶಕ್ಕೆ ಪಡೆದು, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

key words: BDA-JCB – property -worth- Rs 30 crore- seized