ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರ: ಇಬ್ಬರ ವಿರುದ್ದವೂ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಹೆಚ್.ವಿಶ್ವನಾಥ್…

ಮೈಸೂರು,ಮಾ,4,2020(www.justkannada.in): ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಪ್ರಕರಣ ಕುರಿತು ಇಬ್ಬರ ವಿರುದ್ದವೂ ಮಾಜಿ ಸಚಿವ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳು ಸರಿಯಿಲ್ಲ ದೊರೆಸ್ವಾಮಿಯೂ ಸರಿಯಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಚ್ ವಿಶ್ವನಾಥ್, ದೊರೆ ಸ್ವಾಮಿಯವರು ಒಂದು ಪಕ್ಷದ ಪರವಾಗಿ ಮಾತನಾಡಬಾರದು. ಅವರ ಮೇಲೆ ಎಲ್ಲರಿಗೂ ಅಪಾರ ಗೌರವವಿದೆ. ಅವರು ಎಲ್ಲದಕ್ಕೂ ಬಾಯಿ ಹಾಕಬಾರದು ತಲೆ ಹಾಕಬಾರದು. ಪಕ್ಷದ ವಕ್ತಾರರಂತೆ ಮಾತನಾಡಬಾರದು ನಿಮ್ಮ ಗೌರವ ಉಳಿಸಿಕೊಳ್ಳಿ ರಾಜಕೀಯದ ಕೊಳಚೆಗೆ ಹೋಗಿ ಬೀಳಬೇಡಿ. ರಾಜಕೀಯ ಪಕ್ಷಗಳಿಗೆ ನೀವು ದಾಳವಾಗಬೇಡಿ. ಯಾರ ಯಾರ ಬಗ್ಗೆ ನೀವು ಏನು ಏನೋ ಮಾತನಾಡವುದು ಕೂಡ ಸರಿಯಲ್ಲ ಎಂದು ಸಲಹೆ ನೀಡಿದರು.

ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು..

ರಾಜ್ಯ ಬಜೆಟ್ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಬಜೆಟ್ ಮಂಡನೆ ಕೇವಲ ಶಾಸ್ತ್ರವಾಗಬಾರದು. ಬಜೆಟ್ ಸರ್ಕಾರದ ಜನಪ್ರಿಯತೆ ಹೆಚ್ಚಿಸುವುದಲ್ಲ. ಹೀಗಾಗಿ ಜನರ ಅನುಕೂಲಕ್ಕಾಗಿ ಬಜೆಟ್ ಮಾಡಬೇಕು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ….

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದವೂ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಮಾತೆತ್ತಿದರೆ 14 ಬಾರಿ ಬಜೆಟ್ ಮಂಡನೆ ಅಂತಾರೆ. ಆದರೆ ಬಜೆಟ್‌ನಲ್ಲಿ ಆರ್ಥಿಕ‌ ಶಿಸ್ತು ಶಿಷ್ಟಾಚಾರ ತರಲು ಆಗಲಿಲ್ಲ. ರಾಜ್ಯಕ್ಕೆ ಮೂರು ಲಕ್ಷ ಕೋಟಿ ಸಾಲದ ಹೊರೆ ಇದೆ. ಅದರಲ್ಲಿ ಸಿದ್ದರಾಮಯ್ಯ ಅವರದ್ದೇ 1 ವರೆ ಲಕ್ಷ ಕೋಟಿ ಸಾಲದ ಪಾಲಿದೆ. ಮಾಜಿ ಮುಖ್ಯಮಂತ್ರಿ ಪರಮಾಧಿಕಾರದ ಹೆಸರಿನಲ್ಲಿ ಜನರನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದೀರಿ ಎಂದು ಹರಿಹಾಯ್ದರು.

ಬಜೆಟ್ ಬಗ್ಗೆ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ ಹೆಚ್.ವಿಶ್ವನಾಥ್ , ಯಡಿಯೂರಪ್ಪನವರೇ ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ. ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ.  ಉಳಿತಾಯದ ಬಜೆಟ್ ಮಾಡಿ. ಎಲ್ಲಾ ಸಿಎಂಗಳು 10 ವರ್ಷದ ಬಜೆಟ್ ಮಾಡಿದ್ದಾರೆ. ನೀವು ಕೇವಲ ಒಂದು ವರ್ಷದ ಬಜೆಟ್ ಮಾಡಿ ಸಾಕು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ವಿಪಕ್ಷಗಳ ಗದ್ದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್ ವಿಶ್ವನಾಥ್, ಮಾತೆತ್ತಿದ್ದರೆ ಸಿದ್ದರಾಮಯ್ಯ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ಎರಡು ದಿನ ವಿಧಾನಸಭೆ ನಡೆಯದಂತೆ ತಡೆ ಮಾಡಿದ್ದೀರಾ. ಏನಿದರ ಅರ್ಥ ? ಬರೀ ರಾಜಕೀಯ ಮಾಡೋದಾ ? ಎಂದು ಪ್ರಶ್ನಿಸಿದರು.

ಜಗಳ ಮಾಡುವುದಕ್ಕೆ ಆರೋಪ ಪ್ರತ್ಯಾರೋಪಕ್ಕಾಗಿ ವಿಧಾನಸಭೆ ಅಲ್ಲ. ಅದು ಜನರ ಹಿತದೃಷ್ಟಿಯ ಚರ್ಚೆಗಾಗಿ ಇರುವುದು. ಇದನ್ನು ಅರಿತು ವಿಪಕ್ಷಗಳು ರಾಜ್ಯದ ಅಭಿವೃದ್ದಿಯ ವಿಚಾರ ಚರ್ಚೆ ಮಾಡಿ ಎಂದು ಹೆಚ್.ವಿಶ್ವನಾಥ್ ವಿಪಕ್ಷ ನಾಯಕರಿಗೆ ತಿಳಿಸಿದರು.

Key words: basanagoeada patil Yatnal –Doreshwamy- Former minister- H. Vishwanath – against –both-mysore