ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ಉನ್ನತೀಕರಣ ಕಾಮಗಾರಿ ಪೂರ್ಣ: ಪ್ರಯಾಣಿಕರ ಸೌಲಭ್ಯಕ್ಕಾಗಿ ದೊಡ್ಡ ರಸ್ತೆಗಳು, ಹೊಸ ಸೌಲಭ್ಯಗಳು.

ಬೆಂಗಳೂರು, ಸೆಪ್ಟೆಂಬರ್ 24, 2021 (www.justkannada.in): ನೈಋತ್ಯ ರೈಲ್ವೆ ಬೆಂಗಳೂರು ನಗರದ ಎರಡನೇಯ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾದ ಯಶವಂತಪುರ ರೈಲು ನಿಲ್ದಾಣವನ್ನು ರೂ.12 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಿದೆ.

ಈ ಪ್ರಕಾರವಾಗಿ ಉತ್ತರ ಬೆಂಗಳೂರು ಭಾಗದಲ್ಲಿರುವ ರೈಲು ನಿಲ್ದಾಣ ಈಗ ಉನ್ನತೀಕರಿಸಿರುವ ಸೌಲಭ್ಯಗಳೊಂದಿಗೆ ಸಜ್ಜಾಗಿದೆ. ನಿಲ್ದಾಣದ ಮುಂಭಾಗದಲ್ಲಿ ಭೂ ದೃಶ್ಯ ಅಭಿವೃದ್ಧಿಪಡಿಸಲಾಗಿದ್ದು, ಕಾಮನ್ ಏರಿಯಾ ಹಾಗೂ ಆಟೋ ಮತ್ತು ಕ್ಯಾಬ್ ನಿಲ್ದಾಣಗಳೂ ಒಳಗೊಂಡಂತೆ ವಾಹನಗಳ ನಿಲ್ದಾಣಗಳಲ್ಲಿ ಆಕರ್ಷಕ ಛಾವಣಿಯನ್ನು ಅಳವಡಿಸಲಾಗಿದೆ, ಜೊತೆಗೆ ರಸ್ತೆಗಳನ್ನು ಅಗಲಗೊಳಿಸಲಾಗಿದೆ.

ಯಶವಂತಪುರ ರೈಲು ನಿಲ್ದಾಣದ ಉನ್ನತೀಕರಣ ಕಾಮಗಾರಿಗಳ ಪೈಕಿ, ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ. ಬಿಎಂಟಿಸಿ ಬಸ್ಸುಗಳಲ್ಲಿ ಆಗಮಿಸುವ ಜನರು ಸುಲಭವಾಗಿ ಹಾಗೂ ನೇರವಾಗಿ ರೈಲು ನಿಲ್ದಾಣ ತಲುಪಲು ಅನುವಾಗುವಂತೆ ಬಸ್ ಬೇ ನಿರ್ಮಿಸಲಾಗಿದೆ. ಇದರ ಜೊತೆಗೆ ಪ್ರವೇಶದ್ವಾರವನ್ನು ಆಕರ್ಷಕಗೊಳಿಸಲು ಹೊಸ ದೀಪಾಲಂಕಾರವನ್ನು ಅಳವಡಿಸಿದ್ದು, ವಿಮಾನ ನಿಲ್ದಾಣಗಳ ಮುಂಭಾಗದಲ್ಲಿರುವಂತೆ 200-ಮೀ. ಎತ್ತರದ ಛಾವಣಿಯನ್ನು ಅಳವಡಿಸಲಾಗಿದೆ.

ಈ ಸಂಬಂಧ ನೈಋತ್ಯ ರೈಲ್ವೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ ಇ. ವಿಜಯ ಅವರು ಮಾತನಾಡಿ, “ಯಶವಂತಪುರ ರೈಲು ನಿಲ್ದಾಣವನ್ನು ಸುಂದರೀಕರಣಗೊಳಿಸುವ ಕಾಮಗಾರಿಯನ್ನು ದಾವಣಗೆರೆ, ಧಾರವಾಡ ಹಾಗೂ ಮೈಸೂರು ರೈಲ್ವೆ ನಿಲ್ದಾಣಗಳ ಸುಂದರೀಕರಣ ಕಾಮಗಾರಿಗಳ ಜೊತೆಗೆ ಕೈಗೆತ್ತಿಕೊಳ್ಳಲಾಯಿತು. ಈವರೆಗೆ, ಮೈಸೂರು ರೈಲ್ವೆ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡಿದ್ದು, ಇತರೆ ನಿಲ್ದಾಣಗಳಲ್ಲಿನ ನವೀಕರಣ ಕಾಮಗಾರಿಗಳು ನಡೆಯುತ್ತಿವೆ,” ಎಂದು ಮಾಹಿತಿ ನೀಡಿದರು.

ಯಶವಂತಪುರ ರೈಲು ನಿಲ್ದಾಣದ ಉನ್ನತೀಕರಣ ಕಾಮಗಾರಿಗಳು ಮಾರ್ಚ್ 2020ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕೋವಿಡ್-19 ಲಾಕ್‌ಡೌನ್‌ ನಿಂದಾಗಿ ಸ್ವಲ್ಪ ವಿಳಂಬವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ರೈಲು ನಿಲ್ದಾಣದಲ್ಲಿ ಏಳು ಪ್ಲಾಟ್‌ ಫಾರ್ಮ್ ಗಳೊಂದಿಗಿನ ಮೂರನೇ ಟರ್ಮಿನಲ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಸೆಪ್ಟೆಂಬರ್ 5ರಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬೈಯ್ಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಉನ್ನತೀಕರಣ ಕಾಮಗಾರಿಗಳ ಪರಿಕಲ್ಪನೆ, ಯೋಜನೆ ರೂಪಿಸುವಿಕೆ ಹಾಗೂ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ಇಂಜಿನಿಯರುಗಳ ತಂಡವನ್ನು ಪ್ರಶಂಸಿಸಿದರು.

ಅಧಿಕಾರಿಗಳ ಪ್ರಕಾರ, ಯಶವಂತಪುರ ರೈಲು ನಿಲ್ದಾಣವನ್ನು ಪ್ರತಿ ದಿನ 1 ಲಕ್ಷ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಪಡಿಸಲಾಗಿದೆ. ಜೊತೆಗೆ, ಬ್ರೇಲ್ ಸೂಚನಾ ಫಲಕಗಳು, ಲಿಫ್ಟ್ ಗಳು ಹಾಗೂ ಎಸ್ಕಲೇಟರ್‌ ಗಳಲ್ಲದೆ, ಸಬ್‌ವೇಗೆ ತೆರಳಲು ರ್ಯಾಂ ಪ್‌ಗಳ ನಿರ್ಮಾಣದಂತಹ ಪ್ರಯಾಣಿಕಸ್ನೇಹಿ ವೈಶಿಷ್ಟö್ಯತೆಗಳನ್ನೂ ಸಹ ಒದಗಿಸಲಾಗಿದೆ.

“ಆದರೆ ಪ್ರಸ್ತುತ ಈ ಉನ್ನತೀಕರಿಸಿರುವ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲು ರಸ್ತೆ ಸಂಪರ್ಕದಲ್ಲಿ ಸ್ವಲ್ಪ ತಡೆಗಳಿರುವ ಕಾರಣದಿಂದಾಗಿ ಇನ್ನೂ ಸಾರ್ವಜನಿಕರ ಬಳಕೆಗಾಗಿ ತೆರೆಯಲಾಗಿಲ್ಲ. ರೈಲು ನಿಲ್ದಾಣವನ್ನು ತಲುಪಲು ಬಿಬಿಎಂಇಪಿ ಎತ್ತರಿಸಿರುವ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವನೆಯನ್ನು ಮಾಡಿದೆ. ಈ ಪ್ರಸ್ತಾವನೆಯ ಯೋಜನೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರು ಮಂಡಿಸಿದ್ದಾರೆ. “ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಕೆಲವು ಸಮಸ್ಯೆಗಳಿದ್ದು ಬಿಬಿಎಂಪಿ ಕೆಲವು ಪರಿಹಾರಗಳನ್ನು ಸೂಚಿಸಿದೆ. ಈ ಸಂಪರ್ಕ ಸಮಸ್ಯೆ ಬಗೆಹರಿದ ಕೂಡಲೇ ಈ ಹೊಸ ಟರ್ಮಿನಲ್‌ ನಿಂದ ರೈಲುಗಳ ಸೇವೆಯನ್ನು ಆರಂಭಿಸಲಾಗುವುದು,” ಎಂದು ವೈಶ್ಣವ್ ತಿಳಿಸಿದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Bangalore- Yashwantpur- Railway -Station – completed- Full – upgrade work