ಬೆಂಗಳೂರು ವಿವಿ ಕುಲಪತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರಿಜಿಸ್ಟ್ರಾರ್ ..!

kannada t-shirts

 

ಬೆಂಗಳೂರು, ಡಿ.04, 2021 : (www.justkannada.in news ) ನೂತನ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿರುವ ಪ್ರೊ.ಕೊಟ್ರೇಶ್ ವಿರುದ್ದ ಬೆಂಗಳೂರು ವಿವಿ ಕುಲಸಚಿವೆ, ಐಎಎಸ್ ಅಧಿಕಾರಿ ಕೆ.ಜ್ಯೋತಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ ಡಿ. 2 ರಂದು ಸಂಜೆ 6.14ರ ಸುಮಾರಿಗೆ ನನ್ನ ಕಚೇರಿಗೆ ನಾನಿಲ್ಲದ ವೇಳೆಯಲ್ಲಿ ಆಗಮಿಸಿ ನನ್ನ ಸುಪರ್ದಿಯಲ್ಲಿದ್ದ ಕಡತಗಳು ಹಾಗೂ ಪತ್ರಗಳಿಗೆ ಸಹಿ ಹಾಕಿ ವ್ಯವಹರಿಸಿದ್ದಾರೆ. ಇದು ಸಿಸಿ ಟಿವಿ ದೃಶ್ಯಾವಳಿಯಲ್ಲೇ ಸೆರೆಯಾಗಿದೆ. ಇದನ್ನು ಪ್ರಶ್ನಿಸಲಾಗಿ ಕುಲಪತಿಗಳ ಮೌಖಿಕ ನಿರ್ದೇಶನದ ಮೇಲೆ ಹೀಗೆಲ್ಲಾ ನಡೆದುಕೊಂಡೆ ಎನ್ನುವುದಾಗಿ ಹೇಳಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಕಚೇರಿಗೆ ಆಗಮಿಸಿದ ಪ್ರೊ.ಕೊಟ್ರೇಶ್ ಹಾಗೂ ಅಂತದ್ದೊಂದು ಆದೇಶ ಕೊಟ್ಟ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ಡಿ. 3 ರಂದು ಕುಲಸಚಿವೆ ಕೆ.ಜ್ಯೋತಿ ದೂರು ನೀಡಿದ್ದಾರೆ.

ಏನಿದು ವಿವಾದ :

ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್ ಹಾಗೂ ಕುಲಸಚಿವೆ ಕೆ.ಜ್ಯೋತಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ನಡುವೆ ರಿಜಿಸ್ಟ್ರಾರ್ ಜ್ಯೋತಿ ಅವರ ಸ್ಥಾನಕ್ಕೆ ಪ್ರೊ.ಕೊಟ್ರೇಶ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿತ್ತು.

ಹಾಲಿ ರಿಜಿಸ್ಟ್ರಾರ್ ಆಗಿರುವ ಕೆ.ಜ್ಯೋತಿ ಅವರ ಸ್ಥಾನಕ್ಕೆ ನವೆಂಬರ್ 26 ರಂದೇ , ಕರ್ನಾಟಕ ಸಂಸ್ಕ್ರತ ವಿವಿಯ ಕುಲಸಚಿವರಾಗಿದ್ದ ಪ್ರೊ.ಕೊಟ್ರೇಶ್ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ಈ ಆದೇಶದ ಹಿನ್ನಲೆಯಲ್ಲೇ ಪ್ರೊ.ಕೊಟ್ರೇಶ್ ಅಧಿಕಾರವನ್ನು ಹಸ್ತಾಂತರಿಸಿಕೊಳ್ಳಬೇಕಿತ್ತು. ಜತೆಗೆ ಶಿಷ್ಟಾಚಾರ ಪಾಲಿಸಬೇಕಿತ್ತು. ಆದರೆ ಅದನ್ನು ಮಾಡದೆ ಜ್ಯೋತಿ ಅವರ ನಿರ್ಗಮನಕ್ಕೂ ಮುನ್ನವೇ ತಾವೇ ಬಲವಂತವಾಗಿ ಅಧಿಕಾರ ಪಡೆಯಲು ಮುಂದಾಗಿದ್ದು ಈಗ ವಿವಾದಕ್ಕೆ ಎಡೆಮಾಡಿದೆ.

ಶಿಷ್ಟಾಚಾರದ ಪ್ರಕಾರ ಅಧಿಕಾರ ಹಸ್ತಾಂತರದ ಬಳಿಕ ಸಭೆ ಕರೆಯಬೇಕಾಗುತ್ತದೆ.ಆದರೆ ಪ್ರೊ.ಕೊಟ್ರೇಶ್ ಇದನ್ನು ಉಲ್ಲಂಘಿಸಿದ್ದಾರೆ ಎಂಬುದು ಆರೋಪ.

ಅಧಿಕಾರ ವಹಿಸಿಕೊಂಡು, ಸಭೆ ನಡೆಸಿದ್ದಷ್ಟೇ ಅಲ್ಲದೆ, ಸಾಕಷ್ಟು ಕಡತಗಳಿಗೂ ಸಹಿ ಹಾಕಿದ್ದಾರೆನ್ನಲಾಗಿದೆ. ತಮ್ಮ ಅನುಪಸ್ಥಿತಿಯಲ್ಲಿ ಹೀಗೆಲ್ಲಾ ನಡೆಯುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಸಭೆಗೆ ಆಗಮಿಸಿ ಕೆ.ಜ್ಯೋತಿ, ಇದನ್ನು ಪ್ರಶ್ನಿಸಿದ್ದಾರೆ. ಪ್ರೊ. ಕೊಟ್ರೇಶ್ ಸಮಜಾಯಿಷಿ ಕೊಡಲು ತಡಬಡಾಯಿಸಿದರು ಎನ್ನಲಾಗಿದೆ.

ಇದೀಗ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆ.ಜ್ಯೋತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೊ.ಕೊಟ್ರೇಶ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಸರಕಾರದ ಎಡವಟ್ಟು :

ವಿಶ್ವವಿದ್ಯಾನಿಲಯಗಳ ಕುಲಸಚಿವ (ಆಡಳಿತದ ಜವಾಬ್ದಾರಿ) ಸ್ಥಾನಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸರಕಾರದವೇ ವಿವಿ ಕಾಯ್ದೆಗೆ ತಿದ್ದುಪಡಿ ತಂದು ಆದೇಶಿಸಿತ್ತು. ಆದರೆ, ಬೆಂಗಳೂರು ವಿವಿ ಕುಲಸಚಿವೆಯಾಗಿರುವ ಐಎಎಸ್ ಅಧಿಕಾರಿ ಕೆ.ಜ್ಯೋತಿ ಅವರನ್ನು ವರ್ಗಾವಣೆ ಮಾಡಿ ಆಸ್ಥಳಕ್ಕೆ ಪ್ರೊ.ಕೊಟ್ರೇಶ್ ಅವರನ್ನು ನೇಮಿಸುವ ಮೂಲಕ ಸರಕಾರ ತನ್ನ ಆದೇಶವನ್ನು ತಾನೇ ಉಲ್ಲಂಘಿಸಿದಂತಾಗಿದೆ. ಸರಕಾರದ ಈ ಯಡವಟ್ಟು ಸಹ ಈಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

ಸಚಿವರ ಅಸಮಧಾನ :

ಉತನ್ನ ಶಿಕ್ಷಣ ಇಲಾಖೆ ಗಮನಕ್ಕೆ ಬಾರದೆ, ರಾಜ್ಯ ಸರಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಪ್ರೊ.ಕೊಟ್ರೇಶ್ ಅವರನ್ನು ಬೆಂಗಳೂರು ವಿವಿ ರಿಜಿಸ್ಟ್ರಾರ್ ಹುದ್ದೆಗೆ ವರ್ಗಾಯಿಸಿದ ಘಟನೆ ಬಗ್ಗೆ ಸಚಿವ ಡಾ. ಅಶ್ವಥ್ ನಾರಾಯಣ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

Peasant-protest-politically-motivated-turn-It's-unfortunate-DCM-Dr.Ashwath Narayan

ವಿವಿ ಕುಲಸಚಿವರ ಹುದ್ದೆಗೆ ಐಎಎಸ್ ಅಥವಾ ಹಿರಿತ ಕೆಎಎಸ್ ಅಧಿಕಾರಿಗಳನ್ನೇ ನೇಮಕ ಮಾಡಬೇಕು ಎಂಬುದಾಗಿ ಸರಕಾರವೇ ಕಾಯ್ದೆ ಮಾಡಿದೆ. ಆದರೆ ಅದನ್ನು ಉಲ್ಲಂಘಿಸಿ ಪ್ರಾಧ್ಯಾಪಕರನ್ನು ನೇಮಿಸಿದ್ದು ( ಪ್ರೊ.ಕೊಟ್ರೇಶ್ ಮೂಲತಃ ತುಮಕೂರು ವಿವಿಯ ಇತಿಹಾಸ ಪ್ರಾಧ್ಯಾಪಕರು ) ಎಷ್ಟು ಸರಿ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಕೂಡಲೇ ವರ್ಗಾವಣೆ ಆದೇಶ ಹಿಂಪಡೆಯಬೇಕು ಎಂದು ಸಹ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

key words : Bangalore-university-registrar-police-complaint-against-vice.chancellor

 

website developers in mysore