ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎತ್ತರಿಸಿದ ರೈಲ್ವೆ ಹಳಿ

Bangalore-railway-track-goes-over-the-top

ಬೆಂಗಳೂರು ಸೆಪ್ಟೆಂಬರ್ ೩೦, ೨೦೨೧ (www.justkannada.in): ಬೆಂಗಳೂರಿನ ಹೆಬ್ಬಾಳ ಹಾಗೂ ಬಾಣಸವಾಡಿ ನಡುವಿನ ಐದು ಕಿ.ಮೀ. ಉದ್ದ ರೈಲು ಮಾರ್ಗವನ್ನು ಎತ್ತರಿಸಿದ ರೈಲು ಮಾರ್ಗವನ್ನಾಗಿ ಪರಿವರ್ತಿಸಲು ಪ್ರಸ್ತಾಪಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇದು ಬೆಂಗಳೂರು ನಗರದ ರೈಲ್ವೆ ನಕ್ಷೆಯಲ್ಲಿ ಮೊಟ್ಟ ಮೊದಲ ಎತ್ತರಿಸಿದ ರೈಲು ಹಳಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.

ಈ ಮಾರ್ಗದ ನಡುವೆ ಒಟ್ಟು ಆರು ಲೆವೆಲ್ ಕ್ರಾಸಿಂಗ್‌ಗಳು (ಐಅ) ಬರುತ್ತಿದ್ದು, ಅವುಗಳನ್ನು ತಪ್ಪಿಸುವ ಸಲುವಾಗಿ ಈ ಎತ್ತರಿಸಿದ ರೈಲು ಹಳ್ಳಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ರೈಲ್ವೆ ಮೇಲ್ಸೇತುವೆ/ ಕೆಳಸೇತುವೆಯನ್ನು ನಿರ್ಮಿಸುವ ಕೆಲಸದಲ್ಲಿರುವ ಸವಾಲುಗಳು ಹಾಗೂ ಕಷ್ಟಗಳ ಹಿನ್ನೆಲೆಯಲ್ಲಿ ಈ ಎತ್ತರಿಸಿದ ರೈಲ್ವೆ ಹಳಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಸ್ತಾವನೆಯ ಕುರಿತು ಬುಧವಾರ ನಡೆದ ಕರ್ನಾಟಕ ರೈಲು ಮೂಲಭೂತಸೌಕರ್ಯ ಅಭಿವೃದ್ಧಿ ಉದ್ಯಮ (K-RIDE) ಅಧಿಕಾರಿಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
K-RIDE ನ ಐದು ಕಿ.ಮೀ.ಗಳ ಉದ್ದದ ಡಬ್ಲಿಂಗ್ ಯೋಜನೆ ಯಶವಂತಪುರ ಹಾಗೂ ಚನ್ನಸಂದ್ರ ನಡುವೆ ಸಂಪರ್ಕ ಕಲ್ಪಿಸಿದರೆ, ಈ ಎತ್ತರಿಸಿದ ರೈಲು ಮಾರ್ಗದ ಯೋಜನೆಯನ್ನು ನಗರ ಸಬ್‌ಅರ್ಬನ್ ರೈಲು ಯೋಜನೆಯಡಿ (೧೪೧ ಕಿ.ಮೀ.) ಕೈಗೊಳ್ಳಲು ಯೋಜಿಸಲಾಗಿದೆ. ಮೂಲಗಳ ಪ್ರಕಾರ ಈ ಪ್ರಸ್ತಾವನೆಗೆ ರಾಜ್ಯ ಹಾಗೂ ಕೇಂದ್ರ ಎರಡೂ ಸರ್ಕಾರಗಳಿಂದ ಅನುಮೋದನೆಯೂ ಲಭಿಸಿದೆ.

RoB (ರೈಲು ಮೇಲ್ಸೇತುವೆ) ಹಾಗೂ RuB (ರೈಲ್ವೆ ಕೆಳಸೇತುವೆ)ಗೆ ಭಾಗಶಃ ಹಣಕಾಸನ್ನು ಒದಗಿಸುವ ಬಿಬಿಎಂಪಿ ಈ ಯೋಜನೆಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. “ಅಗತ್ಯ ಸ್ಥಳಾವಕಾಶದ ಕೊರತೆಯಿಂದಾಗಿ ನಮಗೆ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸುವುದು ಸಾಧ್ಯವಾಗುತಿಲ್ಲ. ಕೆಲವು RoB ಹಾಗೂ RuB ಯೋಜನೆಗಳು ಅನುಮೋದನೆ ಲಭಿಸಿರುವ ಹೊರತಾಗಿಯೂ ಬಹಳ ದೀರ್ಘ ಸಮಯದಿಂದ ಬಾಕಿ ಉಳಿದುಕೊಂಡಿವೆ.

ಈ ಎತ್ತರಿಸಿದ ರೈಲು ಮಾರ್ಗದ ಪ್ರಯೋಗ ನಗರದ ಸಂಚಾರ ವ್ಯವಸ್ಥೆಗೆ ದೊಡ್ಡ ಕೊಡುಗೆಯಾಗಬಲ್ಲದು. ಇದು ರೈಲು ಪ್ರಯಾಣಿಕರು ಹಾಗೂ ವಾಹನ ಚಾಲಕರು ಇಬ್ಬರಿಗೂ ಬಹಳ ನೆರವಾಗುತ್ತದೆ,” ಎನ್ನುತ್ತಾರೆ ಬಿಬಿಎಂಪಿಯ ರಸ್ತೆ ಮೂಲಭೂತಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಬಿ.ಎಸ್. ಪ್ರಹ್ಲಾದ್.

ಎತ್ತರಿಸಿದ ರೈಲು ಹಳಿಗಳ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿಯ ಅಗತ್ಯ ಬೀಳುವುದಿಲ್ಲ. “ಹೆಬ್ಬಾಳ ಹಾಗೂ ಬಾಣಸವಾಡಿ ನಡುವೆ ಕನಿಷ್ಠ ಆರು ಲೆವೆಲ್ ಕ್ರಾಸಿಂಗ್‌ಗಳಿವೆ. ಅದು ಬಹಳ ದಟ್ಟವಾದ ಜನಸಂಖ್ಯೆ ಇರುವಂತಹ ಪ್ರದೇಶಗಳಾಗಿರುವ ಕಾರಣದಿಂದಾಗಿ, ರೈಲು ಮೇಲ್ಸೇತುವೆಗಳನ್ನು ನಿರ್ಮಿಸಲು ಸ್ಥಳೀಯ ನಿವಾಸಗಳನ್ನು ಕೆಡವಬೇಕಾಗುತಿತ್ತು. ಆದರೆ ಈ ಎತ್ತರಿಸಿದ ರೈಲು ಪಟ್ಟಿ ಯೋಜನೆ ನಿಜಕ್ಕೂ ಅದ್ಭುತವಾಗಿದೆ,” ಎಂದರು.

K-RIDE ನ ಹಿರಿಯ ಅಧಿಕಾರಿಯೊಬ್ಬರು ಶೀಘ್ರದಲ್ಲೇ ಈ ಯೋಜನೆಯ ಸಿವಿಲ್ ಕೆಲಸಕ್ಕೆ ಟೆಂಡರ್‌ಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. “ಈ ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನವನ್ನು ನಡೆಸುವ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದ್ದು, ನಮಗೆ ಅಗತ್ಯ ಅನುಮೋದನೆಗಳೂ ಸಹ ಲಭಿಸಿವೆ. ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯುತ್ತೇವೆ,” ಎಂದರು.

ನಗರಾಭಿವೃದ್ಧಿ ತಜ್ಞ ಸಂಜೀವ್ ದ್ಯಾಮಣ್ಣನವರ ಅವರೂ ಸಹ ಈ ಪ್ರಸ್ತಾವನೆಯನ್ನು ಸ್ವಾಗತಿಸಿದ್ದಾರೆ. “ಟ್ಯಾನರಿ ರಸ್ತೆ, ವೀರಣ್ಣಪಾಳ್ಯ, ಹೆಬ್ಬಾಳ ಹಾಗೂ ಬಾಣಸವಾಡಿ ಬಳಿ ಇಂತಹ ಆರು ಲೆವೆಲ್ ಕ್ರಾಸಿಂಗ್‌ಗಳಿವೆ. ಈ ಕ್ರಾಸಿಂಗ್‌ಗಳಿಗೆ ಬಹಳ ಹಿಂದೆಯೇ ಪರಿಹಾರ ಹುಡುಕಬೇಕಾಗಿತ್ತು. ಆದರೆ ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಜನಸಂಖ್ಯೆ ಇರುವ ಕಾರಣದಿಂದಾಗಿ ಮೇಲ್ಸೇತುವೆ ಅಥವಾ ಕೆಳ ಸೇತುವೆಗಳ ನಿರ್ಮಾಣ ಬಹಳ ಕಷ್ಟ. ಮೇಲಾಗಿ ಇಲ್ಲಿನ ರಸ್ತೆಗಳೂ ಸಹ ಬಹಳ ಕಿರಿದಾಗಿವೆ. ಈ ಎತ್ತರಿಸಿದ ರೈಲು ಪಟ್ಟಿ ನಿರ್ಮಾಣ ಯೋಜನೆ ಸೂಕ್ತ ಉಪಾಯ ಎನಿಸುತ್ತದೆ,” ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಅನುಷ್ಠಾನದ ಪ್ರಾಥಮಿಕ ಹಂತದಲ್ಲಿರುವ ೧೪೧ ಕಿ.ಮೀ. ಉದ್ದದ ಸಬ್‌ಅರ್ಬನ್ ರೈಲು ಸಂಪರ್ಕಜಾಲ, ಕೆಲವು ಸ್ಥಳಗಳಲ್ಲಿ ಈ ರೀತಿಯ ಎತ್ತರಿಸಿದ ರೈಲು ಪಟ್ಟಿ ನಿರ್ಮಾಣವನ್ನೂ ಒಳಗೊಂಡಿದೆ. K-RIDE ನಿಲ್ದಾಣ ವಿನ್ಯಾಸಗಳು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಸಿವಿಲ್ ಕಾಮಗಾರಿಗಳ ಟೆಂಡರ್‌ಗಳನ್ನು ಸಿದ್ಧಪಡಿಸಲಾಗುವುದು.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words : Bangalore-railway-track-goes-over-the-top