ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಪುನರಾರಂಭ: ಮೈಸೂರು ರಸ್ತೆಯಲ್ಲಿ ವಾಹನ ಸವಾರರ ಪರದಾಟ

ಬೆಂಗಳೂರು:ಮೇ-10;(www.justkannada.in) ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ವೈಟ್‌ಟಾಪಿಂಗ್‌ ಕಾಮಗಾರಿ ಮೈಸೂರು ರಸ್ತೆಯಲ್ಲಿ ಪುನರಾರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ತಿಂಗಳು ಸಾಧ್ಯತೆಯಿದ್ದು, ವಾಹನಸವಾರರು ಪರ್ಯಾಯ ಮಾರ್ಗ ಅನುಸರಿಸಿ ಎಂದು ಬಿಬಿಎಂಪಿ ಸಲಹೆ ನೀಡಿದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಸಾಗುವ ಮಾರ್ಗದಲ್ಲಿ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ ಗೋರಿಪಾಳ್ಯ ಜಂಕ್ಷನ್‌ ಕಡೆಗೆ ವೈಟ್‌ಟಾಪಿಂಗ್‌ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ 2 ಕಿ.ಮೀ. ವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಎಡ ಬದಿ ರಸ್ತೆಯ ಅರ್ಧ ಭಾಗಕ್ಕೆ ವೈಟ್‌ಟಾಪಿಂಗ್‌ ಮಾಡಲಾಗುತ್ತಿದ್ದು, ಉಳಿದರ್ಧ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಒಂದು ಬಸ್‌ ಚಲಿಸುವಷ್ಟು ಜಾಗವಿದ್ದು, ನಿತ್ಯ ವಾಹನಗಳು ಕಿ.ಮೀ ಗಟ್ಟಲೇ ಸಾಲುಗಟ್ಟಿ ನಿಲ್ಲುವಂತಾಗಿದೆ.

ಇನ್ನು ಮೆಜೆಸ್ಟಿಕ್‌ ಕಡೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಟನ್‌ಪೇಟೆ ಮುಖ್ಯರಸ್ತೆಯನ್ನು ಟೆಂಡರ್‌ಶ್ಯೂರ್‌ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಕಾಮಗಾರಿ ಮುಗಿಯಲು 8 ತಿಂಗಳು ಹಿಡಿಯಲಿದೆ.

ಮೈಸೂರು ರಸ್ತೆಯಲ್ಲಿ ಪ್ರತಿದಿನವೂ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ಮೈಸೂರಿನಿಂದ ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳಿಗೆ ಈ ರಸ್ತೆಯೇ ಪ್ರಮುಖ ಮಾರ್ಗ. ರಸ್ತೆಗೆ ಹೊಂದಿಕೊಂಡಿರುವ ಪ್ರದೇಶಗಳ ಜನರು ಸಹ ಸಂಚಾರಕ್ಕೆ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 2 ತಿಂಗಳು ಬೇಕಾಗಿರುವುದರಿಂದ ಅಲ್ಲಿಯವರೆಗೆ ವಾಹನಸವಾರರು ಟ್ರಾಫಿಕ್ ಜಾಮ್ ನಲ್ಲಿ ಪರದಾದುವ ಸ್ಥಿತಿಯಿದೆ.

ಈ ನಿಟ್ಟಿನಲ್ಲಿ ವಾಹನಸವಾರು ಪರ್ಯಾಯ ಮಾರ್ಗ ಬಳಸುವುದು ಸೂಕ್ತ ಎಂದು ಬಿಬಿಎಂಪಿ ತಿಳಿಸಿದೆ. ಕಾರ್ಪೋರೇಷನ್‌, ಕೆ.ಆರ್‌.ಮಾರುಕಟ್ಟೆಯಿಂದ ಮೈಸೂರು ಕಡೆಗೆ ತೆರಳುವವರು ಚಾಮರಾಜಪೇಟೆ, ರಾಮಕೃಷ್ಣ ಆಶ್ರಮ, ಹನುಮಂತನಗರ 50 ಅಡಿ ರಸ್ತೆ ಮಾರ್ಗವಾಗಿ ನಾಯಂಡಹಳ್ಳಿ ಜಂಕ್ಷನ್‌ ತಲುಪಬಹುದು. ನಾಗರಬಾವಿ, ವಿಜಯನಗರ, ಗೋವಿಂದರಾಜನಗರದತ್ತ ಸಾಗುವವರು ಮಾಗಡಿ ರಸ್ತೆ, ಟೋಲ್‌ಗೇಟ್‌ ಮೂಲಕ ಸಂಚರಿಸಬಹುದು. ದ್ವಿಚಕ್ರ ವಾಹನ ಹಾಗೂ ಆಟೊದಲ್ಲಿ ಸಾಗುವವರು ಗೋರಿಪಾಳ್ಯದ ಮೂಲಕ ವಿಜಯನಗರ, ಹಂಪಿನಗರ ಕಡೆ ಸಾಗಬಹುದು.

ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಪುನರಾರಂಭ: ಮೈಸೂರು ರಸ್ತೆಯಲ್ಲಿ ವಾಹನ ಸವಾರರ ಪರದಾಟ
Bangalore-mysore road,white toping,restarted,traffic jam