ಸದನದಲ್ಲಿ ಗದ್ದಲ, ಹಿಜಾಬ್ ವಿಚಾರ ಕುರಿತು ಕಳವಳ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.  

ಬೆಂಗಳೂರು,ಫೆಬ್ರವರಿ,17,2022(www.justkannada.in): ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ವಿವಾದ ಮತ್ತು ನಿನ್ನೆ ಮತ್ತು ಇಂದು ಸದನದಲ್ಲಿ ನಡೆದ ಗದ್ದಲ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರು ಹೇಳಿದ್ದಿಷ್ಟು.

ನಾನು ಪ್ರಧಾನಿ ಆಗಿದ್ದಾಗ ಏನೆಲ್ಲ ಕೊಟ್ಟೆ ಎಂದು ಹೇಳಲು ಹೋಗಲ್ಲ. ಈಗ ನಾನು ರಾಜ್ಯಸಭಾ ಸದಸ್ಯ ಇದ್ದೇನೆ. ಮೊನ್ನೆ ಅಧಿವೇಶನದಲ್ಲಿ ಬಜೆಟ್ ಬಗ್ಗೆ ರಾಷ್ಟ್ರಪತಿ ಭಾಷಣದ ಬಗ್ಗೆ ಮಾತಾಡಿದ್ದೇನೆ. ಈ ದಿನ ದತ್ತಾ ಅವರು ಹಳೆಯ ದಿನಗಳನ್ನು ನೆನಪಿಸಿದ್ದಾರೆ. ಆ ಕಾಲದ್ದು ಈಗ ಉಪಯೋಗ ಇಲ್ಲ.

ದೊಡ್ಡವರು ಏನೋ ಹೇಳ್ತಾರೆ ಅಂದ್ರೆ ಗೌರವ ಇರೋದು ಆಗ. ನಾನು ಯಾವತ್ತು ಸದನದ ಬಾವಿಯೊಳಗೆ ಹೋಗಲೇ ಇಲ್ಲ. ವಿರೋಧ ಪಕ್ಷದ ನಾಯಕನಾಗಿ ಅಭಿಪ್ರಾಯ ಹೇಳ್ತಾ ಇದ್ದೆ. ಕೆಲವು ಸಲಹೆಗಳನ್ನು ಕೊಡುತ್ತಿದ್ದೆ. ನಾನು ಅಶ್ಲೀಲ ಪದವನ್ನು  ಒಂದು ದಿನವೂ ಮಾತಾಡಿಲ್ಲ. ಅಶ್ಲೀಲ ಪದ ಬಳಸುವುದರಿಂದ ಏನಾಗ್ತಿದೆ. ತೀರಾ ತಳಮಟ್ಟಕ್ಕೆ ಹೋಗ್ತಾ ಇದೆ. ಸದನ ಎಂಥೆಂತವರನ್ನು ನೋಡಿದ್ವಿ ನಾವು ಆಗ.

ನಾನು ನಿನ್ನೆ ಮೊನ್ನೆ ಸದನವನ್ನು ನೋಡಿದೆ.  ಏನಾಗ್ತಿದೆ ಈ ದಿನಗಳಲ್ಲಿ. ಈಗ ಹಿಜಾಬ್ ವಿಚಾರ ಮಾತಾಡ್ತಾ ಇದಾರೆ. ದಾರಿ ತಪ್ಪಿ ಹೋಗ್ತಾ ಇದೆ.  ಪ್ರಾರಂಭದಲ್ಲೇ ಇದನ್ನ ಚಿವುಟಿ ಹಾಕಬೇಕಿತ್ತು. ಆಡಳಿತ ಪಕ್ಷವೇ ಈ ಕೆಲಸ ಮಾಡಬೇಕಿತ್ತು ಅಲ್ವಾ ? ಹಿಜಾಬ್ ವಿಚಾರದಲ್ಲಿ ಕೋರ್ಟ್ ಆರ್ಡರ್ ಗೂ ಬಗ್ಗಲ್ಲ ಅಂತ ಹೇಳಿಕೆ ಕೊಡ್ತಾರೆ.  ಹೆಣ್ಣು ಮಕ್ಕಳು ಇದನ್ನು ಹೀಗೆ  ಹರಡಲು ಬಿಟ್ಟರೆ ಮುಂದೆ ಕಷ್ಟವಾಗುತ್ತೆ. ಗಾಂಧೀಜಿ ಅವರು ಸ್ವತಂತ್ರ ತಂದು ಕೊಟ್ಟರು, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಕೊಟ್ಟರು. ಈಗ ಏನಾಗ್ತಿದೆ ? ಎಂದು ಹೆಚ್ ಡಿ ದೇವೇಗೌಡರು ಕಳವಳ ವ್ಯಕ್ತಪಡಿಸಿದರು.

ರಾಗಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಗಮನ ಹರಿಸಬೇಕು.

ರಾಗಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಗಮನ ಹರಿಸಬೇಕು. ಸಿಎಂ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ  ಮನವಿ ಸಲ್ಲಿಸುತ್ತೇನೆ. ನಮ್ಮ ಮಾತಿಗೆ ಬೆಲೆ ಕೊಡ್ತಾರೋ ಇಲ್ಲವೋ ಗೊತ್ತಿಲ್ಲ. ದತ್ತರವರು ರಾಗಿ ವಿಚಾರವನ್ನ ಸರ್ಕಾರದ ಗಮನಕ್ಕೆ ತಂದಿದ್ದಾರೆ.  ದತ್ತರವರು ಹೇಳಿದಂತೆ ಸಣ್ಣ, ದೊಡ್ಡ ರೈತರು ಎಂಬ ಬೇಧ ಬೇಡ ಅಂತ ಹೇಳಿದ್ದಾರೆ ನನ್ನದೂ ಕೂಡ ಅದೇ ಅಭಿಪ್ರಾಯ ಎಂದರು.

ಎಂಎಸ್ ಪಿ ಬೆಲೆ 3,377 ರೂಪಾಯಿಯನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.  ಕಳೆದ ಬಾರಿ 3,295 ರೂಪಾಯಿ ಇತ್ತು. ಈಗ ಕೇವಲ 52 ರೂಪಾಯಿ .ಹೆಚ್ಚಳ ಮಾಡಿದ್ದಾರೆ. ಯಾವ ಆಧಾರದ ಮೇಲೆ 52 ರೂಪಾಯಿ ಹೆಚ್ಚಳ ಮಾಡಿದ್ದಾರೋ ಗೋತ್ತಿಲ್ಲ. ನೆಪ ಮಾತ್ರಕ್ಕೆ 52 ರೂಪಾಯಿ ಹೆಚ್ಚಳ ಮಾಡಿದ್ದಾರೆ. ನನ್ನ ಹೋರಾಟ ನಿರಂತರವಾಗಿ ರೈತರ ಪರವಾಗಿ ಇರುತ್ತೆ.  ನಾವೆಲ್ಲ ರೈತ ಕುಟುಂಬದವರೇ ಹಾಗಾಗಿ ಅವರಿಗೆ ಅನ್ಯಾಯವಾದಾಗ ನಾನು ಅವರ ಪರವಾಗಿ ನಿಲ್ಲುತ್ತೇನೆ ಎಂದು ಹೆಚ್.ಡಿಡಿ ತಿಳಿಸಿದರು.

ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂಪಾಯಿಯನ್ನಾದರೂ ಕೊಡಬೇಕು.  ಕೇವಲ 52 ರೂಪಾಯಿ ಇಂದ ಏನಾಗುತ್ತೆ ನನಗಂತೂ ಅರ್ಥವಾಗುತ್ತಿಲ್ಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ. ಇಂದು ಗೊಬ್ಬರದ ರೇಟ್ ಎಷ್ಟಾಗಿದೆ.  ಈ 52 ರೂಪಾಯಿನಿಂದ ಏನಾಗುತ್ತೆ ? ಫೆ. 20 ರಂದು ದೆಹಲಿಗೆ ಹೋಗುತ್ತೇನೆ. ಈಗ ಇತರ ರಾಜ್ಯಗಳ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಪ್ರಧಾನ ಮಂತ್ರಿ ಅವರನ್ನ ಭೇಟಿಗೆ ಸಮಯ ಕೇಳುತ್ತೀನಿ, ಭೇಟಿಗೆ ಅವಕಾಶ ಸಿಕ್ಕರೆ ಎಲ್ಲಾ ವಿಷಯವನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನಿ ಎಂದರು.

Key words: Bangalore-former PM-HD Devegowda