ಟೋಯಿಂಗ್ ವಾಹನಗಳು ಎಸ್‌ಒಪಿ ಅನುಸರಿಸುವುದು ಕಡ್ಡಾಯ: ಬೆಂಗಳೂರು ನಗರ ಪೊಲೀಸ್ ಆಯುಕ್ತ

 

ಬೆಂಗಳೂರು, ಆಗಸ್ಟ್ ೨೩, ೨೦೨೧ (www.justkannada.in): ನಿಮ್ಮ ವಾಹನವನ್ನು ಟೌ ಮಾಡಿಕೊಂಡು ಹೋಗುತ್ತಿರುವುದನ್ನು ನೋಡಿದರೆ ನಿಮ್ಮ ರಕ್ತ ಕುದಿಯುತ್ತದೆಯೇ? ಹಾಗಾದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬೆಂಗಳೂರು ಸಂಚಾರ ಪೊಲೀಸ್ (ಬಿಟಿಪಿ) ವತಿಯಿಂದ ವಾಹನಗಳನ್ನು ಟೌ ಮಾಡಿಕೊಂಡು ಹೋಗಲು ಗುತ್ತಿಗೆ ನೀಡಿರುವ ಗುತ್ತಿಗೆದಾರರಿಗೆ, ನಿಯಮಬಾಹಿರ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಟೌ ಮಾಡಿಕೊಂಡು ಹೋಗಲು ಎಸ್‌ಒಪಿಗಳನ್ನು (Standard Operating Procedures (SOPs)) ಪಾಲಿಸುವುದು ಕಡ್ಡಾಯ ಎಂದು ಆದೇಶಿಸಿದ್ದಾರೆ.

ಜೊತೆಗೆ, ನಗರ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಒಂದು ಸಾರ್ವಜನಿಕ ವ್ಯವಸ್ಥೆಯನ್ನೂ ಸಹ ಪರಿಚಯಿಸುವುದಾಗಿ ತಿಳಿಸಿದ್ದಾರೆ.

ಕಳೆದ ಗುರುವಾರದಂದು ಇಂದಿರಾನಗರದ ಮೆಟ್ರೊ ರೈಲು ನಿಲ್ದಾಣದ ಬಳಿ ನಡೆದಂತಹ ಘಟನೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಆ ಘಟನೆಯಲ್ಲಿ ವಾಹನಗಳನ್ನು ಟೌ ಮಾಡಿಕೊಂಡು ಹೋಗುತ್ತಿದ್ದಾಗ ಆ ವಾಹನಗಳ ಕೆಲವು ಮಾಲೀಕರು ನಿಯಮಬಾಹಿರ ಸ್ಥಳವೆಂದು ಮತ್ತು ಟೌ ಮಾಡುವ ಕುರಿತು ಮುಂಚಿತವಾಗಿಯೇ ಸೂಚಿಸಲಾಗಿರಲಿಲ್ಲ ಎಂದು ಪ್ರಶ್ನಿಸಿ ಟೋಯಿಂಗ್ ಸಿಬ್ಬಂದಿಗಳೊಂದಿಗೆ ವಾದ ನಡೆಸಿ ಟೋಯಿಂಗ್ ಸಿಬ್ಬಂದಿ ಮೇಲೆ ದಾಳಿ ಮಾಡಿದ ಸುದ್ದಿ ವರದಿಯಾಗಿತ್ತು. ಟೋಯಿಂಗ್ ತಂಡವನ್ನು ಮುನ್ನಡೆಸುತ್ತಿದ್ದ ಸಂಚಾರ ವಿಭಾಗದ ಎಎಸ್‌ಐ ಒಬ್ಬರ ದೂರನ್ನು ಆಧರಿಸಿ, ಇಂದಿರಾನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ದಾಳಿ ಮಾಡಿದ ವಾಹನ ಚಾಲಕರ ವಿರುದ್ಧ ಪ್ರಕರಣವನ್ನು ದಾಖಲಿಸಿ ಶೋಧಿಸುತ್ತಿದ್ದಾರೆ.

ಚಿತ್ರ ಕೃಪೆ : ಇಂಟರ್ ನೆಟ್

ಈ ನಡುವೆ ವಾಹನವನ್ನು ಟೌ ಮಾಡಿಕೊಂಡು ಹೋಗುತ್ತಿದ್ದ ವಾಹನದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಸ್ಟ್ ೨೦ರಂದು ವೈರಲ್ ಆಗಿದೆ. ಆ ಚಿತ್ರದಲ್ಲಿ ಸಾಮಾನ್ಯ ಬಟ್ಟೆಯಲ್ಲಿರುವ ವ್ಯಕ್ತಿಗಳು, ನಿಯಮ ಉಲ್ಲಂಘಸಿ ನಿಲ್ಲಿಸಿದ್ದಂತಹ ದ್ವಿಚಕ್ರವಾಹನಗಳನ್ನು ಎತ್ತಿಕೊಂಡು ಹೋಗುತ್ತಿರುವುದು ಹಾಗೂ ನಗರದ ರಿಜಿಸ್ಟೆಷನ್ ಇರುವ ಮಿನಿ ಗೂಡ್ಸ್ ಟ್ರಕ್‌ನಲ್ಲಿ ಹಾಕುತ್ತಿರುವುದು ಕಂಡು ಬಂದಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಕುರಿತು ಬಿಟಿಪಿಯನ್ನು ಕೆಲವರು ಪ್ರಶ್ನಿಸಿದ್ದರು. ಇದಕ್ಕೆ ಬಿಟಿಪಿ ಆ ವಾಹನ ತನ್ನದಲ್ಲ ಎಂದು ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲಿಂಗ್ ಆಯಿತು. ಟೌ ಮಾಡಿಕೊಂಡು ಹೋಗುತ್ತಿರುವ ಚಿತ್ರದಲ್ಲಿರುವ ವಾಹನದ ರಿಜಿಸ್ಟೆಷನ್ ಕುರಿತು ಟ್ವಿಟ್ಟರ್ ಬಳಕೆದಾರರೊಬ್ಬರು ಪರಿಶೀಲನೆ ನಡೆಸಿ ಆ ಮಿನಿ-ಗೂಡ್ಸ್ ವಾಹನಕ್ಕೆ ವಿಮೆ ಇಲ್ಲದಿರುವುದು, ೨೦೧೭ರಲ್ಲೇ ಮುಕ್ತಾಯವಾಗಿರುವ ಫಿಟ್ನೆಸ್ ಸರ್ಟಿಫಿಕೆಟ್ ಒಳಗೊಂಡಂತೆ ಯಾವುದೇ ದಾಖಲೆಗಳೂ ಇಲ್ಲ ಎಂದು ಮತ್ತು ೨೦೦೩ರಿಂದ ತೆರಿಗೆ ಪಾವತಿಸಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

Tomorrow – road bandh-protest-     Bangalore City -Police Commissioner -Kamal Pant

ಈ ಎಲ್ಲಾ ವಿವರಗಳನ್ನೂ ಪರಿಶೀಲಿಸಿದ ಬಿಟಿಪಿ ಆ ವಾಹನ ತಮ್ಮದಲ್ಲ ಎಂದು ವಾದಿಸಿ, ಹಾಗಾಗಿ ಅಲ್ಲಿದ್ದಂತಹ ವ್ಯಕ್ತಿಗಳು ಸಿವಿಲ್ ಬಟ್ಟೆಗಳಲ್ಲಿದ್ದಾರೆ ಎಂದು ತಿಳಿಸಿ ಕೈತೊಳೆದುಕೊಂಡಿತು. ಆ ಚಿತ್ರ ಯಾವ ದಿನಾಂಕದಂದು ತೆಗೆಯಲಾಗಿದೆ ಹಾಗೂ ಎಲ್ಲಿ ಎಂಬ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದೂ ತಿಳಿಸಿತ್ತು. ಆದರೆ ಟ್ವಿಟ್ಟರ್‌ನಲ್ಲಿ ಚಿತ್ರ ಬಹಳ ವೈರಲ್ ಆಗಿ ಬಿಟಿಪಿ ವಿರುದ್ಧ ಸಾರ್ವಜನಕರಿಂದ ಆಕ್ರೋಶ ವ್ಯಕ್ತವಾಯಿತು. “ಸರ್ಕಾರದ ಮಟ್ಟದಲ್ಲಿ ಈ ರೀತಿ ಎಲ್ಲೆಂದರಲ್ಲಿ, ಯಾವಾಗ ಅಂದರೆ ಆವಾಗ ನಿಯಮಬಾಹಿತ ವಾಹನ ನಿಲುಗಡೆ ಎಂದು ಕಾರಣ ನೀಡಿ ವಾಹನಗಳನ್ನು ಎಳೆದುಕೊಂಡು ಹೋಗುವ ರೀತಿಯಲ್ಲಿಯೇ ಇತರೆ ಕೆಲಸಗಳೂ ಸಹ ಅದೇ ವೇಗದಲ್ಲಿ ಪೂರ್ಣಗೊಳಿಸಲಾಗುತ್ತದೆಯೇ ಎಂದು ಪ್ರಶ್ನಿಸಿ,” ಟ್ರೋಲ್ ಮಾಡಲಾಯಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಜಂಟಿ ಪೊಲೀಸ್ ಆಯುಕ್ತ (ಸಂಚಾರ ವಿಭಾಗ) ಬಿ.ಆರ್. ರವಿಕಾಂತೇ ಗೌಡ ಅವರಿಗೆ ನಗರದಲ್ಲಿ ನಿಯಮಬಾಹಿರ ವಾಹನ ನಿಲುಗಡೆ ಪ್ರಕರಣಗಳಿಗೆ ಸಂಬಂಧಿಸಿದ ಒಂದು ಸಾರ್ವಜನಿಕ ಕುಂದುಕೊರತೆ ಆಲಿಸುವ ವ್ಯವಸ್ಥೆಯನ್ನು ಪರಿಚಯಿಸುವಂತೆ ಸೂಚಿಸಿದ್ದಾರೆ. ಜೊತೆಗೆ, ವಾಹನಗಳನ್ನು ಟೌ ಮಾಡಿಕೊಂಡು ಹೋಗುವ ವಾಹನಗಳ ಗುತ್ತಿಗೆ ದಾಖಲಾತಿಗಳು, ಎಸ್‌ಒಪಿ ಅನುಸರಣೆ ಕುರಿತು ನಿಗಾವಹಿಸುವಂತೆ ಬಿಟಿಪಿಗೆ ಸೂಚಿಸಿದ್ದಾರೆ. ಒಂದು ವೇಳೆ ಟೋಯಿಂಗ್ ಸಿಬ್ಬಂದಿಗಳು ಎಸ್‌ಒಪಿ ಅನುಸರಿಸುದೇ ಇರುವುದು ಕಂಡು ಬಂದರೆ ಅವರ ಗುತ್ತಿಗೆ ಪರವಾನಗಿಯನ್ನು ರದ್ದುಗೊಳಿಸಿ ಭವಿಷ್ಯದಲ್ಲಿ ಟೋಯಿಂಗ್ ಗುತ್ತಿಗೆ ಪ್ರಕ್ರಿಯೆಗಳಲ್ಲಿ ಭಾಗವಹಿಸದಿರಲು ಆದೇಶಿಸುವಂತೆ ಸೂಚಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

 

key words : bangalore/crime/look-who-must-tow-the-line-too-from-now-on