ಬೆಂಗಳೂರಿನಿಂದ ಹೊರಗೆ ಹಾರಲಿದ್ದೀರಾ? ಹಾಗಾದ್ರೆ ನಿಮ್ಮ ಮುಖವೇ ನಿಮ್ಮ ಗುರುತು ಹಾಗೂ ಟಿಕೆಟ್..

ಬೆಂಗಳೂರು, ಡಿಸೆಂಬರ್ ,2, 2022 (www.justkannada.in): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಥಳೀಯ ಪ್ರಯಾಣಿಕರು ಸಂಪರ್ಕರಹಿತ, ಕಾಗದರಹಿತ ಚೆಕ್-ಇನ್ ಹಾಗೂ ಬೋರ್ಡಿಂಗ್ ಪ್ರಕ್ರಿಯೆಯ ಅನುಭವವನ್ನು ನೀಡುವಂತಹ ಭಾರತದ ಕೇವಲ ಮೂರು ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಗುರುವಾರದಂದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಬೆಂಗಳೂರು, ದೆಹಲಿ ಹಾಗೂ ವಾರಣಾಸಿ ವಿಮಾನನಿಲ್ದಾಣಗಳಲ್ಲಿ ಮುಖವನ್ನು ಗುರುತಿಸುವ ಬಯೊಮೆಟ್ರಿಕ್ಸ್ ಆಧಾರಿತ ‘ಡಿಜಿಯಾತ್ರಾ,’ ಎಂಬ ಹೆಸರಿನ ಡಿಜಿಟಲ್ ಪ್ರಯಾಣದ ವ್ಯವಸ್ಥೆಗೆ ಚಾಲನೆ ನೀಡಿತು.

ಏರ್ ಇಂಡಿಯಾ, ವಿಸ್ತಾರಾ ಹಾಗೂ ಏರ್‌ ಏಷ್ಯಾಗಳನ್ನು ವ್ಯಾಪಿಸುವ ಡಿಜಿಯಾತ್ರಾದ ಬೀಟಾ ಆವೃತ್ತಿಯನ್ನು ಆಗಸ್ಟ್ 15ರಂದು ನಗರದ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು. ಈ ವ್ಯವಸ್ಥೆಯಡಿ ಪ್ರಯಾಣಿಕರು, ಸಿಂಗಲ್-ಟೋಕನ್ ಮುಖದ ಬಯೋಮೆಟ್ರಿಕ್ಸ್ ಅನ್ನು ಬಳಸಿಕೊಂಡು ಭದ್ರತಾ ಪ್ರವೇಶದ್ವಾರಗಳನ್ನು ದಾಟಿ, ವಿಮಾನಗಳನ್ನು ಏರಬಹುದಾಗಿದೆ. ಸರಳವಾಗಿ ಹೇಳುವುದಾದರೆ, ಪ್ರಯಾಣಿಕರು ಇನ್ನು ಮುಂದೆ ತಮ್ಮ ಗುರುತಿನ ದಾಖಲಾತಿಗಳು ಹಾಗೂ ಬೋರ್ಡಿಂಗ್ ಪಾಸ್‌ ಗಳನ್ನು ತೋರಿಸಬೇಕಾಗಿಲ್ಲ. ಅವರ ಮುಖವೇ ಅವರ ಗುರುತಾಗಿರುತ್ತದೆ. ವಿಮಾನವನ್ನು ಹತ್ತುವ ಒಟ್ಟಾರೆ ಅವಧಿಯನ್ನು ಮಹತ್ತರವಾದ ಮಟ್ಟಿಗೆ ಕಡಿಮೆಗೊಳಿಸುವುದು ಈ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶವಾಗಿದೆ.

ಗುರುವಾರದಂದು ಬಿಡುಗಡೆಗೊಳಿಸಿದ ಈ ವಿನೂತನ ತಂತ್ರಜ್ಞಾನದ ನಂತರ ನಾಲ್ಕು ವಿಮಾನಯಾನ ಸಂಸ್ಥೆಗಳು (ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಹಾಗೂ ಏರ್‌ ಏಷ್ಯಾ) ಇವುಗಳು ಡಿಜಿಯಾತ್ರಾದ ಭಾಗವಾಗಿವೆ. ಸ್ಪೈಸ್‌ ಜೆಟ್, ಗೋ ಫಸ್ಟ್ ಹಾಗೂ ಇತರೆ ಸಣ್ಣ ವಿಮಾನಯಾನ ಸಂಸ್ಥೆಗಳು ಈ ಸಾಲಿಗೆ ಇನ್ನೂ ಸೇರ್ಪಡೆಯಾಗಬೇಕಿದೆ, ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್)ದ ಮೂಲಗಳು ತಿಳಿಸಿವೆ.

ಈ ಡಿಜಿಯಾತ್ರಾ ಆ್ಯಪ್ ಈ ಮುಂಚೆ ಗೂಗಲ್ ಪ್ಲೇ ನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಆ್ಯಪಲ್ ಆ್ಯಪ್ ಸ್ಟೋರ್‌ ನಲ್ಲಿಯೂ ಲಭ್ಯವಿದೆ. ಬಿಐಎಎಲ್ ಪ್ರಕಾರ ಈ ವಿನೂತನ ಬಯೋಮೆಟ್ರಿಕ್ ದತ್ತಾಂಶವನ್ನು ಪ್ರಯಾಣಿಕರ ದೃಢೀಕರಣ ಹಾಗೂ ತಪಾಸಣೆಗೆಗಾಗಿ ಮಾತ್ರ ಬಳಸಲಾಗುತ್ತದೆ, ಅವರ ಗುರುತಿಗಾಗಿ ಅಲ್ಲ.

ಕಾರ್ಯನಿರ್ವಹಣೆ ಹೇಗೆ?

  • ಪ್ರಯಾಣಿಕರು ಡಿಜಿಯಾತ್ರಾ ಆ್ಯಪ್ (ಆ್ಯಂಡ್ರಾಯ್ಡ್ ಅಥವಾ ಐಓಎಸ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸಿಕೊಳ್ಳಬೇಕು.
  • ನಂತರ ತಮ್ಮ ಆಧಾರ್ ಕಾರ್ಡ್ಗಳನ್ನು ಅಪ್‌ಲೋಡ್ ಮಾಡಿ ತಮ್ಮ ಗುರುತನ್ನು ಸ್ಥಾಪಿಸಬೇಕು. ಟಿಕೆಟ್ ಮೇಲಿರುವ ಹೆಸರು ಹಾಗೂ ಆಧಾರ್‌ನಲ್ಲಿರುವ ಹೆಸರುಗಳು ಸರಿಹೊಂದಬೇಕು.
  • ಈ ನೋಂದಣಿ ಪ್ರಕ್ರಿಯೆಯ ಕೊನೆ ಕ್ರಮದಡಿ ಒಂದು ಸೆಲ್ಫೀ ತೆಗೆದು ಅಪ್‌ ಲೋಡ್ ಮಾಡುವುದಾಗಿದೆ.
  • ನಂತರ ಪ್ರಯಾಣಿಕರು ಆನ್‌ಲೈನ್ ಮೂಲಕ ತಮ್ಮ ವಿಮಾನದ ವಿವರಗಳನ್ನು ತುಂಬಬೇಕು ಹಾಗೂ ತಮ್ಮ ಬೋರ್ಡಿಂಗ್ ಪಾಸುಗಳನ್ನು ಸ್ಕ್ಯಾನ್/ ಅಪ್‌ ಲೋಡ್ ಮಾಡಬೇಕು.
  • ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಇ-ದ್ವಾರದ ಬಳಿ ತೆರಳಿ (ಇದು ವಿಶೇಷವಾಗಿ ಡಿಜಿಯಾತ್ರಾ ಬಳಕೆದಾರರಿಗೆ ಮಾತ್ರ ಇರುತ್ತದೆ), ಗುರುತಿಸಲ್ಪಟ್ಟಿರುವ ಸ್ಥಳದಲ್ಲಿ ನಿಂತು, ಕ್ಯಾಮೆರಾದತ್ತ ಮುಖ ಮಾಡಿ ದಿಟ್ಟಿಸಬೇಕು. ಆ ಮೂಲಕ ಪ್ರಯಾಣಿಕರ ಮುಖದ ಬಯೋಮೆಟ್ರಿಕ್ಸ್ ಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ನಂತರ ಇ-ದ್ವಾರ ತೆರೆದುಕೊಳ್ಳುತ್ತದೆ.
  • ಟರ್ಮಿನಲ್ ಒಳಗೆ ಚೆಕ್-ಇನ್ ಸರಂಜಾಮಿನೊಂದಿಗೆ ಇರುವ ಪ್ರಯಾಣಿಕರು ತಮ್ಮ ಏರ್‌ ಲೈನ್ ಕೌಂಟರ್ ಬಳಿಗೆ ತೆರಳಿ ತಮ್ಮ ಸರಂಜಾಮನ್ನು ಇಟ್ಟು, ಭದ್ರತಾ ತೀರುವಳಿ ಕಡೆ ತೆರಳಬೇಕು. ಕೇವಲ ಕೈಚೀಲ ಇರುವವರು ನೇರವಾಗಿ ಸೆಕ್ಯೂರಿಟಿ ಕ್ಲಿಯರೆನ್ಸ್ ಗೆ ಹೋಗಬಹುದು.
  • ಸೆಕ್ಯೂರಿಟಿ ಕ್ಲಿಯರೆನ್ಸ್ ಬಳಿ, ಪ್ರಯಾಣಿಕರು ಇ-ದ್ವಾರದ ಬಳಿಗೆ ಹೋಗಿ ಅಲ್ಲಿಯೂ ಗುರುತಿಸಲ್ಪಟ್ಟಿರುವ ಸ್ಥಳದಲ್ಲಿ ನಿಂತು ಕ್ಯಾಮೆರಾದತ್ತ ದಿಟ್ಟಿಸಬೇಕು. ದೃಢೀಕರಣದ ನಂತರ ಇ-ದ್ವಾರ ತೆರೆದುಕೊಳ್ಳುತ್ತದೆ. ಸಿಐಎಸ್‌ ಎಫ್ ಸಿಬ್ಬಂದಿಗಳಿಂದ ತಪಾಸಣೆಯ ನಂತರ ಪ್ರಯಾಣಿಕರು ಬೋರ್ಡಿಂಗ್ ದ್ವಾರದ ಕಡೆಗೆ ತೆರಳಬಹುದು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bangalore- airport- Facial recognition – Digiatra – identity