ಬಂಡೀಪುರದಲ್ಲಿರುವ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ ಯೋಜನೆಗೆ 50 ವರ್ಷ.

ಚಾಮರಾಜನಗರ, ನವೆಂಬರ್, 17, 2022 (www.justkannada.in): ಈ ವರ್ಷ ಬಂಡೀಪುರ ಹುಲಿ ಮೀಸಲಿನ ರಾಜ್ಯದ ಮೊಟ್ಟ ಮೊದಲ ‘ಪ್ರಾಜೆಕ್ಟ್ ಟೈಗರ್’ಗೆ ಸುರ್ವಣ ಮಹೋತ್ಸವದ ಸಂಭ್ರಮವಾಗಿದೆ. ಈ 50 ವರ್ಷಗಳಲ್ಲಿ, ಈ ಯೋಜನೆಯು ಇಡೀ ದೇಶಕ್ಕೆ ಮಾದರಿಯಾಗಿ ವಿಕಸನಗೊಂಡಿದೆ.

೧೯೭೨ರಲ್ಲಿ ಹುಲಿಗಳ ಸಂತತಿಯನ್ನು ಸಂರಕ್ಷಿಸಲು ದೇಶದಾದ್ಯಂತ ಹುಲಿ ಮೀಸಲು ಪ್ರದೇಶಗಳಲ್ಲಿ ‘ಪ್ರಾಜೆಕ್ಟ್ ಟೈಗರ್’ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನವೆಂಬರ್ ೧೬, ೧೯೭೩ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಬಂಡೀಪುರದಲ್ಲಿ ಈ ‘ಪ್ರಾಜೆಕ್ಟ್ ಟೈಗರ್’ ಗೆ ಚಾಲನೆ ನೀಡಿದ್ದರು.

ಈ ಯೋಜನೆಯ ಉದ್ಘಾಟನೆಯ ಸಮಯದಲ್ಲಿ ಬಂಡೀಪುರದಲ್ಲಿ ಕೇವಲ ೧೨ ಹುಲಿಗಳಿದ್ದವು. ೨೦೨೦ರಲ್ಲಿ ನಡೆಸಿದಂತಹ ಹುಲಿಗಳ ಗಣತಿಯ ಪ್ರಕಾರ ಪ್ರಸ್ತುತ ಬಂಡೀಪುರ ಇಡೀ ದೇಶದಲ್ಲಿಯೇ ಎರಡನೇ ಅತೀ ಹೆಚ್ಚಿನ, ಅಂದರೆ ೧೪೩ ಹುಲಿಗಳು ಹಾಗೂ ೨೦೦ ಚಿರತೆಗಳನ್ನು ಹೊಂದಿರುವ ಮೀಸಲು ಪ್ರದೇಶವಾಗಿ ರೂಪುಗೊಂಡಿದೆ.

ಬಂಡೀಪುರದ ‘ಪ್ರಾಜೆಕ್ಟ್ ಟೈಗರ್’ನ ನಿರ್ದೇಶಕ ಡಾ. ರಮೇಶ್ ಕುಮಾರ್ ಅವರ ಪ್ರಕಾರ, ಬಂಡೀಪುರ ದೇಶದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಆನೆಗಳನ್ನು (೩,೦೪೬) ಹೊಂದಿವೆ. ಜೊತೆಗೆ ಇಲ್ಲಿ ಜಿಂಕೆಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಇತರೆ ಪ್ರಾಣಿಗಳು ಸೇರಿದಂತೆ ೨೬೦ಕ್ಕೂ ಹೆಚ್ಚಿನ ವಿವಿಧ ತಳಿಗಳ ಪಕ್ಷಿಗಳೂ ಇವೆ.

ಬಂಡೀಪುರ ಹುಲಿ ಮೀಸಲು ಪ್ರದೇಶ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕುಗಳನ್ನೂ ವ್ಯಾಪಿಸುವಂತೆ ಒಟ್ಟು ೧,೦೩೬ ಚದರ ಕಿ.ಮೀ.ಗಳ ವ್ಯಾಪ್ತಿಯನ್ನು ಹೊಂದಿದೆ. ಮೈಸೂರು ಜಿಲ್ಲೆ, ತಮಿಳುನಾಡಿನ ಮುದುಮಲೈ ಹಾಗೂ ಕೇರಳದ ವಯನಾಡ್ ಹುಲಿ ಮೀಸಲು ಪ್ರದೇಶಗಳಿಂದ ಕೂಡಿರುವ ನಾಗರಹೊಳೆ ಹುಲಿ ಮೀಸಲು ಪ್ರದೇಶಕ್ಕೆ ಹೊಂದಿಕೊಂಡಂತಿದೆ.

ಫೆಬ್ರವರಿ ೧೯, ೧೯೪೧ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ವೇಣುಗೋಪಾಲ ವನ್ಯಜೀವನಧಾಮ ಹಾಗೂ ಸುತ್ತಲಿನ ಇತರೆ ಅರಣ್ಯಗಳನ್ನು ವಿಲೀನಗೊಳಿಸಲಾಯಿತು. ೧೯೭೫ರಲ್ಲಿ ಈ ಭಾಗದ ಸುತ್ತಮುತ್ತಲಿನಲ್ಲಿರುವ ಇನ್ನೂ ಹಲವಾರು ಮೀಸಲು ಅರಣ್ಯ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಸಲಾಯಿತು. ನಂತರ ಇದರ ಪ್ರದೇಶ ವ್ಯಾಪ್ತಿ ೮೭೪.೨೦ ಚದರ ಕಿ.ಮೀ.ಗಳಿಗೆ ವಿಸ್ತಾರವಾಯಿತು.

ಪರಿಸರ-ಪ್ರವಾಸೋದ್ಯಮದ ತಾನ ಎಂದೂ ಗುರುತಿಸಿಕೊಂಡಿರುವ ಬಂಡೀಪುರ, ಪ್ರಸ್ತುತ ಸಫಾರಿಗಳು ಹಾಗೂ ಅತಿಥಿ ಗೃಹಗಳ ಮೂಲಕ ವಾರ್ಷಿಕ ರೂ. ೧೦ ರಿಂದ ರೂ.೧೨ ಕೋಟಿ ಆದಾಯ ಗಳಿಸುತ್ತಿದೆ.

ಬಂಡೀಪುರ ಅರಣ್ಯ ಪ್ರದೇಶ ಲಂಟಾನ ಸಸ್ಯಗಳಿಂದ ಆವೃತ್ತವಾಗಿದ್ದು, ಈವರೆಗೆ ಎಂಜಿಎನ್‌ ಆರ್‌ ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಹಾಗೂ ವಿವಿಧ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಗಳ ಸಹಾಯದೊಂದಿಗೆ ೮೦೦ ಹೆಕ್ಟೇರ್‌ ಗಳಷ್ಟು ಪ್ರದೇಶದಲ್ಲಿ ಇವುಗಳನ್ನು ತೆರವುಗೊಳಿಸಲಾಗಿದ್ದರೂ ಸಹ ಶೇ.60ರಷ್ಟು ಅರಣ್ಯ ಕಳೆಗಳಿಂದ ಕೂಡಿ ಸಮಸ್ಯೆ ಎದುರಿಸುತ್ತಿದೆ.

ಮಾನವ-ಪ್ರಾಣಿಗಳ ನಡುವಿನ ಸಂಘರ್ಷ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ೧೫೬ ಗ್ರಾಮಗಳಿರುವ ಈ ಹುಲಿ ಮೀಸಲು ಪ್ರದೇಶದಲ್ಲಿ ಎದುರಾಗುತ್ತಿರುವ ಮತ್ತೊಂದು ಸವಾಲಾಗಿದೆ. ಜೊತೆಗೆ ಆಗಾಗ ಕಾಡ್ಗಿಚ್ಚು ಹಾಗೂ ಪ್ರಾಣಿಗಳ ಕಾನೂನುಬಾಹಿರ ಕಳ್ಳ ಸಾಗಣೆಗಳಂತಹ ಪ್ರಕರಣಗಳೂ ವರದಿಯಾಗುತ್ತಿರುತ್ತವೆ.

ಸುದ್ದಿಮೂಲ: ಡೆಕ್ಕನ್ ಹೆರಾಲ್ಡ್

Key words: Bandipur- project Tiger Yojana- state- first –  25 years