ಕೆಲಸ ಮಾಡದೇ ಇದ್ದುದಕ್ಕೆ ನಿದ್ದೆಮಾಡಲೆಂದು ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ:ಜೂ-29:(www.justkannada.in) ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಅನುಮೋದಿಸುತ್ತೇನೆ ಎಂದಿರುವ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ, ಪ್ರಧಾನಿ ಮೋದಿ ಕೆಲಸಗಾರ ಎಂದು ಜನ ಅವರಿಗೆ ವೋಟ್ ಹಾಕಿ ಆಯ್ಕೆ ಮಾಡಿದ್ದಾರೆ. ಸಿದ್ದರಾಮಯ್ಯ ಕೆಲಸಗಾರ ಅಲ್ಲ ನಿದ್ದೆ ಮಾಡುವವರು. ಹಾಗಾಗಿ ಜನರಿ ನಿಮ್ಮನ್ನು ನಿದ್ದೆಮಾಡಲಿ ಎಂದು ಮನೆಗೆ ಕಳಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಬಾದಾಮಿಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ನೀವು ಕೆಲಸ ಮಾಡದೇ ನಿದ್ದೆ ಮಾಡಿದ್ದೀರಿ ಹಾಗಾಗಿ ನಿಮ್ಮನ್ನು ಮನೆಗೆ ಕಳಿಸಿದ್ದಾರೆ. ನಾನು ನಿಮ್ಮನ್ನ ಸಿದ್ದರಾಮಯ್ಯ ಅನ್ನಲ್ಲ, ನಿದ್ರಾಮಯ್ಯ ಎನ್ನುತ್ತೇನೆ. ಲೋಕಸಭಾ ಚುನಾವಣೆ ಸಂದರ್ಬದಲ್ಲಿ ಬಿಜೆಪಿಯನ್ನು ಭಾರತದಿಂದಲೇ ತೊಲಗಿಸುವುದಾಗಿ ಹೇಳಿದಿರಿ. ಈಗ ಏನಾಯಿತು? ಜನ ನಿಮ್ಮನ್ನೇ ಮನೆಗೆ ಕಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ಒಂದು ನಾಮ, ಜೆಡಿಎಸ್ ಗೆ ಒಂದು ನಾಮ ಹಾಗೂ ನಿಮಗೊಂದು ನಾಮ ಹಾಕಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಗುಡುಗಿದರು.

ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೊಂಡು ಜೆಡಿಎಸ್, ನೀವೂ ಒಂದಾದ್ರಿ. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್‍ನವರು ಎರಡು ಬಾರಿ ಸೋಲಿಸಿದ್ರು. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪನವರನ್ನು ಬಿಡುತ್ತೀರಾ ಎಂದು ದೇವೇಗೌಡರೇ ಹೇಳಿದ್ದಾರೆ. ಹೀಗಿರುವಾಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಮತ್ತು ಕಾಂಗ್ರೆಸ್ ಶಾಸಕರಲ್ಲೇ ಭಿನ್ನಮತವಿದೆ ಎಂದು ಹೇಳಿದರು.

ಬಿಜೆಪಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಸಿದ್ದರಾಮಯ್ಯ ಹೆಳಿಕೆ ನೀಡಿದ್ದರು. ಈಸ್ಟ್ ಇಂಡಿಯಾ ಕಂಪನಿಯನ್ನು ತಂದಿದ್ದು ಯಾರು? ಆ ಕಂಪನಿ ಜತೆ ಸಂಬಂಧ ಹೊಂದಿದ್ದವರು ಯಾರು. ಸಿದ್ದರಾಮಯ್ಯ ತಾವು ಸಿಎಂ ಆಗಬೇಕೆಂದು ಅವರ ಸೆರಗು ಹಿಡಿದು ಓಡಾಡಿದ್ದಾರೆ. ಹೀಗಾಗಿ ಈಗ ಜನ ಅವರನ್ನು ಎಲ್ಲಿ ಇಡಬೇಕು ಅಲ್ಲಿ ಇಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

ಮೋದಿ ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಮಟ್ಟ ಹಾಕಿದ್ದಾರೆ. ದೇಶದ ಬಗ್ಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಕೆಲಸ ಮಾಡದೆ ಇರೋರಿಗೆ ವೋಟ್ ಹಾಕುತ್ತಿರಾ ಎನ್ನುತ್ತಾರೆ. ಸಿದ್ದರಾಮಯ್ಯ ಮೋದಿಯ ಬಗ್ಗೆ ಅಹಂಕಾರದ ಮಾತುಗಳನ್ನಾಡಿದರು. ಅದಕ್ಕೆ ಜನ ಬಿಜೆಪಿಗೆ ಬಹುಮತ ನೀಡಿದರು. ಅಲ್ಲದೇ ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಜನರಿಗೆ ಅಕ್ಕಿ ಕೊಟ್ಟೆ, ಮೊಟ್ಟೆ ಕೊಟ್ಟೆ, ಶೂ ಕೊಟ್ಟೆ ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲ ಅವರ ಜೇಬಿಂದ ಕೋಟ್ರಾ? ಜನರ ತೆರಿಗೆ ಹಣದಿಂದ ಕೊಟ್ಟಿದ್ದಾರೆ ಅಷ್ಟೇ ಎಂದರು.

ಕೆಲಸ ಮಾಡದೇ ಇದ್ದುದಕ್ಕೆ ನಿದ್ದೆಮಾಡಲೆಂದು ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ
Bagalakote,BJP,K S Eshwarappa,Siddaramaiah