ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ : ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು- ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್.

ಮೈಸೂರು,ಜುಲೈ,26,2022(www.justkannada.in):  ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್.  ಬೇಬಿ ಬೆಟ್ಟದಲ್ಲೇ ಟ್ರಯಲ್ ಮಾಡಬೇಕು ಅಂತೇನೂ ಇಲ್ಲ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಪ್ರಮೋದಾದೇವಿ ಒಡಯರ್,  ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ. ರಾಜ್ಯ ವಿಲೀನ ಸಂದರ್ಭದಲ್ಲಿ  ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನಕ್ಕೆ  ಒಂದಷ್ಟು ಖಾಸಗಿ ಆಸ್ತಿಯನ್ನು ಪಟ್ಟಿ ಮಾಡಿ ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ  ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತ ಪಡಿಸಲಾಗಿದೆ. ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ.

ಬೇಬಿ ಬೆಟ್ಟ ಸುತ್ತಲಿನ  1623ಎಕರೆ ನಮ್ಮ ಖಾಸಗಿ ಆಸ್ತಿ. ಅಧಿಕಾರಿಗಳು ಅದನ್ನ ಬಿ ಕರಾಬು ಎಂದು ಘೋಷಿಸಿದರು. ಅದರ ಪರಿಣಾಮವಾಗಿ ಗಣಿಗಾರಿಕೆ ಚಟುವಟಿಕೆ ಪ್ರಾರಂಭವಾಯಿತು.ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲಾ ಗೊತ್ತಿದ್ದು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀವು ವಿಜ್ಞಾನಿಗಳು. ಎಲ್ಲಿ ಬ್ಲಾಸ್ಟ್ ಮಾಡಿದರೆ ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ಒಂದು ವೇಳೆ ಪ್ರಯೋಗ ಮಾಡಲೇಬೇಕು ಎಂದಾದರೆ ಬೇರಾವುದೋ ಸರ್ಕಾರಿ ಜಾಗದಲ್ಲಿ ಮಾಡಿ ಎಂದು ಮಂಡ್ಯ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಬೇಬಿ ಬೆಟ್ಟದಲ್ಲೇ ಟ್ರಯಲ್ ಮಾಡಬೇಕು ಅಂತೇನೂ ಇಲ್ಲ. ವಿಜ್ಞಾನ ಎಲ್ಲ ಕಡೆಗೂ ಒಂದೇ. ಆದ್ದರಿಂದ ಬೇರೆ ಪ್ರದೇಶದಲ್ಲೂ ಟ್ರಯಲ್ ಮಾಡಬಹುದು. ನಾನು ಪರ ಅಥವಾ ವಿರೋಧ ಅಂತ ಮಾತನಾಡುವುದಿಲ್ಲ. ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದು ನಮ್ಮ ವಾದ.  ಮುಂದೆ ಅದನ್ನು ನಮ್ಮ ಹೆಸರಿಗೆ ಖಾತೆ ಮಾಡಿದರೆ ಗಣಿಗಾರಿಕೆ ಮಾಡುವುದಿಲ್ಲ. ಅಲ್ಲಿ ಗಣಿಗಾರಿಕೆ ಮಾಡಲು ಏನೂ ಉಳಿದಿಲ್ಲ. ಪ್ರತಿಭಟನೆ ಜಾಗಕ್ಕೆ ನಾನು ಹೋಗುವುದಿಲ್ಲ. ಇಬ್ಬರ ನಡುವೆ ನಾನು ಮಧ್ಯಕ್ಕೆ ಹೋಗುವುದರಿಂದ ಏನೇನೋ ಆಗಬಹುದು. ಅದ್ಯಾವುದೂ ನನಗೆ ಬೇಕಾಗಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದರು.

Key words: baby hills-trail blast – our permission- Pramodadevi Wodeyar.