ರಾಜ್ಯ ವಿಧಾನಸಭಾ ಚುನಾವಣೆ: ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ ಮಾಜಿ ಸಚಿವ ಡಾ.ಎಚ್‌.ಸಿ ಮಹದೇವಪ್ಪ.

ಮೈಸೂರು,ಏಪ್ರಿಲ್,17,2023(www.justkannada.in):  ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರ ಎನಿಸಿರುವ ತಿ.ನರಸೀಪುರ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಅನ್ಯಪಕ್ಷಗಳ ಮುಖಂಡರು ಕಾಂಗ್ರೆಸ್‌ ಗೆ ಮರಳುತ್ತಿರುವುದು ಕ್ಷೇತ್ರದಲ್ಲಿ ಬದಲಾವಣೆಗೆ ದಾರಿಯಾಗಿದೆ.

ಕಳೆದ ಚುನಾವಣೆಯಲ್ಲಿ ಉಂಟಾದ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿ ಭರ್ಜರಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪುತ್ರನಿಗೆ ತಿ. ನರಸೀಪುರ ಬಿಟ್ಟು ನಂಜನಗೂಡು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸಿದ್ದರು.ಆದರೆ, ಮಾಜಿ ಸಂಸದ ಧ್ರುವ ನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್ ನೀಡಿದ ಹೈಕಮಾಂಡ್,  ನರಸೀಪುರ ಕ್ಷೇತ್ರದಲ್ಲಿ ಮಹದೇವಪ್ಪ ಅವರಿಗೆ ಕಣಕ್ಕಿಳಿಸುವ ತೀರ್ಮಾನ ಮಾಡಿತ್ತು. ಇದರಿಂದಾಗಿ ಈ ಬಾರಿ ಚುನಾವಣೆ ಮಹತ್ವವಾಗಿದ್ದರಿಂದ ಪ್ರಚಾರಕ್ಕೆ ಧುಮುಕಿ ಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದ್ದಾರೆ. ಒಂದು ವಾರದಿಂದ ತಲಕಾಡು, ಸೋಸಲೆ, ಬನ್ನೂರು, ಮೂಗೂರು ಹೋಬಳಿಯಲ್ಲಿ ಪ್ರಚಾರ ಮಾಡುತ್ತಿರುವ ಅವರು ಬೆಳಿಗ್ಗೆ 9ರಿಂದ ರಾತ್ರಿ ತನಕ ಸುಡುಬಿಸಿಲನ್ನು ಲೆಕ್ಕಿಸದೆ ಪ್ರಚಾರ ಮಾಡುತ್ತಿದ್ದಾರೆ. ಮೂಗೂರು ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಸೇರಿ ಪ್ರಚಾರ ಮಾಡುವ ಜತೆಗೆ ಪ್ರಮುಖ ರಸ್ತೆಗಳಲ್ಲಿ ಹೂವಿನ ಸುರಿಮಳೆಗೈದು, ಹೆಗಲಲ್ಲಿ ಹೊತ್ತು ಸಾಗಿದ್ದು ಕಂಡು ಬಂದಿದೆ.

ಅನ್ಯ ಪಕ್ಷಗಳ ಮುಖಂಡರ ಸೇರ್ಪಡೆ..

ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾದ ಬೆನ್ನಲ್ಲೇ ಅನ್ಯ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರುತ್ತಿರುವುದು ಹೆಚ್ಚಾಗಿದೆ. ಮಾಜಿ ಶಾಸಕರಾದ ಸುನೀತಾ ವೀರಪ್ಪಗೌಡ ಸಮ್ಮುಖದಲ್ಲಿ ಬನ್ನೂರು ಹೋಬಳಿಯಲ್ಲಿ ಬಿಜೆಪಿ ಮತ್ತು ಜಾ.ದಳ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ತಲಕಾಡು ಹೋಬಳಿಗಳಲ್ಲಿ ಹಲವಾರು ವರ್ಷಗಳಿಂದ ಜಾ.ದಳದ ಪರವಾಗಿ ಕೆಲಸ ಮಾಡುತ್ತಿದ್ದವರೂ ಈಗ  ಮಹದೇವಪ್ಪ ಕೈ ಹಿಡಿಯುತ್ತಿದ್ದಾರೆ. ಈ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಟಿ.ಎನ್.ಮಂಜುನಾಥನ್ ಕಾಂಗ್ರೆಸ್‌ ನಲ್ಲಿದ್ದರೂ ಆಂತರಿಕವಾಗಿ ಜೆಡಿಎಸ್ ಗೆ ಕೆಲಸ ಮಾಡುತ್ತಿರುವ ಕಾರಣದಿಂದಾಗಿ ಜೆಡಿಎಸ್ ನಲ್ಲಿರುವ ಮುಖಂಡರು ಕಾಂಗ್ರೆಸ್‌ ಗೆ ಜಿಗಿದಿದ್ದಾರೆ. ಮೂಗೂರು ಜಿಪಂ ವಾಜಿ ಸದಸ್ಯರಾದ ಸುಧಾ ಮಹದೇವ್ ಅವರ ಸಮ್ಮುಖದಲ್ಲಿ 50ಕ್ಕೂ ಮುಖಂಡರು ಬಿಜೆಪಿ ತೊರೆದು ಕೈ ಹಿಡಿದಿದ್ದಾರೆ. ಇದೇ ರೀತಿ ಪ್ರಚಾರದ ವೇಳೆ ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಪ್ರಚಾರ:

ತಿ.ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಬಿಜೆಪಿ ಸರ್ಕಾರದಿಂದ ಸಂವಿಧಾನಕ್ಕೆ ಅಪಾಯ, ,ದಲಿತರ ಮೀಸಲಾತಿ ವರ್ಗೀಕರಿಸಿ ಅನ್ಯಾಯ ಮಾಡಿರುವುದು ಸೇರಿದಂತೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪ ಮಾಡುವ ಮೂಲಕ ದಲಿತರು, ಹಿಂದುಳಿದ ವರ್ಗಗಳ ಮತಗಳ ಕ್ರೋಢಿಕರಣ ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಸೇತುವೆಗಳು, ರಸ್ತೆಗಳು, ಬಸ್ ನಿಲ್ದಾಣ, ಶಾಲಾ ಕಾಲೇಜುಗಳ ನಿರ್ಮಾಣ ಸೇರಿ ಅನೇಕ ಯೋಜನೆಗಳನ್ನು ಮತ್ತೊಂದು ಬಾರಿ ಜನರಿಗೆ ಮನವರಿಕೆ ಮಾಡುತ್ತಿರುವುದು ವಿಶೇಷವಾಗಿದೆ.

Key words: Assembly –Elections-Former Minister -Dr. HC Mahadevappa – campaigning