ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ: ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು- ಪ್ರಧಾನಿ ಮೋದಿ.

ಬೀದರ್,ಏಪ್ರಿಲ್,29,2023(www.justkannada.in): ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು. ರಾಜ್ಯದಲ್ಲಿ ಅಭಿವೃದ್ದಿಗೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಬೀದರ್ ನ ಹುಮ್ನಾಬಾದ್ ಚಿನಕೇರಾ ಕ್ರಾಸ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಬೇಕು. ಇದರಿಂದ ಮೂಲಸೌಕರ್ಯ, ವಿದೇಶಿ ಹೂಡಿಕೆ ಉತ್ತಮವಾಗಲಿದೆ. ಕರ್ನಾಟಕಕ್ಕೆ ಯಾಕೆ ಡಬಲ್ ಎಂಜಿನ್ ಸರ್ಕಾರ ಬೇಕೆಂದರೆ ಈ ರಾಜ್ಯ ಕಾಂಗ್ರೆಸ್ ಎಟಿಎಂ ಆಗಬಾರದು. ನನಗೆ ವಿಶ್ವಾಸವಿದೆ. ಮತಗಟ್ಟೆಗೆ ತೆರಳಿ ಕಮಲದ ಚಿಹ್ನೆಗೆ ಮತ ನೀಡಿ. ಈ ಬಾರಿಯ ಮತ ಕರ್ನಾಟಕವನ್ನು ನಂಬರ್ 1 ಮಾಡಲು, ಅಮೃತ ಕಾಲಕ್ಕೆ ಕೊಡುಗೆ ನೀಡಲು ಎಂಬುದು ನೆನಪಿಡಿ. ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಡಬಲ್ ಎಂಜಿನ್ ಸರ್ಕಾರದ ಶಕ್ತಿಯಿಂದ ಕರ್ನಾಟಕವನ್ನು ನಂಬರ್ 1 ಮಾಡುವುದನ್ನು ಯಾರೂ ತಡೆಯಲಾರರು. ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಕ್ಕೆ ಒಂದು ಉದಾಹರಣೆ ನೀಡುತ್ತೇನೆ. ಬಿಜೆಪಿ ಸರ್ಕಾರದಿಂದ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ವಿದೇಶಿ ಹೂಡಿಕೆ ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಕಾಂಗ್ರೆಸ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ವೀರ ಸಾವರ್ಕರ್​​ ಅವರನ್ನೂ ಕಾಂಗ್ರೆಸ್​ ನಾಯಕರು ನಿಂದಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನೂ ನಿಂದಿಸುತ್ತಿದ್ದಾರೆ. ಮಹಾನ್​ ಪುರುಷರನ್ನು ಅವಮಾನಿಸುವುದು ಕಾಂಗ್ರೆಸ್​​ನವರ ಕೆಲಸ. ಅವರು ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ದನನ ಸೇವೆಯಲ್ಲಿ ನಿರತನಾಗಿರುತ್ತೇನೆ. ನಿಮ್ಮ ಆಶೀರ್ವಾದ ಇದ್ದಾಗ ನಾನು ಹಗಲು ರಾತ್ರಿ ಕೆಲಸ ಮಾಡುತ್ತಿರುವೆ. ನಿಮ್ಮ ಆಶೀರ್ವಾದದಿಂದ ಕರ್ನಾಟಕದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಬಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ..

ಮೇ 10ರಂದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ನೀಡಿ. ಕರ್ನಾಟಕದ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ. ಹಗಲಿರುಳು ನಿಮ್ಮೆಲ್ಲರ ಸೇವೆಗೂ ನಾನು ಬದ್ಧನಾಗಿದ್ದೇನೆ. ನಿಮ್ಮ ಆಶೀರ್ವಾದದಿಂದ ಬೈಗುಳಗಳು ಮಣ್ಣಲ್ಲಿ ಮಣ್ಣಾಗುತ್ತೆ. ಎಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳುತ್ತೆ. ನಿಮ್ಮ ಸೇವಕ ಮೋದಿಯಿಂದ ನಿಮಗೆಲ್ಲ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಹೇಳಿದರು.

Key words: assembly Election-Bidar- majority- BJP government –  PM Modi.