‘ಪರೀಕ್ಷೆಗೆ ಮೊದಲೇ ಪರೀಕ್ಷೆ ಹೇಗೆ ಬರೆಯುತ್ತೀರಾ ಅಂದ್ರೆ ಹೇಗೆ? ಅವಕಾಶ ಕೊಟ್ಟು ನೋಡಲಿ-ಬಿಜೆಪಿ ಟೀಕೆಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು.

ಕಲ್ಬುರ್ಗಿ,ಮೇ,3,2023(www.justkannada.in): ಕಾಂಗ್ರೆಸ್​​ ಪ್ರಣಾಳಿಕೆಯಲ್ಲಿ ಜನಪರ ಘೋಷಣೆಗಳ ಕುರಿತು  ಬಿಜೆಪಿ ನಾಯಕರು ಮಾಡಿರುವ ಟೀಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಪರೀಕ್ಷೆಗೆ ಮೊದಲೇ ಪರೀಕ್ಷೆ ಹೇಗೆ ಬರೆಯುತ್ತೀರಾ ಅಂದ್ರೆ ಹೇಗೆ? ಅವಕಾಶ ಕೊಟ್ಟು ನೋಡಿ ಹೇಗೆ ಪ್ರಣಾಳಿಕೆ ಜಾರಿ ಮಾಡ್ತೇವೆ ಅಂತ ಗೊತ್ತಾಗುತ್ತೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿಯ ಕೊಡುಗೆ ಏನು ಇಲ್ಲ. ಆದರೆ ಈಗ ಪ್ರಚಾರಕ್ಕೆ ಬರುತ್ತಿದ್ದಾರೆ. ಕೆಲವರು ಪ್ರಚಾರದಿಂದಲೇ ಎಲ್ಲ ಸಿಗುತ್ತೆ ಅಂದುಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ  ಕುಟುಕಿದರು.

ಬಿಜೆಪಿಯವರು  ಕಾಂಗ್ರೆಸ್ ಪ್ರಣಾಳಿಕೆ ಜಾರಿಮಾಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಬಾರಿ ಕೂಡ ಇದೇ ರೀತಿ ಹೇಳಿದ್ದರು. ಆದ್ರೆ, ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳುತ್ತಾ ಹೋಗ್ತಾರೆ, ಆದ್ರೆ, ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಉಲ್ಲೇಖ ಕುರಿತು ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಪನೆ ನೀಡಿದ್ದಾರೆ. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡಿದ್ರೆ ಅಭಿವೃದ್ಧಿ ಆಗಲ್ಲ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟು ಪ್ರಚಾರ ಮಾಡುತ್ತೆ, ಜಗಳ ಹಚ್ಚಿಯೇ ಓಟ್ ತೆಗದುಕೊಳ್ಳುವುದು ಸರಿಯಲ್ಲ ಎಂದು ಚಾಟಿ ಬೀಸಿದರು.

Key words: Assembly election-AICC-President-Mallikarjuna kharge-BJP