ಆರ್.ಧೃವನಾರಾಯಣ್ ಹೇಳಿಕೆ ಖಂಡಿಸಿ ಪ್ರತಿಭಟನೆಗೆ ಮುಂದಾದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಬಂಧನ.

ಮೈಸೂರು,ಆಗಸ್ಟ್,23,2021(www.justkannada.in):  ಬಿಜೆಪಿ ಮತ್ತು ಆರ್ ಎಸ್ ಎಸ್  ತಾಲೀಬಾನ್ ಸಂಸ್ಕೃತಿಯವರು ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಹೇಳಿಕೆಯನ್ನ ಖಂಡಿಸಿ ಮೈಸೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಯಿತು. ಈ ವೇಳೆ ಕಾಂಗ್ರೆಸ್  ಕಚೇರಿಗೆ ಮುತ್ತಿಗೆ ಹಾಕಲು ಯತ್ನಿದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದರು.

ಮೈಸೂರು ಚಾಮರಾಜಪುರಂ ಬಿಜೆಪಿ ಕಚೇರಿಯಿಂದ ದೇವರಾಜ ಮೊಹಲ್ಲಾದ ಕಾಂಗ್ರೆಸ್ ಕಚೇರಿವರೆಗೂ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು . ಪ್ರತಿಭಟನಾ ಮೆರವಣಿಗೆ ಮೂಲಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಮುಂದಾದರು.

ಈ ನಡುವೆ ಮೆಟ್ರೋಪೋಲ್ ಬಳಿ ಬಂದ ಬಿಜೆಪಿ ಕಾರ್ಯಕರ್ತರನ್ನ ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಬ್ಯಾರಿಕೇಟ್ ತಳ್ಳಿ ಮುನ್ನುಗ್ಗಲು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದು ಈ ವೇಳೆ ಪೊಲೀಸರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿದರು.

ಇನ್ನು ಪ್ರತಿಭಟನೆಯಲ್ಲಿ ಶಾಸಕ ನಾಗೇಂದ್ರ, ಯುವಮೋರ್ಚಾ ಮುಖಂಡ ಧೀರಜ್. ಚಾಮರಾಜನಗರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ಭಾಗಿಯಾಗಿದ್ದರು. ಇನ್ನು ಪ್ರತಿಭಟನಾ ಮೆರವಣಿಗೆ ವೇಳೆ ಮೆರವಣಿಗೆಯಲ್ಲಿ ಕೊರೊ‌ನಾ ನಿಯಮ ಉಲ್ಲಂಘನೆಯಾದ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

Key words: Arrest -more than -50 BJP -activists –protest-mysore