ಪೆಗಾಸಸ್ ಪ್ರಕರಣದ ತನಿಖೆ ನಡೆಸುವಂತೆ ಹಿರಿಯ ಪತ್ರಕರ್ತರಿಂದ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ

ಬೆಂಗಳೂರು, ಜುಲೈ 28, 2021 (www.justkannada.in): ಪತ್ರಿಕೋದ್ಯಮದಲ್ಲಿ ಅಪಾರ ಅನುಭವವುಳ್ಳ ಹಾಗೂ ಹಿರಿಯ ಪತ್ರಕರ್ತರಾದ ಎನ್.ರಾಮ್ ಹಾಗೂ ಶಶಿ ಕುಮಾರ್ ಅವರು, ಪೆಗಾಸಸ್ ಕದ್ದಾಲಿಸುವಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಲಿ ಅಥವಾ ನಿವೃತ್ತ ನ್ಯಾಯವಾದಿಯೊಬ್ಬರಿಂದ ಸ್ವತಂತ್ರ ತನಿಖೆ ನಡೆಸಲು ಸೂಚಿಸುವಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.jk

ಅವರ ಮನವಿಯಲ್ಲಿ ಮಿಲಿಟರಿ-ದರ್ಜೆಯ ಸ್ಪೈವೇರ್ (ಗುಪ್ತಚರ ತನಿಖಾ ತಂತ್ರಾಂಶ) ಬಳಸಿ ಅನೇಕ ಜನರ ಮೇಲೆ ಗುಪ್ತವಾಗಿ ನಿಗಾವಹಿಸುವುದು ಹಲವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಹಾಗೂ ಅದು ದೇಶದ ಪ್ರಜಾಪ್ರಭುತ್ವದ ರಚನೆಯಲ್ಲಿ ನಿರ್ಣಾಯಕ ಸ್ಥಂಭಗಳಂತಿರುವ ಸ್ವತಂತ್ರ ಸಂಸ್ಥೆಗಳನ್ನು ಅಸ್ಥಿರಗೊಳಿಸುವುದು, ಅವುಗಳ ಮೇಲೆ ದಾಳಿ ನಡೆಸುವುದು ಹಾಗೂ ಮೂಗುತೂರಿಸುವಂತಹ ಪ್ರಯತ್ನಗಳಾಗಿವೆ ಎಂದು ತಿಳಿಸಲಾಗಿದೆ. ಪೆಗಾಸಸ್ ಸ್ಪೈವೇರ್ ಅನ್ನು ಹೊಂದಲು ಅಥವಾ ನೇರವಾಗಿ ಅಥವಾ ಪರೋಕ್ಷವಾಗಿ, ಆರೋಪಿಸಿರುವಂತೆ ನಿಗಾವಣೆಗೆ ಬಳಸಲು ಪರವಾನಗಿಯನ್ನು ಪಡೆಯಲಾಗಿದೆಯೇ ಎಂದು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.

ಈ ಮನವಿ ಇನ್ನು ಕೆಲವು ದಿನಗಳಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಈ ರೀತಿ ದೂರವಾಣಿಗಳ ಕಾನೂನುಬಾಹಿರ ಕದ್ದಾಲಿಕೆ, ದೇಶದಲ್ಲಿ ವಾಕ್ ಸ್ವಾತಂತ್ರ್ಯ ಹಾಗೂ ಭಿನ್ನಾಭಿಪ್ರಾಯವನ್ನು ಅಭಿವ್ಯಕ್ತಿಪಡಿಸುವ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವೇ ಎಂದು ಪತ್ತೆ ಹಚ್ಚಲು ತನಿಖೆ ನಡೆಸಲು ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.

ವಿಶ್ವದಾದ್ಯಂತ ಹಲವಾರು ಪ್ರಮುಖ ಸುದ್ದಿ ಸಂಸ್ಥೆಗಳು ನಡೆಸಿದಂತಹ ತಪಾಸಣೆಯಿಂದ, ಪತ್ರಕರ್ತರು, ವಕೀಲರು, ಸರ್ಕಾರಿ ಸಚಿವರು, ಪ್ರತಿಪಕ್ಷಗಳ ರಾಜಕಾರಿಗಳು, ಸಾಂವಿಧಾನಿಕ ಕಾರ್ಯನಿವಾಹಕರು ಹಾಗೂ ನಾಗರಿಕ ಸಮಾಜದ ಕಾರ್ಯಕರ್ತರು ಒಳಗೊಂಡಂತೆ ಒಟ್ಟು 142 ಭಾರತೀಯರ ಮೇಲೆ ಈ ರೀತಿ ಕದ್ದಾಲಿಸುವಿಕೆ ಪ್ರಯತ್ನ ಮಾಡಲಾಗಿರುವುದು ತಿಳಿದು ಬಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ರೀತಿ ಮಿಲಿಟಿರಿ ದರ್ಜೆಯ ಸ್ಪೈವೇರ್ ಅನ್ನು ಬಳಸಿ ಗುರಿ ಮಾಡುವ ನಿಗಾವಣೆ, ಖಾಸಗಿತನದ ಹಕ್ಕಿನ, ಒಪ್ಪಿಕೊಳ್ಳಲಾಗದಿರುವಂತಹ ಉಲ್ಲಂಘನೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Key words:  appeal – Supreme Court – senior journalists – investigate – Pegasus case.