ಲಾಲ್‌ ಬಾಗ್‌ ನಲ್ಲಿ ನಡೆಯುವ ವಾರ್ಷಿಕ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ರದ್ದು.

ಬೆಂಗಳೂರು, ಜನವರಿ 5, 2022 (www.justkannada.in): ಇತ್ತೀಚಿನ ಕೋವಿಡ್ ಸಾಂಕ್ರಾಮಿಕದ ಸ್ಥಿತಿಗತಿಯನ್ನು ಪರಿಗಣಿಸಿ ಹಾಗೂ ದೊಡ್ಡ ಪ್ರಮಾಣದ ಹಣಕಾಸು ನಷ್ಟ ಉಂಟಾಗುವ ಸಂಭವವಿರುವ ಕಾರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಲಾಲ್‌ಬಾಗ್‌ ನಲ್ಲಿ ಆಯೋಜಿಸಲಾಗುವ ಗಣರಾಜ್ಯೋತ್ಸವದ ವಾರ್ಷಿಕ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.

ಸಾರ್ವಜನಿಕರ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದರೆ ಒಂದು ಬಾರಿಗೆ ಕೇವಲ ೩೦೦ ರಿಂದ ೫೦೦ ಮಂದಿಗೆ ಮಾತ್ರ ಪ್ರವೇಶಾತಿ ಕಲ್ಪಿಸಿ ಪ್ರದರ್ಶನವನ್ನು ನಡೆಸಬಹುದು ಎಂಬ ಷರತ್ತನ್ನು ವಿಧಿಸಿ ಬಿಬಿಎಂಪಿಯು ಅನುಮತಿ ನೀಡಿತ್ತು.

ಆದರೆ ಪ್ರತಿ ವರ್ಷ ಈ ಫಲಪುಷ್ಪ ಪ್ರದರ್ಶನಗಳಿಗೆ ಬೃಹತ್ ಸಂಖ್ಯೆಯಲ್ಲಿ ಜನರು ಆಗಮಿಸುವುದನ್ನು ಪರಿಗಣಿಸಿ ಈ ನಿಯಮವನ್ನು ಅನುಸರಿಸುವುದು ಬಹಳ ಕಷ್ಟ ಎಂದು ನಿರ್ಧರಿಸಿದರು. ಅಂತಿಮವಾಗಿ ಒಂದು ವೇಳೆ ಪ್ರದರ್ಶನ ಆಯೋಜಿಸಿ ಜನರು ಆಗಮಿಸುವುದು ಸಾಧ್ಯವಾಗದೇ ಇದ್ದರೆ ದೊಡ್ಡ ಪ್ರಮಾಣದ ಹಣಕಾಸಿನ ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಿ ಆಯೋಜಕರು ಈ ವಾರ್ಷಿಕ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. “ಲಾಲ್‌ಬಾಗ್‌ ನಲ್ಲಿ ನಡೆಯುವ ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಲಾಲ್‌ಬಾಗ್‌ ನ ನಾಲ್ಕೂ ಪ್ರಮುಖ ದ್ವಾರಗಳ ಮೂಲಕ ಬೃಹತ್ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಒಂದು ವೇಳೆ ಬರಿ ೫೦೦ ಜನರಿಗೆ ಅವಕಾಶವನ್ನು ನೀಡಿದರೆ, ಫಲಪುಷ್ಪ ಪ್ರದರ್ಶನವನ್ನು ನೋಡಿ ಆನಂದಿಸಲು ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ತೆಗೆದುಕೊಳ್ಳುತ್ತಾರೆ. ಹಾಗಾಗಿ ಕೇವಲ ಸೀಮಿತ ಸಂಖ್ಯೆಯ ಜನರು ಮಾತ್ರ ಫಲಪುಷ್ಪ ಪ್ರದರ್ಶನವನ್ನು ನೋಡಿ ಆನಂದಿಸಬಹುದು. ಆದರೆ ನಮಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತದೆ,” ಎಂದು ಮೈಸೂರು ಉದ್ಯಾನ ಕಲಾಸಂಘದ ನಿರ್ದೇಶಕ ಎಂ. ಕುಪ್ಪುಸ್ವಾಮಿ ಅವರು ವಿವರಿಸಿದ್ದಾರೆ.

“ಬಹುತೇಕ ಉತ್ಪನ್ನಗಳ ಬೆಲೆಗಳು ಹೆಚ್ಚಳವಾಗಿವೆ. ಅನೇಕ ವರ್ಷಗಳಿಂದ ಈ ಫಲಪುಷ್ಪ ಪ್ರದರ್ಶನದ ಆಯೋಜನೆಗೆ ನಾವು ಬೃಹತ್ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗುತ್ತಿದೆ. ೨೦೧೯ರಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಿಂದ ನಮಗೆ ರೂ.೪೦ ಲಕ್ಷದಷ್ಟು ಆರ್ಥಿಕ ನಷ್ಟವುಂಟಾಗಿತ್ತು. ಅದರಿಂದಲೇ ಇನ್ನೂ ನಾವು ಚೇತರಿಸಿಕೊಂಡಿಲ್ಲ. ಒಂದು ವೇಳೆ ಈ ವರ್ಷ ಆಗಸ್ಟ್ ತಿಂಗಳ ವೇಳೆಗೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದರೆ ಆಗ ವೈಭವವಾಗಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತೇವೆ,” ಎಂದು ಕುಪ್ಪುಸ್ವಾಮಿ ಅವರು ತಿಳಿಸಿದ್ದಾರೆ.

ತೋಟಗಾರಿಕಾ ಇಲಾಖೆಯ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್ ಅವರು ಈ ಬಾರಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ಅಷ್ಟು ಸಮಂಜಸವಲ್ಲ ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯುವ ಮೂಲಕ ತಿಳಿಸಿದ್ದಾರೆ. ಈ ಬಾರಿ ಪ್ರದರ್ಶನ ಆಯೋಜನೆ ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಎಲ್ಲಾ ವ್ಯರ್ಥ

ಈ ಹಿಂದೆ ನಿರ್ಧರಿಸಿದ್ದಂತಹ ಯೋಜನೆಗಳ ಪ್ರಕಾರ ಈ ಬಾರಿಯ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದರೆ ಸ್ಯಾಂಡಲ್‌ ವುಡ್‌ನ ಖ್ಯಾತ ನಟ ದಿವಂಗತ ಪುನೀತ್ ರಾಜ್‌ ಕುಮಾರ್ ಹಾಗೂ ಡಾ. ರಾಜ್‌ ಕುಮಾರ್ ಅವರ ವಿಷಯಾಧರಿತ ಪ್ರದರ್ಶನವನ್ನು ಆಯೋಜಿಸಲು ಯೋಚಿಸಲಾಗಿತ್ತಂತೆ. ಆಯೋಜಕರು ತಿಳಿಸಿರುವಂತೆ ಹೂವುಗಳನ್ನು ಬಳಸಿ ಈ ಇಬ್ಬರು ಖ್ಯಾತ ನಟರ ಪುತ್ಥಳಿಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತಂತೆ. ಈ ಪ್ರದರ್ಶನಕ್ಕೆ ಬೇಕಾದ ಅಲಂಕಾರಿಕ ಸಸ್ಯಗಳನ್ನು ಈಗಾಗಲೇ ಅಲಂಕರಿಸುವ ಮೂಲಕ ಈ ಪ್ರದರ್ಶನಕ್ಕೆ ಲಾಲ್‌ ಬಾಗ್ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಜೊತೆಗೆ ಕಬ್ಬನ್ ಪಾರ್ಕ್, ನಂದಿ ಬೆಟ್ಟ, ಊಟಿ ಹಾಗೂ ಕೆಮ್ಮಣ್ಣಗುಂಡಿಗಳಿಂದ ಲಾಲ್‌ ಬಾಗ್‌ ಗೆ ವಿವಿಧ ಬಗೆಯ ಹೂವುಗಳನ್ನು ತರಿಸಿಕೊಳ್ಳಲು ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ದುರಾದೃಷ್ಟವಶಾತ್, ಈ ಬಾರಿ ಜನವರಿ 26ರಂದು ಈ ಎಲ್ಲಾ ಸಿದ್ಧತೆಗಳನ್ನು ಆಚರಿಸುವುದು ಸಾಧ್ಯವಾಗುತ್ತಿಲ್ಲ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Annual Republic Day-Flower Show -canceled – Lal Bagh