ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂದೆ ಭಾರಿ ಷಡ್ಯಂತ್ರ: ಇದು ಗಣಿ ಹಗರಣಕ್ಕಿಂತ ದೊಡ್ಡದು- ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ…

ಬೆಂಗಳೂರು,ಜು,16,2020(www.justkannada.in): ಭೂ ಸುಧಾರಣೆ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಭಾರಿ ಷಡ್ಯಂತ್ರ ಅಡಗಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡದು. ಇದರಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.jk-logo-justkannada-logo

ತಮ್ಮ ನಿವಾಸದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರದ ಈ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಪಕ್ಷ ಬೃಹತ್ ಹೋರಾಟ ನಡೆಸಲಿದೆ. ಹಳ್ಳಿ ಮಟ್ಟದಿಂದ ಹೋರಾಟವನ್ನು ಸಂಘಟಿಸಲಾಗುವುದು. ಈ ಕುರಿತು ಬೇರೆ ಬೇರೆ ಪಕ್ಷಗಳು ಹಾಗೂ ರೈತ ಸಂಘಟನೆಗಳ ಜೊತೆಗೆ ಚರ್ಚಿಸಲಾಗುವುದು  ಎಂದು ಹೇಳಿದರು.

ಕೊರೊನಾದಂಥ ಸಂಕಷ್ಟದ ಸಮಯವನ್ನು ದುರುಪಯೋಗಪಡಿಸಿಕೊಂಡು ಭೂ ಸುಧಾರಣೆ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು, ತಿದ್ದುಪಡಿ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಹಾಗೂ ಸಾರ್ವಜನಿಕವಾಗಿ ಚರ್ಚೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ  ಹೇಳಿದ್ದಿಷ್ಟು…..

ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಸರ್ಕಾರ ಈ ಸಂದರ್ಭವನ್ನು ಬಳಸಿಕೊಂಡು, ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ದಿನ ರಾಜ್ಯಕ್ಕೆ ಕರಾಳ ದಿನ. ಬಡವರು, ಕೂಲಿ-ಕಾರ್ಮಿಕರು, ಹಿಂದುಳಿದವರು ಹಾಗೂ ರೈತರ ವಿರೋಧಿ ತಿದ್ದುಪಡಿ ಇದಾಗಿದೆ.

ಭೂ ಸುಧಾರಣೆ ಕಾಯಿದೆಯ ಸೆಕ್ಷನ್ 63, ಸೆಕ್ಷನ್ 79ಎ, ಸೆಕ್ಷನ್ 79 ಬಿ, ಸೆಕ್ಷನ್ 79 ಸಿ, ಸೆಕ್ಷನ್ 80, ಇವುಗಳನ್ನು ಸೇರಿಸಿ ದೇವರಾಜ ಅರಸು ಅವರು ಪ್ರಗತಿಪರ, ಕ್ರಾಂತಿಕಾರಕ ಹಾಗೂ ಸಾಮಾಜಿಕ ನ್ಯಾಯದಿಂದ ಕೂಡಿದ ಮತ್ತು ಗೇಣಿದಾರರಾಗಿ ಉಳುಮೆ ಮಾಡುತ್ತಿದ್ದವರಿಗೆ ನ್ಯಾಯ ಒದಗಿಸುವ ತಿದ್ದುಪಡಿಯನ್ನು 1.3.1974ರಲ್ಲಿ ಜಾರಿಗೆ ತಂದಿದ್ದರು. ಅದು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 24 ಲಕ್ಷ ರೈತರಿಗೆ ಅನುಕೂಲವಾದ ಹಾಗೂ ಗೇಣಿ ಮಾಡುತ್ತಿದ್ದ ಜಮೀನುಗಳಿಗೆ ರೈತರು ಮಾಲೀಕರಾದ ದಿನ ಆದಾಗಿತ್ತು.

ಅರಸು ಅವರು ಜಾರಿಗೆ ತಂದ ಕಾಯಿದೆ ಪ್ರಕಾರ, ಕೈಗಾರಿಕೋದ್ಯಮಿಗಳು, ಬಂಡವಾಳಶಾಹಿಗಳು, ಶ್ರೀಮಂತರು ಕೃಷಿ ಭೂಮಿ ಖರೀದಿ ಮಾಡುವಂತಿರಲಿಲ್ಲ. ಕೃಷಿ ಜಮೀನು ಖರೀದಿಸುವ ಸಂದರ್ಭದಲ್ಲಿ ಅವರು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿದ್ದರೆ ಶಿಕ್ಷೆಗೆ ಗುರಿ ಮಾಡಲು ಅವಕಾಶ ಇತ್ತು. ಕೃಷಿಕರಲ್ಲದವರು ಜಮೀನು ಖರೀದಿ ಮಾಡಬಾರು ಎಂದು ನಿಯಮ ಇದಾಗಿತ್ತು. ಒಬ್ಬ ವ್ಯಕ್ತಿ ಇಷ್ಟೇ ಪ್ರಮಾಣದ ಕೃಷಿ ಭೂಮಿ ಹೊಂದಿರಬೇಕು ಎಂಬುದನ್ನು ನಿಯಮದಲ್ಲಿ ಹೇಳಲಾಗಿತ್ತು.

40-45 ಸಾವಿರ ಕೋಟಿ ಮೌಲ್ಯ :

ಆದರೆ, ಈಗ ಈ ಎಲ್ಲ ಸೆಕ್ಷನ್‍ಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡಲಾಗಿದೆ. ಸೆಕ್ಷನ್ 63ಕ್ಕೆ  ತಿದ್ದುಪಡಿ ತರಲಾಗಿದೆ. ಜೊತೆಗೆ ಭೂಮಿ ಸಂಬಂಧ ಕೋರ್ಟ್‍ಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ವಿವಿಧ ಜಿಲ್ಲೆಗಳಲ್ಲಿ ಒಟ್ಟು 13 ಸಾವಿರ ಕೇಸುಗಳಿಗೆ ತಿಲಾಂಜಲಿ ಇಡಲಾಗಿದೆ. 40-45 ಸಾವಿರ ಕೋಟಿ ರೂ.ಮೌಲ್ಯದ ಜಮೀನುಗಳಿಗೆ ಸಂಬಂಧಿಸಿದ ಕೇಸುಗಳು ವಜಾ ಆಗಿದೆ.

ಬೆಂಗಳೂರು ನಗರದ ಸುತ್ತಮುತ್ತ ಮಧ್ಯವರ್ತಿಗಳ ಮೂಲಕ ಗೃಹ ನಿರ್ಮಾಣ ಸಹಕಾರ ಸಂಘಗಳು ಭೂಮಿ ಖರೀದಿಸಿವೆ. ಇದರ ಮೌಲ್ಯ ಹತ್ತು ಸಾವಿರ ಕೋಟಿಗೂ ಹೆಚ್ಚು. ಸರ್ಕಾರವೇ ನಡೆಸಿರುವ ಆಡಿಟ್‍ನಲ್ಲಿ ಈ ವಿಷಯ ಬಹಿರಂಗವಾಗಿದೆ.

ಸರ್ಕಾರ ತಿದ್ದುಪಡಿ ತಂದಿರುವುದರ ಹಿಂದೆ ಷಡ್ಯಂತ್ರ ಇದೆ. ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದರು, ಬಂಡವಾಳ ಹೂಡಿಕೆ ಆಗುತ್ತಿರಲಿಲ್ಲ, ಯಾರು ಬೇಕಾದರೂ ಜಮೀನು ಖರೀದಿಸಿ ಕೃಷಿ ಮಾಡಬಹುದು ಎಂಬ ಕಾರಣಗಳನ್ನು ನೀಡಿ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ. ನಮ್ಮ ಸರ್ಕಾರ ಇದ್ದಾಗ ಬಂಡವಾಳ ಬಂದಿರಲಿಲ್ಲವೇ ? ಹೂಡಿಕೆಯಲ್ಲಿ ಕರ್ನಾಟಕ ನಂಬರ್ ಒಂದು ಅಥವಾ ಎರಡನೇ ಸ್ಥಾನದಲ್ಲಿ ಇರಲಿಲ್ಲವೇ ? ಬೇರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲವೇ ? ಹಾಗಾದರೆ ಭ್ರಷ್ಟಾಚಾರ ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ ? ಇದು ಕುಂಟು ನೆಪವಷ್ಟೆ.

436 ಎಕರೆಗೆ ಏರಿಕೆ :

ಕೇರಳದಲ್ಲಿ ಒಂದು ಕುಟುಂಬ 20, ತಮಿಳುನಾಡು, 30 ಆಂಧ್ರದಲ್ಲಿ 54 ಎಕರೆ ಭೂಮಿ ಹೊಂದಲು  ಆದರೆ ಇಲ್ಲಿ ಒಂದು ಕುಟುಂಬ 432 ಎಕರೆ ಹೊಂದಲು ಅವಕಾಶ ಮಾಡಿಕೊಡಲಾಗಿದೆ. 432 ಎಕರೆ ಖರೀದಿ ಮಾಡುವವರು ಯಾರು ? ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ಉದ್ಯಮ ಮಾಡವವರು, ಕಾರ್ಪೊರೇಟ್ ಕಂಪನಿಗಳವರು ಮಾತ್ರ.amendment-land-reform-act-bigger-mine-scam-former-cm-siddaramaiah

ಸೆಕ್ಷನ್ 63(2ಎ) ಪ್ರಕಾರ 20 ಯೂನಿಟ್ ವರೆಗೆ ಭೂಮಿ ಖರೀದಿಸುವ ಅವಕಾಶ ಇತ್ತು. ಈಗ 80 ಯೂನಿಟ್‍ಗೆ ಭೂಮಿ ಖರೀದಿ ಪ್ರಮಾಣಹೆಚ್ಚಿಸಲಾಗಿದೆ. ತರಿ, ಖುಷ್ಕಿ, ಬಾಗಾಯ್ತು ಜಮೀನುಗಳನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. 87 ಲಕ್ಷ ರೈತ ಕುಟುಂಬಗಳು ರಾಜ್ಯದಲ್ಲಿವೆ. ಸರಾಸರಿ 3 ಎಕರೆ ಜಮೀನನ್ನು ಒಂದು ಕುಟುಂಬ ಹೊಂದಿರಬಹುದು. ನಾಲ್ಕು ಕೋಟಿ ರೈತರು ಇಲ್ಲಿ  ಬೇಸಾಯ ನಡೆಸುತ್ತಿದ್ದಾರೆ.

ಇದೀಗ ಇಡೀ ರೈತ ಸಮುದಾಯವನ್ನು ಸರ್ಕಾರ ನಾಶ ಮಾಡಲು ಹೊರಟಿದೆ. ರೈತರು ಬೀದಿ ಪಾಲಾಗುವುದರ ಜೊತೆಗೆ ಕಾರ್ಪೊರೇಟ್ ಕಂಪನಿಗಳ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಆಹಾರದ ಸ್ವಾವಲಂಬನೆ ಇದರಿಂದ ನಾಶವಾಗುತ್ತದೆ.

ಒಬ್ಬರಿಗೆ ಒಂದು ವೃತ್ತಿ ಎಂಬ ದೃಷ್ಟಿಕೋನದಲ್ಲಿ ಈ ಕಾಯಿದೆಯನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಈಗ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡುವುದಾದರೆ ಭೂ ಸುಧಾರಣೆ ಕಾಯಿದೆಯ ಮೂಲ ಉದ್ದೇಶವೇ ನಾಶವಾಗುತ್ತದೆ. ಗೇಣಿದಾರರಿಗೆ, ಬಡವರಿಗೆ ಸಿಗುತ್ತಿದ್ದ ರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ತೆಗೆದು ಹಾಕಿದೆ. ಖರೀದಿ ಮಾಡಿದ ಭೂಮಿಯನ್ನು ಕೃಷಿ ಉದ್ದೇಶಕ್ಕೇ ಬಳಸಬೇಕೆಂಬ ನಿಯಮವೇನಿಲ್ಲ. ಹೀಗಾಗಿ ರಿಯಲ್ ಎಸ್ಟೇಟ್ ಉದ್ಯಮ ಆ ಜಮೀನುಗಳಲ್ಲಿ ತಲೆ ಎತ್ತುತ್ತದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಮರ್ಜಿಗೆ ಒಳಗಾಗಿ ಸರ್ಕಾರ ತಿದ್ದುಪಡಿ ತಂದಿದೆ.

ಕೇಂದ್ರ ಸರ್ಕಾರದ ಕುಮ್ಮಕ್ಕು :

ಸರ್ಕಾರದ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಕುಮ್ಮಕ್ಕು ಇದೆ. ಮೋದಿಯವರ ಸರ್ಕಾರಕ್ಕೆ ಬಡವರು, ರೈತರು, ಕೂಲಿ ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹೀಗಾಗಿಯೇ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮೀಸಲು ಸೌಲಭ್ಯ ಒದಗಿಸಬೇಕು. ಖಾಸಗಿಯವರ ವಶಕ್ಕೆ ಕೈಗಾರಿಕೆಗಳನ್ನು ಕೊಟ್ಟರೆ ಮೀಸಲು ಸೌಲಭ್ಯವೇ ಇರುವಂತಿಲ್ಲ. ನೇರವಾಗಿ ಮೀಸಲು ಪದ್ಧತಿ ತೆಗೆದರೆ ಜನ ದಂಗೆ ಏಳುತ್ತಾರೆ ಎಂಬ ಕಾರಣಕ್ಕೆ ಹಿಂಬಾಗಿಲ ಮೂಲಕ ಕೈಗಾರಿಕೆಗಳನ್ನು ಮಾರಲು ಕೇಂದ್ರ ಮುಂದಾಗಿದೆ.

ಜಮೀನ್ದಾರಿ ಹಾಗೂ ಜಹಗೀರು ಪದ್ಧತಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಕೃಷಿ ನಾಶವಾಗುವುದರ ಜೊತೆಗೆ ರೈತರು ನಿರ್ಗತಿಕರಾಗುವುದರ ಜೊತೆಗೆ  ಆಹಾರದ ಸ್ವಾವಲಂಬನೆ ಸಂಪೂರ್ಣವಾಗಿ ಹೋಗುತ್ತದೆ.

ಸರ್ಕಾರಕ್ಕೆ ಸದುದ್ದೇಶ ಇದ್ದಿದ್ದರೆ ವಿಧಾನ ಮಂಡಲ ಅಧಿವೇಶನ ಕರೆದು ವಿವರಣೆ ನೀಡಬಹುದಿತ್ತು. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಯಿದೆಗೆ ತುರ್ತಾಗಿ ತಿದ್ದುಪಡಿ ತರುವ ಅಗತ್ಯವಾದರೂ ಏನಿತ್ತು. ಪ್ರಾಮಾಣಿಕರಾಗಿದ್ದರೆ ಅಧಿವೇಶನ ಕರೆದು ಚರ್ಚಿಸಬಹುದಿತ್ತು. ಲಾಕ್‍ಡೌನ್ ಇರುವುದರಿಂದ ರೈತ ಸಂಘಟನೆಗಳು ಪ್ರತಿಭಟನೆ ಮುಂದಾಗುವುದಿಲ್ಲ ಎಂದು ಭಾವಿಸಿ ಕಳ್ಳದಾರಿಯಲ್ಲಿ ತಿದ್ದುಪಡಿ ತರಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭೂ ಸುಧಾರಣೆ ವಿಷಯ ಇತ್ತು. ಭೂಮಿ ರಾಷ್ಟ್ರೀಕರಣವಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದರು. ವಿನೋಬಾ ಭಾವೆಯವರು ಭೂದಾನ ಚಳವಳಿ ನಡೆಸಿದ್ದರು.

ಆದರೆ, ರಾಜ್ಯ ಸರ್ಕಾರ ಶ್ರೀಮಂತರ ಕೈಗೇ ಭೂಮಿ ಕೊಡಲು ಹೊರಟಿದೆ. ಕಾರ್ಪೊರೇಟ್ ಕಂಪನಿಗಳು ಏಜೆಂಟ್, ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Key words: Amendment – Land Reform- Act.-bigger – mine scam-Former CM- Siddaramaiah