ಎಲ್ಲವನ್ನೂ ಕಾಂಗ್ರೆಸ್ ನಾಯಕರಿಂದ ಕೇಳಿ ಮಾಡೋಕೆ ಆಗಲ್ಲ: ಸಚಿವ ಈಶ್ವರಪ್ಪ

ಮೈಸೂರು, ಮೇ 21, 2020 (www.justkannada.in): ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಮಂಡಳಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರನ್ನು ಕೇಳಿಕೊಂಡೆ ಎಲ್ಲವನ್ನೂ ಮಾಡಬೇಕಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಮಂಡಳಿ ನೇಮಕ ಮಾಡೋದು ಸರ್ಕಾರದ ನಿರ್ಧಾರವಲ್ಲ. ಈ ಸಂಬಂಧ ರಚಿಸಿದ್ದ ತಜ್ಞರ ಸಮಿತಿ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ನಾವು ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮೊಟಕು ಮಾಡುತ್ತಿಲ್ಲ. ಸದಸ್ಯರು ಯಾವತ್ತು ಅಧಿಕಾರಿ ಸ್ವೀಕರಿಸಿದ್ದಾರೋ ಅಲ್ಲಿಯವರೆಗೂ ಸದಸ್ಯರಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.

ಅವಧಿ ಮುಗಿದ ಬಳಿಕ ಆಡಳಿತ ಮಂಡಳಿ ರಚನೆಯಾಗುತ್ತೆ. ಆಡಳಿತ ಮಂಡಳಿಯಲ್ಲೂ ಬಿಜೆಪಿಯವರನ್ನು ತುಂಬ್ತಾರೆ ಅನ್ನೋದು ಸುಳ್ಳು. ಶಿವಮೊಗ್ಗ ನಗರ ಪಾಲಿಕೆಯಲ್ಲಿ ಬಿಜೆಪಿ ಬಹುಮತವಿದ್ದರೂ ಅಧಿಕಾರ ಬಳಸಿ ಮೇಯರ್ ಸ್ಥಾನವನ್ನ ಕಾಂಗ್ರೆಸ್ ಪಡೆದಿದೆ. ಇಂತವರು ನಮಗೆ ಇಂದು ಪಾಠ ಹೇಳೋಕೆ ಬರ್ತಾರೆ ಎಂದು ಕಾಂಗ್ರೆಸ್ ವಿರುದ್ದ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.