ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಕೈಗೊಂಡ ನಿರ್ಧಾರಕ್ಕೆ ಸ್ಥಳೀಯರಿಂದ ಮೆಚ್ಚುಗೆ: ಕಾಶ್ಮೀರದ ರಸ್ತೆ ಬದಿಯಲ್ಲಿ ಸ್ಥಳೀಯ ನಿವಾಸಿಗಳ ಜತೆ ತಿಂಡಿ ಸವಿದ ಅಜಿತ್ ಧೋವೆಲ್

ನವದೆಹಲಿ:ಆ-8:(www.justkannada.in) ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಹಾಗೂ 30A ವಿಧಿ ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ನಿರ್ಧಾರದಿಂದ ಒಳ್ಳೆಯದಾಗಿದೆ. ಕೇಂದ್ರದ ದಿಟ್ಟ ನಡೆಯಿಂದ ನಾವಿಂದು ನಿರ್ಭಯವಾಗಿ ಬದುಕಬಹುದಾಗಿದೆ ಎಂದು ಕಣಿವೆ ರಾಜ್ಯ ಕಾಶ್ಮೀರದ ಜನತೆ ತಮ್ಮೊಂದಿಗೆ ಸಂತಸ ಹಂಚಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ತಿಳಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಕೈಗೊಂಡ ನಿರ್ಧಾರದ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದ ದೋವೆಲ್, ಸೇನೆ, ಗುಪ್ತಚರ ದಳ ಹಾಗೂ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಭದ್ರತಾ ಪರಿಶೀಲನೆ ನಡೆಸಿದರು. ಇದೇ ವೇಳೆ ಉಗ್ರ ಪೀಡಿತ ಶೋಪಿಯಾನ್‌ ಜಿಲ್ಲೆಯಲ್ಲಿ ಸ್ಥಳೀಯ ನಿವಾಸಿಗಳ ಜತೆ ರಸ್ತೆ ಬದಿಯಲ್ಲೇ ತಿಂಡಿ ತಿನ್ನುತ್ತಾ ಮಾತುಕತೆ ನಡೆಸಿದರು.

ನಿಷೇಧಾಜ್ಞೆ ಮುಂದುವರಿದಿರುವುದರಿಂದ ಅಂಗಡಿ ಬಾಗಿಲುಗಳು ಮುಚ್ಚಿದ್ದವು. ಇಂಟರ್‌ನೆಟ್‌ ಕಡಿತಗೊಂಡಿತ್ತು. ಬಿಕೋ ಎನ್ನುತ್ತಿದ್ದ ರಸ್ತೆಗಳ ಮಧ್ಯೆಯೇ ಧೋವಲ್‌ ಒಂದಷ್ಟು ಸ್ಥಳೀಯರ ಜತೆ ಮಾತನಾಡುತ್ತಾ, ”ನೀವಿನ್ನು ಕಣಿವೆ ರಾಜ್ಯದಲ್ಲಿ ನಿರ್ಭಯವಾಗಿ ಬದುಕಬಹುದು. ಉಗ್ರರ ಅಟ್ಟಹಾಸ ಇನ್ನು ನಡೆಯದು. ನಿಮ್ಮ ಹಾಗೂ ನಿಮ್ಮ ಮಕ್ಕಳ ಸುರಕ್ಷತೆಯ ಹೊಣೆ ಸರಕಾರದ್ದು. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿ. ವಿಶ್ವ ಭೂಪಟದಲ್ಲಿ ಕಾಶ್ಮೀರಿಗಳೂ ದೊಡ್ಡ ಹೆಸರು ಮಾಡಲಿ,” ಎಂದು ಹೇಳುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿದರು.

ಇದೇ ವೇಳೆ ಕೇಂದ್ರ ಸರ್ಕಾರದ ನಡೆ ಹೇಗೆನ್ನೆಸುತ್ತದೆ ಎಂದು ಧೋವಲ್‌ ಪ್ರಶ್ನಿಸಿದಾಗ ಸ್ಥಳೀಯರು, ಬಂದೂಕಿನ ಸದ್ದು ನೋಡಿ ನಮಗೆ ಸಾಕಾಗಿದೆ. ಬಡತನದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನೂ ನೋಡಿದರೆ 370ನೇ ವಿಧಿ ರದ್ದಾಗಿದ್ದು, ಜಮ್ಮು-ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ್ದು ಒಳ್ಳೆಯದೇ ಆಯಿತು. ಈ ನಿರ್ಧಾರದಿಂದ ಕಣಿವೆಯಲ್ಲಿ ಅಭಿವೃದ್ಧಿ ಕಾರ್ಯಗಳು ಗರಿಗೆದರಲಿವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದ್ದು, ನಮ್ಮ ಕೈಗಳಿಗೂ ಒಂದಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜನರು ನಿರಾತಂಕವಾಗಿದ್ದಾರೆ ಎಂದು ಅಜಿತ್ ಧೋವೆಲ್ ಹೇಳಿದ್ದಾಗಿ ತಿಳಿದುಬಂದಿದೆ.

ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಕೈಗೊಂಡ ನಿರ್ಧಾರಕ್ಕೆ ಸ್ಥಳೀಯರಿಂದ ಮೆಚ್ಚುಗೆ: ಕಾಶ್ಮೀರದ ರಸ್ತೆ ಬದಿಯಲ್ಲಿ ಸ್ಥಳೀಯ ನಿವಾಸಿಗಳ ಜತೆ ತಿಂಡಿ ಸವಿದ ಅಜಿತ್ ಧೋವೆಲ್

Ajit Doval’s Street Chat With Kashmiris Amid Lockdown