ಆಸ್ತಿ ಮಾರಾಟಕ್ಕೆ ಮುಂದಾದ ಏರ್ ಇಂಡಿಯಾ

ಮಂಗಳೂರು:ಆ-6: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಸಾಲದ ಸುಳಿಯಿಂದ ಹೊರಬರಲು ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಬೆಂಗಳೂರು, ಮಂಗಳೂರು ಸೇರಿ ದೇಶದ 22 ಕಡೆಗಳಲ್ಲಿ ಸಂಸ್ಥೆಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಧನ ಸಂಗ್ರಹಣೆ ಮಾಡುವುದು ಸಂಸ್ಥೆಯ ಉದ್ದೇಶ. ಇದು ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆಯುವ ನೀತಿಯ ಭಾಗವಾಗಿದೆ. ಮಂಗಳೂರಿನ ಲಾಲ್​ಬಾಗ್​ನಲ್ಲಿರುವ ಕಚೇರಿ ಹೊರತುಪಡಿಸಿ, 2 ಫ್ಲಾಟ್​ಗಳನ್ನು ಮಾರಲು ಮುಂದಾಗಿದೆ. ದೇಶದ ಹಲವೆಡೆ ಇಂತಹ ಆಸ್ತಿಗಳಿವೆ. ಅವುಗಳ ಮಾರಾಟದಿಂದ ನಷ್ಟ ಭರ್ತಿ ಮಾಡುವ ಉದ್ದೇಶ ಇರಬಹುದು ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿಯೂ ಏರ್ ಇಂಡಿಯಾ ವಿವಿಧೆಡೆ ಹೊಂದಿದ್ದ 26 ಆಸ್ತಿಗಳ ಮಾರಾಟ ಮೂಲಕ 162 ಕೋಟಿ ರೂ. ಸಂಗ್ರಹಿಸಿತ್ತು. ಆಗ ಪೂನಾ, ಚೆನ್ನೈ, ಲೋನಾವಾಲಾ, ಮುಂಬೈನಂತಹ ನಗರಗಳಲ್ಲಿನ ತನ್ನ ವಾಣಿಜ್ಯ, ವಾಸ್ತವ್ಯದ 85ರಷ್ಟು ಆಸ್ತಿಗಳ ಮಾರಾಟ ಸಂಬಂಧ ಏರ್​ಇಂಡಿಯಾ ಜಾಹೀರಾತನ್ನೂ ನೀಡಿತ್ತು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಏರ್ ಇಂಡಿಯಾದಲ್ಲಿನ ಬಂಡವಾಳ ಹಿಂತೆಗೆತ ಕುರಿತ ಸಚಿವರ ಸಮಿತಿ, ಏರ್ ಇಂಡಿಯಾದ ಅಧೀನ ಸಂಸ್ಥೆಯಾದ ಏರ್ ಇಂಡಿಯಾ ಏರ್​ಟ್ರಾನ್ಸ್​ಪೋರ್ಟ್ ಲಿಮಿಟೆಡ್​ಅನ್ನು ಮಾರಾಟ ಮಾಡಲು ತೀರ್ಮಾನ ಕೈಗೊಂಡಿತ್ತು. ಒಟ್ಟಾರೆ 2012ರಲ್ಲೇ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಏರ್ ಇಂಡಿಯಾದ ವಿತ್ತೀಯ ಮರುರಚನೆ, ಅದಕ್ಕಾಗಿ ಮುಂದಿನ 10 ವರ್ಷಗಳಲ್ಲಿ ಸಂಸ್ಥೆಯ 5000 ಕೋಟಿ ರೂ. ಮೌಲ್ಯದ ಆಸ್ತಿಗಳ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಅದರ ಭಾಗವಾಗಿ ವರ್ಷಕ್ಕೆ 500 ಕೋಟಿ ರೂ.ಗಳ ಗುರಿ ನಿಗದಿಪಡಿಸಲಾಗಿತ್ತು. ಇದುವರೆಗೆ ನಿಗದಿತ ಗುರಿ ತಲಪಿಲ್ಲ, ಇದುವರೆಗೆ 500 ಕೋಟಿ ರೂ.ಮೌಲ್ಯದ ಆಸ್ತಿಗಳ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ 55 ಸಾವಿರ ಕೋಟಿ ರೂ.ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಮೇಲೆತ್ತಲು ಕಳೆದ ವರ್ಷ ಅದರ 29,464 ಕೋಟಿ ರೂ. ಮೊತ್ತವನ್ನು ವಿಶೇಷ ಉದ್ದೇಶ ವಾಹಿನಿಯೊಂದಕ್ಕೆ ವರ್ಗಾಯಿಸಿದ್ದು ತುಸು ಚೈತನ್ಯ ನೀಡಿದೆ.

ವಾಸ್ತವ್ಯ, ವಾಣಿಜ್ಯ ಆಸ್ತಿ

ಈ ಬಾರಿ ಮುಂಬೈನ ವಿವಿಧೆಡೆ ಇರುವ 6 ಆಸ್ತಿ, ಬೆಂಗಳೂರು- ಮಂಗಳೂರಲ್ಲಿ ತಲಾ 2, ಪೂನಾ, ನಾಶಿಕ್, ತಿರುವನಂತಪುರಂ, ಕೊಲ್ಕತ್ತಾ, ಹೈದರಾಬಾದ್, ದೆಹಲಿ ಸಹಿತ ಒಟ್ಟು 22 ಕಡೆಯಲ್ಲಿನ 2-3 ಬಿಎಚ್​ಕೆ ವಾಸ್ತವ್ಯದ ಫ್ಲಾಟ್​ಗಳು, ವಾಸ್ತವ್ಯದ ಭೂಮಿ, ಕಚೇರಿ ಜಾಗ, ಹಾಲಿಡೇ ಹೋಂ ಇತ್ಯಾದಿಗಳ ಮಾರಾಟಕ್ಕಾಗಿ ಇ-ಆಕ್ಷನ್​ನ ನೋಟಿಸ್ ಪ್ರಕಟಿಸಿದೆ.
ಕೃಪೆ: ವಿಜಯವಾಣಿ

ಆಸ್ತಿ ಮಾರಾಟಕ್ಕೆ ಮುಂದಾದ ಏರ್ ಇಂಡಿಯಾ
air-india-selling-his-assets