ಕಾಂಗ್ರೆಸ್ ನಂತರ ಬಿಜೆಪಿಗೂ ಜನತಾ ಪರಿವಾರ ಕಸಿವಿಸಿ

kannada t-shirts

ಬೆಂಗಳೂರು:ಆ-30: ಕಾಂಗ್ರೆಸ್ ಅನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ‘ವಲಸಿಗರು ವರ್ಸಸ್ ಮೂಲನಿವಾಸಿಗರು’ ಸಮಸ್ಯೆ ಈಗ ಬಿಜೆಪಿಯಲ್ಲೂ ಶುರುವಾಗಿದೆ. ವಿಶೇಷವೆಂದರೆ, ಜನತಾ ಪರಿವಾರದಿಂದ ಗುಂಪುಗಟ್ಟಿ ಬಂದವರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬ ಕಾಂಗ್ರೆಸ್​ನೊಳಗಿನ ಅಪಸ್ವರ ಅದೇ ಮಾದರಿಯಲ್ಲೇ ಬಿಜೆಪಿಯಲ್ಲೂ ಅನುರಣನವಾಗಿದೆ. ಜನತಾ ಪರಿವಾರದಿಂದ ಬಂದವರಿಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ, ನಾವೇ ಜ್ಯೂನಿಯರ್ ಎನಿಸಿಕೊಂಡಿದ್ದೇವೆಂದು ಪ್ರಮುಖ ನಾಯಕರು ಬಹಿರಂಗವಾಗಿ ಮಾತನಾಡುವ ಸ್ಥಿತಿ ತಲುಪಿದೆ.

ಖಾತೆ ಹಂಚಿಕೆ ಬಳಿಕ ಖಾತೆಯನ್ನು ತೂಗಿ ನೋಡುತ್ತಿರುವ ಸಚಿವರಿಗೆ ಒಳಗೊಳಗೆ ಸಂಕಟ ಶುರುವಾಗಿದೆ. ‘ಈ ಜನತಾ ಪರಿವಾರದವರನ್ನು ಹೇಗೆ ಸಹಿಸಿಕೊಳ್ಳುವುದು’ ಎಂದು ಮಾಜಿ ಡಿಸಿಎಂ ಒಬ್ಬರು ಮುಖ್ಯಮಂತ್ರಿ ಕಚೇರಿಯಲ್ಲಿ ಗಟ್ಟಿದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಸಿಎಂ ಕಿವಿಗೂ ತಲುಪಿದೆ.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಮತ್ತು ಅವರ ಬಣದ ಶಾಸಕರ ‘ಉಸಾಬರಿ’ ಬಗ್ಗೆ ಆಗಿಂದಾಗೆ ಅಸಮಾಧಾನ ಏಳುತ್ತಿರುತ್ತದೆ. ಅದೇ ಮಾದರಿಯಲ್ಲೀಗ ಬಿಜೆಪಿಯಲ್ಲಿ ಮೊದಲ ಬಾರಿಗೆ ಸಿಟ್ಟು ಹೊರಬಂದಿದೆ. ಈ ಸರ್ಕಾರದಲ್ಲಿ ಜನತಾಪರಿವಾರದಿಂದ ಬಂದವರಿಗೆ ಆದ್ಯತೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದು, ಇದನ್ನು ನಾವು ಇಷ್ಟಕ್ಕೆ ಬಿಡುವುದಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ವಿಜಯವಾಣಿಗೆ ತಿಳಿಸಿದರು.

ಪಕ್ಷಕ್ಕೆ ನೆಲೆಯೇ ಇಲ್ಲದಿದ್ದಾಗ ಹಳ್ಳಿ ಹಳ್ಳಿ ತಿರುಗಿ ಪಕ್ಷ ಕಟ್ಟಿದವರ ಕಡೆಗಣನೆಯಾಗಬಾರದು. ಒಂದೊಮ್ಮೆ ಇತ್ತೀಚೆಗೆ ಪಕ್ಷ ಸೇರಿದವರಿಗೆ ಅವಕಾಶ ಕೊಡಲೇ ಬೇಕೆಂದಿದ್ದರೆ ಸಮಾನ ಅವಕಾಶ ನೀಡಲಿ. ಅದನ್ನು ಹೊರತುಪಡಿಸಿ ಹೊರಗಿನವರನ್ನೇ ತುಂಬಿಕೊಂಡರೆ ಪಕ್ಷಕ್ಕೆ ದುಡಿಯುತ್ತಿರುವವರು ದುಡಿಯುತ್ತಲೇ ಇರಬೇಕೆ? ಎಂದು ಶಾಸಕರಾದ ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರನ್ನು ಉದಾಹರಣೆಯಾಗಿ ನೀಡುತ್ತಾರವರು.

ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ವಿ.ಸೋಮಣ್ಣ ಪ್ರಮುಖ ಖಾತೆಗಳನ್ನು ಪಡೆದುಕೊಂಡರು. ಇವರೊಟ್ಟಿಗೆ ಮುಂದೆ ಉಮೇಶ್ ಕತ್ತಿ, ಜಾರಕಿಹೊಳಿ ಮತ್ತಿತರರು ಅವಕಾಶ ಪಡೆಯುವ ಸಾಲಿನಲ್ಲಿದ್ದಾರೆ. ಜನತಾ ಪರಿವಾರದ ಈ ನಾಯಕರಿಂದ ಪಕ್ಷ ಕಟ್ಟಿ ಬೆಳೆಸಿದವರಿಗೆ ಅವಕಾಶ ತಪ್ಪುತ್ತಿದೆ ಎಂಬಂಶ ಬಿಜೆಪಿ ಮೂಲನಿವಾಸಿಗಳ ಮನಸಲ್ಲಿ ನೆಲೆಯೂರಲು ಆರಂಭವಾಗಿದೆ.

ಮುಂದೇನು?

ಪಕ್ಷದಲ್ಲಿ ಹಿರಿಯರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಜಗದೀಶ್ ಶೆಟ್ಟರ್, ಸುರೇಶ್​ಕುಮಾರ್, ಸಿ.ಟಿ.ರವಿಗೆ ನೀಡಿದ ಖಾತೆಗಳಿಗೆ ಹೋಲಿಸಿದರೆ ಜನತಾಪರಿವಾರದಿಂದ ಬಂದವರ ಖಾತೆಗಳ ತೂಕವೇ ಹೆಚ್ಚು. ಪಕ್ಷದ ವೇದಿಕೆಯಲ್ಲಿ ಈ ಸಂಗತಿಯನ್ನು ಪ್ರಮುಖವಾಗಿ ರ್ಚಚಿಸಲು ಮೂವರು ಪಕ್ಷ ನಿಷ್ಠ ಶಾಸಕರು ಸಿದ್ಧರಾಗಿದ್ದಾರೆ. ಈಗ ಆಗಿದ್ದು ಆಗಿ ಹೋಗಿದೆ ಎಂದು ಸುಮ್ಮನಿರುವ ಬದಲು ಈಗಲಾದರೂ ದನಿ ಎತ್ತಿದರೆ ಮುಂದೆ ಸರಿಯಾಗಬಹುದು ಎಂಬುದು ಶಾಸಕರೊಬ್ಬರ ಅಭಿಪ್ರಾಯ. ಉಮೇಶ್ ಕತ್ತಿಗೆ ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗಬಹುದು, ಆದರೆ ಪಕ್ಷಕ್ಕೆ ಅವರ ಕೊಡುಗೆ ಏನು? ಅವರ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವವನ್ನೂ ಆಲೋಚಿಸಬೇಕಾಗುತ್ತದೆ. ವೈಯಕ್ತಿಕ ವರ್ಚಸ್ಸನ್ನೇ ಮುಂದಿಟ್ಟು ಶಾಸಕರಾಗುತ್ತಾರೆ, ಪಕ್ಷವನ್ನು ಅವರ ಕ್ಷೇತ್ರದಲ್ಲಿ ಬೆಳೆಸುವುದೂ ಇಲ್ಲ. ಪಕ್ಷ ಸಂಘಟನೆಗೆ, ಪಕ್ಷದ ವೇದಿಕೆಯಲ್ಲಿ ಅವರು ಮುಖ್ಯವಾಗುವುದೇ ಇಲ್ಲ. ಅಂಥವರಿಗೆ ಮಣೆ ಹಾಕುತ್ತಾ ಹೋದರೆ ಪಕ್ಷಕ್ಕೆ ದುಡಿದವರು ದುಡಿಯುತ್ತಲೇ ಇರಬೇಕೆಂದು ದ.ಕನ್ನಡ ಭಾಗದ ಪ್ರಭಾವಿ ಶಾಸಕರೊಬ್ಬರ ಬೇಸರದ ಮಾತು. ಕಾಂಗ್ರೆಸ್​ನಲ್ಲಿ ಕಾಣಿಸಿಕೊಂಡ ವಲಸಿಗರ ಸೋಂಕು, ಬಿಜೆಪಿಗೂ ಸೋಕಿದ್ದು ಪಕ್ಷದಲ್ಲಿ ಗುಂಪುಗಾರಿಕೆ ಗೂಡುಕಟ್ಟುವ ವಾತಾವರಣ ಸೃಷ್ಟಿಯಾಗುತ್ತಿದೆ.
ಕೃಪೆ:ವಿಜಯವಾಣಿ

ಕಾಂಗ್ರೆಸ್ ನಂತರ ಬಿಜೆಪಿಗೂ ಜನತಾ ಪರಿವಾರ ಕಸಿವಿಸಿ
after-congress-in-bjp-immigrants-vs-aboriginal-war-is-start

website developers in mysore